ADVERTISEMENT

ಗದಗ |ರಾಷ್ಟ್ರೀಯ ಲೋಕ ಅದಾಲತ್‌: 23,420 ಪ್ರಕರಣಗಳು ರಾಜಿ ಸಂಧಾನದಲ್ಲಿ ಇತ್ಯರ್ಥ

ಗದಗ ಜಿಲ್ಲೆಯಲ್ಲಿ ನಡೆದ ಲೋಕ ಅದಾಲತ್‍ನಲ್ಲಿ 16 ಜೋಡಿಗಳ ಪುನರ್ಮಿಲನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 15:19 IST
Last Updated 20 ಮಾರ್ಚ್ 2024, 15:19 IST
ಗದಗ ನಗರದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಒಂಬತ್ತು ಜೋಡಿಗಳನ್ನು ಮತ್ತೇ ಒಂದುಗೂಡಿಸಲಾಯಿತು
ಗದಗ ನಗರದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಒಂಬತ್ತು ಜೋಡಿಗಳನ್ನು ಮತ್ತೇ ಒಂದುಗೂಡಿಸಲಾಯಿತು   

ಗದಗ: ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 23,420 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಸವರಾಜ ತಿಳಿಸಿದ್ದಾರೆ.

ರಾಷ್ಟ್ರೀಯ ಲೋಕ ಅದಾಲತ್‌ಗಾಗಿ ಜಿಲ್ಲೆಯಲ್ಲಿ ಒಟ್ಟು 15 ಬೆಂಚ್‍ಗಳನ್ನು ರಚಿಸಲಾಗಿತ್ತು. 2,033 ಚಾಲ್ತಿ ಪ್ರಕರಣಗಳನ್ನು ಹಾಗೂ 21,387 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.

ಇತ್ಯರ್ಥಗೊಂಡ ಪ್ರಕರಣಗಳಲ್ಲಿ 8 ಮೋಟಾರು ವಾಹನ ಅಪಘಾತ ಪ್ರಕರಣಗಳು, 105 ಚೆಕ್‍ಬೌನ್ಸ್ ಪ್ರಕರಣಗಳು, 40 ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು, 307 ಅಸಲು ದಾವೆ ಪ್ರಕರಣಗಳು, 374 ಬ್ಯಾಂಕ್ ಹಾಗೂ ಹಣ ವಸೂಲಾತಿ ಪ್ರಕರಣಗಳು, 24 ವೈವಾಹಿಕ ಪ್ರಕರಣಗಳು, 37 ವಿದ್ಯುಚ್ಛಕ್ತಿ ಪ್ರಕರಣಗಳು ಸೇರಿದಂತೆ ಒಟ್ಟು 2,033 ಚಾಲ್ತಿ ಪ್ರಕರಣಗಳನ್ನು ಒಟ್ಟು ₹48,13,61,553 ಪರಿಹಾರ ಒದಗಿಸುವುದರ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಅದೇ ರೀತಿ, ವ್ಯಾಜ್ಯಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ಬ್ಯಾಂಕ್‌ಗಳ ಪ್ರಕರಣಗಳು, ಬಿಎಸ್‍ಎನ್‍ಎಲ್, ಕಂದಾಯ ಅದಾಲತ್ ಪ್ರಕರಣಗಳು ಸೇರಿದಂತೆ ಒಟ್ಟು 21,387 ವ್ಯಾಜ್ಯಪೂರ್ವ ಪ್ರಕರಣಗಳನ್ನು ₹5,27,49,628ಕ್ಕೆ ರಾಜಿ ಸಂಧಾನ ಮಾಡಲಾಗಿದೆ ಎಂದು ತಿಳಿಸಿದರು.

ವಿಶೇಷವಾಗಿ ಗದುಗಿನ ಪ್ರಧಾನ ಕೌಟುಂಬಿಕ ನ್ಯಾಯಾಲಯದಲ್ಲಿ ಹಾಗೂ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ 9 ಪ್ರಕರಣಗಳಲ್ಲಿ ದಂಪತಿಯನ್ನು ಪುನಃ ಒಂದುಗೂಡಿಸಲಾಯಿತು. ಅದೇ ರೀತಿ, ರೋಣ ನ್ಯಾಯಾಲಯದಲ್ಲಿ ಮೂರು ಜೋಡಿ, ಲಕ್ಷ್ಮೇಶ್ವರದಲ್ಲಿ ಎರಡು, ಮುಂಡರಗಿ ನ್ಯಾಯಾಲಯದಲ್ಲಿ ಎರಡು ಜೋಡಿಗಳನ್ನು ಮತ್ತೆ ಒಂದುಗೂಡಿಸಿ ಕಳುಹಿಸಿಕೊಡಲಾಯಿತು. ಒಟ್ಟು 16 ಜೋಡಿ ದಂಪತಿ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದುಗೂಡಿದ್ದು ವಿಶೇಷವಾಗಿದೆ ಎಂದು ಅವರು ತಿಳಿಸಿದ್ದಾರೆ.

ಗದಗ ನಗರದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರ ಎಸ್. ಶೆಟ್ಟಿ, ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಖಾದರಸಾಬ ಎಚ್. ಬೆನಕಟ್ಟಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ಪ್ರೀತಿ ಸದ್ಗುರು ಸದರಜೋಶಿ, ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಪ್ರಕಾಶ ಸಿ. ಕುರುಬೆಟ್, ಪ್ರಧಾನ ದಿವಾಣಿ ನ್ಯಾಯಾಧೀಶ ಅರುಣ ಚೌಗಲೆ, ಜೆಎಂಎಫ್‍ಸಿ ಒಂದನೇ ನ್ಯಾಯಾಲಯದ ನ್ಯಾಯಾಧೀಶರಾದ ಪುಷ್ಪಾ ಜೋಗೋಜಿ, ಜೆಎಂಎಫ್‍ಸಿ 2ನೇ ನ್ಯಾಯಾಲಯದ ನ್ಯಾಯಾಧೀಶರಾದ ಬೀರಪ್ಪ ಕಾಂಬಳೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ  ಎಂ.ಐ. ಹಿರೇಮನಿಪಾಟೀಲ, ಉಪಾಧ್ಯಕ್ಷ ಎ.ಎಂ. ಹದ್ಲಿ, ಪ್ರಧಾನ ಕಾರ್ಯದರ್ಶಿ ಬಿ.ಎಚ್. ಮಾಡಲಗೇರಿ, ಜಂಟಿ ಕಾರ್ಯದರ್ಶಿ ಪಿ.ಬಿ. ಕಣಗಿನಹಾಳ, ಖಜಾಂಚಿ ವಿ.ಎಚ್. ಮೇರವಾಡೆ, ಸರ್ಕಾರಿ ಅಭಿಯೋಜಕರಾದ ಸವಿತಾ ಎಂ.ಶಿಗ್ಲಿ, ಜಿಲ್ಲಾ ಸರ್ಕಾರಿ ವಕೀಲರಾದ ಎಂ.ಎಂ.ಕುಕನೂರ, ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ಜಿ.ಬಿ. ನೀಲರಡ್ಡಿ ಭಾಗವಹಿಸಿದ್ದರು.

ರಾಷ್ಟ್ರೀಯ ಲೋಕ ಅದಾಲತ್‍ಗೆ ಸಹಕಾರ ನೀಡಿದ ವಕೀಲರು, ಪಕ್ಷಗಾರರು, ಜಿಲ್ಲೆಯ ಎಲ್ಲಾ ನ್ಯಾಯಾಧೀಶರಿಗೆ, ಸಿಬ್ಬಂದಿವರ್ಗದವರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಗುರುಪ್ರಸಾದ ಅಭಿನಂದನೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.