ADVERTISEMENT

ಗ್ರಾಮೀಣರಿಗೆ ಕಾನೂನು ಅರಿವು ಮೂಡಿಸಿ: ನ್ಯಾಯಾಧೀಶೆ ಎಸ್. ಮಹಾಲಕ್ಷ್ಮಿ ನೇರಳೆ

ಆಗಸ್ಟ್‌ 14ರಂದು ಮೆಗಾ ಲೋಕ ಅದಾಲತ್‌

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 4:35 IST
Last Updated 11 ಆಗಸ್ಟ್ 2021, 4:35 IST
ಗದಗ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಕಾನೂನು ಅರಿವು, ಲೋಕ್‌ ಅದಾಲತ್‌ ಕುರಿತ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್. ಮಹಾಲಕ್ಷ್ಮಿ ನೇರಳೆ ಉದ್ಘಾಟಿಸಿದರು
ಗದಗ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಕಾನೂನು ಅರಿವು, ಲೋಕ್‌ ಅದಾಲತ್‌ ಕುರಿತ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್. ಮಹಾಲಕ್ಷ್ಮಿ ನೇರಳೆ ಉದ್ಘಾಟಿಸಿದರು   

ಗದಗ: ‘ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಲು ಲೋಕ್‌ ಅದಾಲತ್‌ನಲ್ಲಿ ಅವಕಾಶವಿದ್ದು, ಈ ಕುರಿತು ಹೆಚ್ಚಿನ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ’ ಎಂದು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್. ಮಹಾಲಕ್ಷ್ಮಿ ನೇರಳೆ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಕಾನೂನು ಅರಿವು, ನಾಗರಿಕರಿಗೆ ಸಿಗುವ ಸೌಲಭ್ಯಗಳು ಹಾಗೂ ಲೋಕ್‌ ಅದಾಲತ್‌ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಆ.14ರಂದು ಜಿಲ್ಲಾ ಕೇಂದ್ರವೂ ಸೇರಿದಂತೆ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಲೋಕ್‌ ಅದಾಲತ್‌ ನಡೆಯಲಿದೆ. ನ್ಯಾಯಾಲಯಗಳಲ್ಲಿ ವರ್ಷಾನುಗಟ್ಟಲೆ ಬಾಕಿ ಉಳಿದಿರುವ ಪ್ರಕರಣಗಳನ್ನು ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು. ಇದರಿಂದ ಹಣ ಹಾಗೂ ಅಮೂಲ್ಯವಾದ ಸಮಯದ ಉಳಿತಾಯವಾಗಲಿದೆ. ಈ ಕುರಿತು ಸಾರ್ವಜನಿಕರಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ’ ಎಂದು ಹೇಳಿದರು.

ADVERTISEMENT

‘ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ಅರಿವು ಮೂಡಿಸಬೇಕಾದುದುನಮ್ಮೆಲ್ಲರ ಕರ್ತವ್ಯ. ಲೋಕ್‌ ಅದಲಾತ್ ಮೂಲಕ ರಾಜಿ ಸಂಧಾನ ಮಾಡಿಕೊಳ್ಳಬಹುದಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡಲಾಗಿದೆ. ಆದರೆ, ಕೆಲವರು ಭಾಗಿಯಾಗಲು ಹಿಂದೇಟು ಹಾಕುತ್ತಿದ್ದಾರೆ. ಇಂತವರನ್ನು ಗುರುತಿಸಿ ತಿಳಿವಳಿಕೆ ನೀಡಬೇಕು’ ಎಂದು ಹೇಳಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಹಾಗೂ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ರಾಷ್ಟ್ರಾಧ್ಯಕ್ಷ ಡಾ. ಮೋಹನ್ ರಾವ್ ನಾಲ್ವಡೆ, ಮಾನವ ಹಕ್ಕುಗಳು ಹಾಗೂ ಸಂಬಂಧಗಳನ್ನು ಉಳಿಸುವುದು ಸಂಸ್ಥೆಯ ಮುಖ್ಯ ಉದ್ದೇಶ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅರಿವು ಮೂಡಿಸುವ ಉದ್ದೇಶ ಎಂದು ಹೇಳಿದರು.

‘ನ್ಯಾಯಾಲಯಗಳಲ್ಲಿ ಚಾಲ್ತಿ ಇರುವ ಪ್ರಕರಣಗಳು ಹಾಗೂ ಇನ್ನೂ ನ್ಯಾಯಾಲಯಕ್ಕೆ ದಾಖಲಿಸದೇ ಇರುವ ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳೆಂದು ಪರಿಗಣಿಸಿ ರಾಜಿ ಆಗಬಹುದಾದ ಎಲ್ಲಾ ಪ್ರಕರಣಗಳನ್ನು ಅದಾಲತ್‌ ಮೂಲಕ ಶೀಘ್ರವಾಗಿ ಇತ್ಯರ್ಥಗೊಳಿಸಬಹುದಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಎಸ್.ಜಿ.ಸಲಗರೆ ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ವಿ.ವಿ. ಪಾಟೀಲ ಇದ್ದರು.

‘ಭ್ರಷ್ಟಾಚಾರ ನಿಯಂತ್ರಣಕ್ಕೆ ಸಹಕರಿಸಿ’

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ. ಮೌಲ್ವಿ, ಬಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡಲು ಮುಂದಾಗಬೇಕು ಎಂದರು.

‘ಸಮಾಜದಲ್ಲಿ ಕಾನೂನಿನ ಅರಿವು ಮೂಡಿಸುವ ಜತೆಗೆ ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಹಾಗೂ ಭ್ರಷ್ಟಾಚಾರ ನಿಯಂತ್ರಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ’ ಎಂದು ಹೇಳಿದರು.

***

ಸಮಾಜದಲ್ಲಿ ಇಂದಿಗೂ ಭ್ರಷ್ಟಾಚಾರವಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಇದರ ವಿರುದ್ಧ ಪ್ರತಿಭಟಿಸಲು ಕಾನೂನು ಅರಿವು ಅಗತ್ಯ

- ಡಾ. ಮೋಹನ್ ರಾವ್ ನಾಲ್ವಡೆ, ಭ್ರಷ್ಟಾಚಾರ ವಿರೋಧಿ ಸಂಸ್ಥೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.