ADVERTISEMENT

ಗದಗ | ಲೋಕಾಯುಕ್ತ ದಾಳಿ: ಆದಾಯಕ್ಕಿಂತ ಶೇ 145 ಹೆಚ್ಚು ಆಸ್ತಿ ಪತ್ತೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:03 IST
Last Updated 26 ನವೆಂಬರ್ 2025, 5:03 IST
ಹಿರಿಯ ಪಶುವೈದ್ಯ ಪರೀಕ್ಷಕ ಸತೀಶ್‌ ಕಟ್ಟಿಮನಿ ಮನೆಯಲ್ಲಿ ಪತ್ತೆಯಾದ ಚಿನ್ನ ಬೆಳ್ಳಿ ಆಭರಣಗಳು ಹಾಗೂ ನಗದು
ಹಿರಿಯ ಪಶುವೈದ್ಯ ಪರೀಕ್ಷಕ ಸತೀಶ್‌ ಕಟ್ಟಿಮನಿ ಮನೆಯಲ್ಲಿ ಪತ್ತೆಯಾದ ಚಿನ್ನ ಬೆಳ್ಳಿ ಆಭರಣಗಳು ಹಾಗೂ ನಗದು   

ಗದಗ: ತಾಲ್ಲೂಕಿನ ಹುಯಿಲಗೋಳದ ಪ್ರಾಥಮಿಕ ಪಶುವೈದ್ಯಕೀಯ ಕ್ಲಿನಿಕ್‌ನ ಹಿರಿಯ ಪಶುವೈದ್ಯ ಪರೀಕ್ಷಕ ಸತೀಶ್‌ ಕಟ್ಟಿಮನಿಗೆ ಸೇರಿದ ಐದು ಸ್ಥಳಗಳಲ್ಲಿ ಏಕಕಾಲಕ್ಕೆ ಮಂಗಳವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಆದಾಯಕ್ಕಿಂತ ಶೇ 145 ಹೆಚ್ಚು ಆಸ್ತಿ ಸಂಪಾದನೆ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ.

ದಾಳಿ ವೇಳೆ ಎರಡು ಮನೆಗಳು, ನಾಲ್ಕು ಎಕರೆ ಜಮೀನಿನ ದಾಖಲೆ ಪತ್ರಗಳು ಸಿಕ್ಕಿವೆ. ಸ್ಥಿರಾಸ್ತಿಗಳ ಒಟ್ಟು ಮೌಲ್ಯ ₹55.50 ಲಕ್ಷ ಎಂದು ಲೋಕಾಯಕ್ತ ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ, ಸತೀಶ್‌ ಕಟ್ಟಿಮನಿಗೆ ಸೇರಿದ ಮನೆಯಲ್ಲಿ ₹17.16 ಲಕ್ಷ ನಗದು, ₹72.11 ಲಕ್ಷ ಮೌಲ್ಯದ 705 ಗ್ರಾಮ ಚಿನ್ನ, ₹2.68 ಲಕ್ಷ ಮೌಲ್ಯದ 1.871 ಕೆ.ಜಿ. ಬೆಳ್ಳಿ, ₹25 ಲಕ್ಷ ಮೌಲ್ಯದ ಎರಡು ಕಾರು, ನಾಲ್ಕು ಬೈಕ್‌ಗಳು ಸೇರಿದಂತೆ ಒಟ್ಟು ₹1.16 ಕೋಟಿ ಮೌಲ್ಯದ ಚರಾಸ್ತಿ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.

ADVERTISEMENT

ಜತೆಗೆ ಎಸ್‌ಬಿ ಖಾತೆಯಲ್ಲಿ ₹36.42 ಲಕ್ಷ ನಗದು, ₹16,136 ಎಫ್‌ಡಿ, ₹2 ಸಾವಿರ ಮೌಲ್ಯದ ಷೇರು ಸೇರಿದಂತೆ ಒಟ್ಟು ₹36.60 ಲಕ್ಷ ಇರುವುದನ್ನು ಪತ್ತೆ ಮಾಡಿದ್ದಾರೆ.

ಸತೀಶ್‌ ಕಟ್ಟಿಮನಿ ಈ ಹಿಂದೆ 10 ಸೈಟುಗಳನ್ನು ಖರೀದಿಸಿ, ಅಲ್ಲಿ 10 ಮನೆಗಳನ್ನು ನಿರ್ಮಿಸಿ ಬಳಿಕ ಮಾರಾಟ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ನಮೂದಿಸಿದ್ದಾರೆ.

ಗದಗ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಪ‍್ರಕರಣ ದಾಖಲಾಗಿದೆ.

ಲೋಕಾಯುಕ್ತ ಡಿವೈಎಸ್‌ಪಿ ವಿಜಯ್ ಬಿರಾದಾರ, ಇನ್‌ಸ್ಪೆಕ್ಟರ್ ಪರಮೇಶ್ವರ ಕೌಟಗಿ ನೇತೃತ್ವದಲ್ಲಿ ದಾಳಿ ನಡೆದಿದ್ದು ಬೆಳಗಾವಿ, ಬಾಗಲಕೋಟೆ, ಗದಗ, ವಿಜಯಪುರ ಜಿಲ್ಲೆಯಿಂದ ಬಂದ ಅಧಿಕಾರಿಗಳಿಂದ ಪರಿಶೀಲನೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.