ADVERTISEMENT

ಗದಗ| ಮಾಚಿದೇವರ ವಚನ ಸಂದೇಶ ಸಾರ್ವಕಾಲಿಕ: ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 6:08 IST
Last Updated 3 ಫೆಬ್ರುವರಿ 2026, 6:08 IST
ಗದಗ ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು
ಗದಗ ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು   

ಗದಗ: ‘ಮಡಿವಾಳ ಮಾಚಿದೇವರು ಬಸವಣ್ಣನವರ ತತ್ವಗಳಿಂದ ಪ್ರೇರಿತರಾದವರು. ಸಮಾಜದಲ್ಲಿನ ಸಮಾನತೆಗಾಗಿ ವಚನಗಳ ಮೂಲಕ ಹೋರಾಡಿದರು. ಇವರ ವಚನಗಳಲ್ಲಿನ ಸಂದೇಶಗಳು ಸಾರ್ವಕಾಲಿಕವಾಗಿವೆ’ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮಡಿವಾಳ ಮಾಚಿದೇವರು 12ನೇ ಶತಮಾನದ ಪ್ರಸಿದ್ಧ ವಚನಕಾರರು. ಶರಣರ ಬಟ್ಟೆಗಳನ್ನು ಮಡಿ ಮಾಡುವುದು ಇವರ ಕಾಯಕವಾಗಿತ್ತು. ಕಾಯಕನಿಷ್ಠೆ, ಸದಾಚಾರವುಳ್ಳವರ ಶಿವಶರಣರ ಬಟ್ಟೆಗಳನ್ನು ಮಾತ್ರ ಮಡಿ ಮಾಡುವ ನಿಷ್ಠುರ ವಚನಕಾರರಾಗಿದ್ದರು’ ಎಂದು ಹೇಳಿದರು.

ಶಿರಗುಂಪಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸುಜಾತಾ ಮಡಿವಾಳರ ಉಪನ್ಯಾಸ ನೀಡಿ, ‘ಮಡಿವಾಳ ಮಾಚಿದೇವರು ನಿಷ್ಠೆಯ ಶರಣರಾಗಿದ್ದರು. ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿಯಲ್ಲಿ ಜನಿಸಿದ ಇವರು, ಪರುವತಯ್ಯ - ಸುಜ್ಞಾನವ್ವ ದಂಪತಿಯ ಪುತ್ರರು. ಕಲ್ಯಾಣ ಇವರ ಕಾರ್ಯಕ್ಷೇತ್ರವಾಗಿತ್ತು. ಆರಾಧ್ಯದೈವ ಕಲ್ಲಿನಾಥನಾಗಿದ್ದು ಕಾವ್ಯ ಪುರಾಣಗಳಲ್ಲಿ ಇವರನ್ನು ವೀರಭದ್ರನ ಅವತಾರವೆಂದು ಬಣ್ಣಿಸಲಾಗಿದೆ. ಶರಣರ ಬಟ್ಟೆಗಳನ್ನು ಶುಚಿ ಮಾಡುವುದು ಇವರ ಕಾಯಕವಾಗಿತ್ತು’ ಎಂದು ತಿಳಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು.

ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್‌ ಬಬರ್ಜಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಡಿವೈಎಸ್‌ಪಿ ವಿದ್ಯಾಧರ ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ, ರಾಜು ಕಂಠಿಗೊಣ್ಣವರ, ಶ್ರೀಧರ ಚಿನಗುಂಡಿ ಸಮಾಜದ ಹಿರಿಯರು ಇದ್ದರು.

ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.

ಮಡಿವಾಳ ಮಾಚಿದೇವರು ತಮ್ಮ ಕಾಯಕ ನಿಷ್ಠೆಯಿಂದ ಹಾಗೂ ವಚನಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಸುಧಾರಣೆಗೆ ಶ್ರಮಿಸಿದರು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ಸಿ.ಎನ್‌.ಶ್ರೀಧರ್‌ ಜಿಲ್ಲಾಧಿಕಾರಿ
ಮಡಿವಾಳ ಮಾಚಿದೇವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಅಸ್ಪೃಶ್ಯತೆ ಅಂಧಕಾರ ಮೂಢನಂಬಿಕೆ ಅನಾಚಾರಗಳನ್ನು ಹೋಗಲಾಡಿಸಿ ಸಮಾಜ ಸುಧಾರಣೆಗಾಗಿ ಶ್ರಮಿಸಿದರು
ಸುಜಾತಾ ಮಡಿವಾಳರ ಶಿರಗುಂಪಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.