ADVERTISEMENT

ಗದಗ | ಮಹಾಶಿವರಾತ್ರಿ: ಎಲ್ಲೆಲ್ಲೂ ಶಿವ ನಾಮ ಸ್ಮರಣೆ

ಅಭಿಷೇಕ ಪ್ರಿಯ ಶಿವನಿಗೆ ರುದ್ರಾಭಿಷೇಕ; ಉಪವಾಸ ಮಾಡಿ ಭಕ್ತಿ ಸಮರ್ಪಿಸಿದ ಜನರು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 7:35 IST
Last Updated 16 ಫೆಬ್ರುವರಿ 2026, 7:35 IST
ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಶಿವನ ದರ್ಶನ ಪಡೆದ ಭಕ್ತರು
ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಶಿವನ ದರ್ಶನ ಪಡೆದ ಭಕ್ತರು   

ಗದಗ: ಶಿವ ಎಂದರೆ ಮಂಗಳಕಾರಕ. ಇಡೀ ಸೃಷ್ಟಿಯೇ ಶಿವನ ದೇಹ. ಜಗತ್ತಿನ ಸಕಲ ಚರಾಚರದಲ್ಲೂ ಶಿವ ಇದ್ದಾನೆ. ಇಂತಹ ಶಿವನನ್ನು ಆರಾಧಿಸಲು ಇರುವ ದಿನವೇ ಶಿವರಾತ್ರಿ. ಭಕ್ತರನ್ನು ರಕ್ಷಿಸಿ, ಉದ್ಧರಿಸುವ ಶಿವನಿಗೆ ಅವಳಿ ನಗರದ ಜನರು ಭಾನುವಾರ ಶಿವ ದೇಗುಲಗಳಿಗೆ ತೆರಳಿ ಭಕ್ತಿ ಸಮರ್ಪಿಸಿದರು. ಅಭಿಷೇಕ ಪ್ರಿಯನಾದ ಶಿವನಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಎಳನೀರು ಅಭಿಷೇಕ ಸೇರಿದಂತೆ ಸಹಸ್ರ ಬಿಲ್ವಾರ್ಚನೆ ಸಲ್ಲಿಸಿ ಭಕ್ತಿ ಮೆರೆದರು.

ನಗರದ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಆಚರಣೆ ಸಂಭ್ರಮ ಮೇರೆ ಮೀರಿತ್ತು. ಜನರು ಗಂಟೆಗಟ್ಟಲೆ ಕಾದು ನಿಂತು, ತ್ರಿಕೂಟೇಶ್ವರನ ದರ್ಶನ ಪಡೆದರು. ಶಿವನನ್ನು ಕಣ್ತುಂಬಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು.

ದೇವಸ್ಥಾನಕ್ಕೆ ಬಂದ ಭಕ್ತರಿಗೆ ಸರದಿಯಲ್ಲಿ ನಿಲ್ಲಲು ಬಿಸಿಲು ತಾಗದಂತೆ ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಸಾಲಾಗಿ ತೆರಳಲು ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ದಣಿವಾರಿಸಿಕೊಳ್ಳಲು ಲಸ್ಸಿ, ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು. ದೇವರ ದರ್ಶನ ಮುಗಿಸಿ ಬಂದವರಿಗೆ ಹಾಲು, ಜೇನಿನ ತೀರ್ಥ, ತುಳಸಿ ಸಕ್ಕರೆ ಮಿಶ್ರಿತ ನೀರನ್ನು ತೀರ್ಥವಾಗಿ ವಿತರಿಸಲಾಯಿತು. ಜತೆಗೆ ಕಲ್ಲುಸಕ್ಕರೆ ಮತ್ತು ಕರ್ಜೂರವನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಕೊಡಲಾಯಿತು.

ADVERTISEMENT

ಅದೇರೀತಿ, ನಗರದ ವಿವಿಧ ಭಾಗಗಳಲ್ಲಿ ಇರುವ ಶಿವನ ದೇವಾಲಯಗಳಲ್ಲಿ ಪೂಜಾರಾತಿಗಳು ನಡೆದವು. ಎಲ್ಲ ದೇವಸ್ಥಾನಗಳಲ್ಲಿ ಜನದಟ್ಟಣೆ ಇತ್ತು. ಭಕ್ತಿಯ ಪ್ರವಾಹವಿತ್ತು.

ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಕಾಶಿ ವಿಶ್ವನಾಥನಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೂ ಭಕ್ತರು ದರ್ಶನ ಪಡೆದರು. ಇಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ ‘ಜೀವನ ದರ್ಶನ’ ಮಾಲಿಕೆ 56ನೇ ಮಾಸಿಕ ಕಾರ್ಯಕ್ರಮ ನಡೆಯಿತು. ಬಳಿಕ ಮಕ್ಕಳು ಹಾಗೂ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಭಾವ, ಬುದ್ಧಿಗಳ ಎಚ್ಚರ ಸೂಚಕವೇ ಶಿವರಾತ್ರಿ ಜಾಗರಣೆ. ಭಾನುವಾರ ಬೆಳಿಗ್ಗೆ ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ ದೇವಸ್ಥಾನಕ್ಕೆ ತೆರಳಿ ಶಿವ ದರ್ಶನ ಮಾಡಿದ ಜನರು, ಸಂಜೆವರೆಗೆ ಉಪವಾಸ ನಡೆಸಿದರು. ಬಳಿಕ ರಾತ್ರಿ ಹಣ್ಣು–ಎಳನೀರು, ಲಘು ಉಪಾಹಾರ ಸೇವಿಸಿ, ಸೋಮವಾರ ಬೆಳಿಗ್ಗೆವರೆಗೆ ಶಿವನಾಮ ಸ್ಮರಣೆ ಮಾಡುತ್ತ ಜಾಗರಣೆ ಮಾಡಿ ಶಿವರಾತ್ರಿಯನ್ನು ಸಂಪನ್ನಗೊಳಿಸಿದರು.

ತ್ರಿಕೂಟೇಶ್ವರ ದೇವರು
ಶಿವರಾತ್ರಿ ಅಂಗವಾಗಿ ಶಿವನ ದಿರಿಸಿನಲ್ಲಿ ಗಮನ ಸೆಳೆದ ಪುಟಾಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.