ADVERTISEMENT

ಮಹದಾಯಿಗೆ ವನ್ಯಜೀವಿ ಅನುಮೋದನೆ: ಕೇಂದ್ರಕ್ಕೆ ಒತ್ತಾಯ

ಭೂಪೇಂದರ್‌ ಯಾದವ್‌ ಭೇಟಿಯಾದ ಡಿಕೆಶಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2024, 16:32 IST
Last Updated 27 ನವೆಂಬರ್ 2024, 16:32 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ನವದೆಹಲಿ: ‘ಕಳಸಾ ಬಂಡೂರಿ ನಾಲೆ ಯೋಜನೆ ವಿಚಾರದಲ್ಲಿ ಮಧ್ಯಪ್ರವೇಶಿಸಿ ಅಗತ್ಯವಿರುವ ಅರಣ್ಯ ಹಾಗೂ ವನ್ಯಜೀವಿ ಮಂಡಳಿ ಅನುಮತಿ ಕೊಡಿಸಬೇಕು’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರಿಗೆ ಮನವಿ ಮಾಡಿದರು. 

ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಬುಧವಾರ ಭೇಟಿ ಮಾಡಿದ ಶಿವಕುಮಾರ್ ಅವರು ಈ ಬಗ್ಗೆ ಮನವಿ ಪತ್ರ ಸಲ್ಲಿಸಿದರು.

‘ಅಕ್ಟೋಬರ್‌ 9ರಂದು ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಕರ್ನಾಟಕದ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿತ್ತು. ಈ ವಿಚಾರವಾಗಿ ಇರುವ ಕಾನೂನು ಸಮಸ್ಯೆಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ರಾಜ್ಯವು ಅಕ್ಟೋಬರ್‌ 10 ಹಾಗೂ 16ರಂದು ಕೇಂದ್ರಕ್ಕೆ ವಿವರವಾದ ಸ್ಪಷ್ಟನೆ ನೀಡಿದೆ’ ಎಂದು ಅವರು ತಿಳಿಸಿದರು. 

ADVERTISEMENT

ಕಳಸಾ ನಾಲೆ ಯೋಜನೆಗೆ ಕಾಳಿ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಣಾ ಪ್ರದೇಶದಲ್ಲಿ 10.68 ಹೆಕ್ಟೇರ್ ಅರಣ್ಯ ಅಗತ್ಯವಿದೆ. ಈ ಯೋಜನೆಯ ಮೂಲಕ ಕಾಡುಪ್ರಾಣಿಗಳಿಗೆ ಅಗತ್ಯ ನೀರು ಪೂರೈಸಲಾಗುತ್ತದೆ. ಹೀಗಾಗಿ ಈ ಯೋಜನೆಗೆ ಅನುಮತಿ ನೀಡಬೇಕು ಎಂದು ಕರ್ನಾಟಕದ ವನ್ಯಜೀವಿ ಸಂರಕ್ಷಣಾ ಮಂಡಳಿಯು ಸ್ಥಾಯಿ ಸಮಿತಿಗೆ ಮಾಹಿತಿ ನೀಡಿತ್ತು. ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಸ್ಥಾಯಿ ಸಮಿತಿಯು ಕಾನೂನು ವಿಚಾರಗಳ ಬಗ್ಗೆ ಸ್ಪಷ್ಟನೆ ಕೋರಿತ್ತು. ಜತೆಗೆ ಪ್ರಾಧಿಕಾರದ ಅಭಿಪ್ರಾಯ ಸಲ್ಲಿಕೆಗೆ ಸೂಚಿಸಿತ್ತು. ಸ್ಥಾಯಿ ಸಮಿತಿಯ ಈ ಎಲ್ಲ ಮಾರ್ಗದರ್ಶನಗಳನ್ನು ಕರ್ನಾಟಕ ರಾಜ್ಯ ಪಾಲಿಸಿದೆ. ಆದರೂ ಈ ಯೋಜನೆಗೆ ಅನುಮತಿ ನೀಡುವುದು ವಿಳಂಬವಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. 

‘ಕಳಸಾ ನಾಲೆ ಯೋಜನೆಗೆ ಅಗತ್ಯವಿರುವ ಅರಣ್ಯ ಪ್ರದೇಶ ಭೂಮಿಯ ಪ್ರಮಾಣವನ್ನು 258 ಹೆಕ್ಟೇರ್ ಪ್ರದೇಶದಿಂದ 26.9 ಹೆಕ್ಟೇರ್ ಪ್ರದೇಶಕ್ಕೆ ಇಳಿಸಲಾಗಿದೆ. ಬಂಡೂರಿ ನಾಲೆ ಯೋಜನೆಗೆ ಅಗತ್ಯವಿರುವ ಅರಣ್ಯ ಪ್ರದೇಶ ಭೂಮಿಯನ್ನು 243 ಹೆಕ್ಟೇರ್‌ನಿಂದ 28.44 ಹೆಕ್ಟೇರ್‌ಗೆ ಕಡಿಮೆ ಮಾಡಲಾಗಿದೆ. ಆ ಮೂಲಕ ಪರಿಸರ ಸಂರಕ್ಷಣೆಯಲ್ಲಿ ರಾಜ್ಯ ತನ್ನ ಬದ್ಧತೆ ಪ್ರದರ್ಶಿಸಿದೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರವು ವಿಳಂಬ ಮಾಡದೇ ಈ ಯೋಜನೆಗೆ ಅನುಮತಿ ನೀಡಬೇಕು’ ಎಂದು ಅವರು ಆಗ್ರಹಿಸಿದರು. 

ಬಳಿಕ ಆಹಾರ ಸಚಿವ ‍‍ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾದ ಶಿವಕುಮಾರ್ ಅವರು ನೀರಾವರಿ ಯೋಜನೆಗಳಿಗೆ ಶೀಘ್ರ ಅನುಮೋದನೆ ಕೊಡಿಸುವಂತೆ ಕೋರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.