ADVERTISEMENT

ಮೆಕ್ಕೆಜೋಳ | ಗದಗದಲ್ಲಿ ಖರೀದಿ ಆರಂಭ: 17 ದಿನಗಳ ರೈತರ ಹೋರಾಟ ಅಂತ್ಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 18:18 IST
Last Updated 2 ಡಿಸೆಂಬರ್ 2025, 18:18 IST
ಲಕ್ಷ್ಮೇಶ್ವರ ರೈತರು ಮಂಗಳವಾರ ಟಿಎಪಿಸಿಎಂಎಸ್ ಕಚೇರಿಯಲ್ಲಿ ಬೆಂಬಲ ಬೆಲೆ ಯೋಜನೆ ಅಡಿ ಮೆಕ್ಕೆಜೋಳ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಸಿದರು
ಲಕ್ಷ್ಮೇಶ್ವರ ರೈತರು ಮಂಗಳವಾರ ಟಿಎಪಿಸಿಎಂಎಸ್ ಕಚೇರಿಯಲ್ಲಿ ಬೆಂಬಲ ಬೆಲೆ ಯೋಜನೆ ಅಡಿ ಮೆಕ್ಕೆಜೋಳ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಸಿದರು   

ಲಕ್ಷ್ಮೇಶ್ವರ/ಹಾವೇರಿ: ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಗದಗ ಮತ್ತು ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ರೈತರ ಅನಿರ್ದಿಷ್ಟಾವಧಿ ಧರಣಿ ಸೋಮವಾರ ರಾತ್ರಿ ಅಂತ್ಯಗೊಂಡಿತು.

ಗದಗ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ಕೆಲ ಹೊತ್ತಿನಲ್ಲೇ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಮುಂಡರಗಿ ತಾಲ್ಲೂಕಿನ ರೈತರು ಧರಣಿ ಹಿಂಪಡೆದರು. ಇಲ್ಲಿನ ಶಿಗ್ಲಿ ಕ್ರಾಸ್‌ನಲ್ಲಿ ಅವರು 17 ದಿನಗಳಿಂದ ಹೋರಾಟ ನಡೆಸಿದ್ದರು.

‘ಸದ್ಯ ಒಬ್ಬ ರೈತರಿಂದ ಐದು ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಿಸುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ADVERTISEMENT

‘ರೈತರ ಸುದೀರ್ಘ ಹೊರಾಟಕ್ಕೆ ಜಯ ಸಿಕ್ಕಿದೆ’ ಎಂದು ರೈತ ಮುಖಂಡರಾದ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ರವಿಕಾಂತ ಅಂಗಡಿ ತಿಳಿಸಿದರು.

ಖರೀದಿ ಕೇಂದ್ರ ತೆರೆಯಲು ಜಿಲ್ಲಾಡಳಿತವು ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ರೈತರು ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದರು. ‘ಖರೀದಿ ಕೇಂದ್ರ ತೆರೆಯಲು ಇನ್ನಷ್ಟು ವಿಳಂಬ ಮಾಡಿದ್ದಲ್ಲಿ, ಡಿಸೆಂಬರ್ 8ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಗಂಭೀರ ಸ್ವರೂಪದ ಪ್ರತಿಭಟನೆ ನಡೆಸುತ್ತೇವೆ’ ಎಂದು ರೈತರು ಎಚ್ಚರಿಕೆ ನೀಡಿದರು.

‘ಖರೀದಿ ಕೇಂದ್ರ ತೆರೆಯಲು ಸಿದ್ಧತೆ ನಡೆದಿದೆ. ಖರೀದಿ ಸ್ಥಳ ಹಾಗೂ ಖರೀದಿದಾರರ ಜೊತೆ ಒಪ್ಪಂದ ಮಾಡಿಕೊಂಡು ಸರ್ಕಾರ ನಿಯಮಾವಳಿಯಂತೆ ಖರೀದಿ ಶುರುವಾಗಲಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.