
ಲಕ್ಷ್ಮೇಶ್ವರ: ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಧರಣಿಯು ಗುರುವಾರ ಆರನೇ ದಿನ ಪೂರೈಸಿತು. ಲಕ್ಷ್ಮೇಶ್ವರ ಬಂದ್ ಮಾಡಿದ್ದಲ್ಲದೆ, ರೈತರು ಅರೆಬೆತ್ತಲೆಯಾಗಿ ಮೆರವಣಿಗೆ ನಡೆಸಿದರು.
ಪಟ್ಟಣದ ಪೇಟೆ ಹನುಮಂತದೇವರ ದೇವಸ್ಥಾನದಿಂದ ಸಾವಿರಾರು ಸಂಖ್ಯೆಯ ರೈತರು ಹಲಗೆ, ಭಜನೆ, ಎತ್ತು, ಚಕ್ಕಡಿ ಸಹಿತ ಮೆರವಣಿಗೆ ನಡೆಸಿದರು. ಸರ್ಕಾರದ ಧೋರಣೆ ವಿರುದ್ಧ ಘೋಷಣೆ ಕೂಗುತ್ತ ಶಿಗ್ಲಿ ನಾಕಾ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದವರೆಗೂ ಮೆರವಣಿಗೆ ಸಾಗಿತು.
ಕುಂದಗೋಳ, ಹೂವಿನಶಿಗ್ಲಿ, ಬಟಗುರ್ಕಿ, ಮಳೆಮಲ್ಲಿಕಾರ್ಜುನ ಸ್ವಾಮೀಜಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಹೋರಾಟದ ನೇತೃತ್ವ ವಹಿಸಿದ್ದ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ರವಿಕಾಂತ ಅಂಗಡಿ, ಮಹೇಶ ಹೊಗೆಸೊಪ್ಪಿನ, ಎಂ.ಎಸ್. ದೊಡ್ಡಗೌಡ್ರ, ವೀರಣ್ಣ ಪವಾಡದ, ಸೋಮಣ್ಣ ಡಾಣಗಲ್ಲ, ಬಸಣ್ಣ ಹಂಜಿ, ಶಂಕ್ರಣ್ಣ ಕಾಳೆ, ಟಾಕಪ್ಪ ಸಾತಪುತೆ, ಭಾಗ್ಯಶ್ರೀ ಬಾಬಣ್ಣ ಸೇರಿದಂತೆ ಮೊದಲಾದರು ಹಾಜರಿದ್ದರು.
‘ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ. ಇದೇ ವೇದಿಕೆಯಲ್ಲಿ ಅಹೋರಾತ್ರಿ ಧರಣಿ ಮುಂದುವರಿಯುತ್ತದೆ’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಆಸ್ಪತ್ರೆಗೆ ಸ್ವಾಮೀಜಿ ದಾಖಲು
ರೈತರ ಹೋರಾಟ ಬೆಂಬಲಿಸಿ ನಾಲ್ಕು ದಿನಗಳಿಂದ ಉಪವಾಸ ಕೈಗೊಂಡಿದ್ದ ಆದರಹಳ್ಳಿಯ ಕುಮಾರ ಮಹಾರಾಜರ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿತು. ಅವರನ್ನು ಆಂಬುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.