ADVERTISEMENT

ಲಕ್ಷ್ಮೇಶ್ವರ, ಮುಂಡರಗಿಯಲ್ಲೇ ಸಮಸ್ಯೆ ಯಾಕೆ?: ತರಾಟೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 2:46 IST
Last Updated 23 ಡಿಸೆಂಬರ್ 2025, 2:46 IST
ಮುಂಡರಗಿ ಎಪಿಎಂಸಿ ಆವರಣದಲ್ಲಿರುವ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಭೇಟಿ ನೀಡಿ ಪರಿಶೀಲಿಸಿದರು
ಮುಂಡರಗಿ ಎಪಿಎಂಸಿ ಆವರಣದಲ್ಲಿರುವ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಭೇಟಿ ನೀಡಿ ಪರಿಶೀಲಿಸಿದರು   

ಮುಂಡರಗಿ: ಪಟ್ಟಣದ ಖರೀದಿ ಕೇಂದ್ರದಲ್ಲಿ ಭಾನುವಾರದಿಂದ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಸ್ಥಗಿತಗೊಳಿಸಿರುವುದು ಸೇರಿದಂತೆ ಖರೀದಿ ಕೇಂದ್ರದಲ್ಲಿನ ಹಲವು ಸಮಸ್ಯೆಗಳ ಕುರಿತು ರೈತರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು. ಹಮಾಲರು ಲಭ್ಯವಿಲ್ಲ, ಸರ್ವರ್ ದೊರೆಯುತ್ತಿಲ್ಲ, ಖರೀದಿ ಮಿತಿ ಮುಗಿದಿದೆ ಎಂಬ ಕಾರಣಗಳನ್ನು ನೀಡಿ ಖರೀದಿ ಕೇಂದ್ರದ ಸಿಬ್ಬಂದಿ ಖರೀದಿಯನ್ನು ನಿಲ್ಲಿಸಿದ್ದಾರೆ ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ಇಲ್ಲಿಯ ಎಪಿಎಂಸಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಸೋಮವಾರ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ, ಉಪ ವಿಭಾಗಾಧಿಕಾರಿ ಗಂಗಪ್ಪ, ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹಾಗೂ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

‘ಎಥಿನಾಲ್ ಕೋಟಾದಲ್ಲಿ ನೋಂದಣಿ ಮಾಡಿಕೊಂಡಿರುವ ರೈತರನ್ನು ಹೊರತುಪಡಿಸಿ ಪ್ರೌಲ್ಟ್ರಿ ಕೋಟಾದಲ್ಲಿ ನೋಂದಣಿ ಮಾಡಿಕೊಂಡ ರೈತರ ಮೆಕ್ಕೆಜೋಳವನ್ನು ಇಂದು ಏಕೆ ಖರೀದಿಸುತ್ತಿಲ್ಲ?’ ಎಂದು ಜಿಲ್ಲಾಧಿಕಾರಿ ಶ್ರೀಧರ ಅವರು ಖರೀದಿ ಕೇಂದ್ರದ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡರು.

ADVERTISEMENT

‘ರಾಜ್ಯದ ಎಲ್ಲ ಖರೀದಿ ಕೇಂದ್ರಗಳಲ್ಲಿಯೂ ಸುಸೂತ್ರವಾಗಿ ಖರೀದಿ ನಡೆಯುತ್ತಿದ್ದು, ಜಿಲ್ಲೆಯ ಮುಂಡರಗಿ ಮತ್ತು ಲಕ್ಷ್ಮೇಶ್ವರ ಪಟ್ಟಣಗಳಲ್ಲಿ ಮಾತ್ರ ಏಕೆ ತೊಂದರೆ ಕಾಣಿಸಿಕೊಳ್ಳುತ್ತಿದೆ?. ವಿನಾಕಾರಣ ಸಬೂಬು ಹೇಳದೆ ನೋಂದಣಿ ಮಾಡಿಕೊಂಡಿರುವ ಎಲ್ಲ ರೈತರ ಮೆಕ್ಕೆಜೋಳವನ್ನು ಪ್ರೌಲ್ಟ್ರಿ ಕೋಟಾದ ಅಡಿಯಲ್ಲಿ ಖರೀದಿಸಬೇಕು’ ಎಂದು ತಾಕೀತು ಮಾಡಿದರು.

ಖರೀದಿಗೆ ಕಂಪ್ಯೂಟರ್‌ನಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿಯ ಮೂಲಕ ಮಾತನಾಡಿ, ತಕ್ಷಣ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಇಂದಿನಿಂದಲೆ ಪುನಃ ಖರೀದಿ ಆರಂಭಿಸಬೇಕು ಎಂದು ಸೂಚಿಸಿದರು.
ಮೆಕ್ಕೆಜೋಳ ಖರೀದಿಗೆ ನೋಂದಣಿ ಮಾಡಿಕೊಂಡಿರುವ ರೈತರಿಗೆ ಖರೀದಿ ದಿನಾಂಕವನ್ನು ಮುಂಚಿತವಾಗಿ ತಿಳಿಸಬೇಕು. ಅವರು ಬಾರದಿದ್ದಲ್ಲಿ ಬೇರೆಯವರ ಜೋಳವನ್ನು ಖರೀದಿಸಬೇಕು. ಖರೀದಿ ಹಾಗೂ ರೈತರ ಸರದಿಯಲ್ಲಿ ತಾರತಮ್ಯ ಎಸಗಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಖರೀದಿ ಕೇಂದ್ರದ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ರೈತರೊಂದಿಗೆ ಸಭೆ: ಅದಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿ ಶ್ರೀಧರ ಅವರು ತಹಶೀಲ್ದಾರ್ ಕಾರ್ಯಾಲಯದಲ್ಲಿ ರೈತರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.

ಮೆಕ್ಕೆಜೋಳವನ್ನು ಎಥಿನಾಲ್ ಹಾಗೂ ಪ್ರೌಲ್ಟ್ರಿ ಎಂಬ ಎರಡು ವಿಭಾಗಗಳಲ್ಲಿ ಖರೀದಿಸಲು ಸೂಚಿಸಲಾಗಿತ್ತು. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಎಥಿನಾಲ್ ಕೋಟಾದ ಮೆಕ್ಕೆಜೋಳದ ಖರೀದಿ ಪೂರ್ಣಗೊಂಡಿದೆ. ಹೀಗಾಗಿ ಎಥಿನಾಲ್ ಕೋಟಾದ ಖರೀದಿ ಸ್ಥಗಿತಗೊಂಡಿದೆ ಎಂದು ಜಿಲ್ಲಾಧಿಕಾರಿ ಶ್ರೀಧರ ಅವರು ರೈತರಿಗೆ ತಿಳಿ ಹೇಳಿದರು.

ಎಥಿನಾಲ್ ಕೋಟಾ ಭರ್ತಿಯಾಗಿರುವುದರಿಂದ ಇನ್ನು ಮುಂದೆ ರೈತರ ಎಲ್ಲ ಮೆಕ್ಕೆಜೋಳವನ್ನು ಪ್ರೌಲ್ಟ್ರಿ ಕೋಟಾದ ಅಡಿಯಲ್ಲಿ ಖರೀದಿಸಲು ಕ್ರಮ ಕೈಗೊಳ್ಳಲಾಗಿದ್ದು, ಮಧ್ಯಾಹ್ನ 3 ಗಂಟೆಯ ನಂತರ ಪುನಃ ಖರೀದಿ ಆರಂಭವಾಗಲಿದೆ. ರೈತರು ಆತಂಕ ಪಡಬೇಕಾಗಿಲ್ಲ ಎಂದು ಭರವಸೆ ನೀಡಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಾನಂದ ಇಟಗಿ, ಹಸಿರು ಸೇನೆಯ ಮುಖಂಡ ಜಾಯನಗೌಡ್ರ ಗೌಡ್ರ, ಕೆ.ಎ.ದೇಸಾಯಿ, ಅಂದಪ್ಪ ಬೆಣ್ಣಿಹಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.