
ನರಗುಂದ: ‘ಗದಗ ಜಿಲ್ಲೆ ಸಹಕಾರ ಕ್ಷೇತ್ರದ ತೊಟ್ಟಿಲು. ಸಹಕಾರ ಸಂಘಗಳು ರೈತರಿಗೆ ಅನುಕೂಲವಾಗಲು ಸ್ಥಾಪಿತಗೊಂಡಿವೆ. ಇದಕ್ಕಾಗಿ ರಾಜ್ಯ ಸರ್ಕಾರ ಗ್ರಾಮಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುತ್ತಿದೆ. ಇದು ಎಲ್ಲ ರೈತರಿಗೂ ದೊರೆಯುವಂತಾಗಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ತಾಲ್ಲೂಕಿನ ಕಣಕಿಕೊಪ್ಪ ಗ್ರಾಮದಲ್ಲಿ ಶನಿವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
‘ಕಣಕಿಕೊಪ್ಪ ಸಹಕಾರಿ ಸಂಘ ನೂರು ವರ್ಷಗಳ ಸಾರ್ಥಕತೆ ಮೆರೆದದ್ದು ಸಂಭ್ರಮ ಉಂಟು ಮಾಡಿದೆ. ರೈತರಿಗೆ, ಸಮುದಾಯಕ್ಕೆ ಉಪಯೋಗವಾಗುವಂತಹ ಕಾರ್ಯಕ್ಕೆ ಮುಂದಾಗಬೇಕಿದೆ. ಸಂಕಷ್ಟದಲ್ಲಿರುವ ರೈತರ ಸಹಾಯಕ್ಕೆ ಸಹಕಾರ ಸಂಘಗಳು ಮುಂದಾಗಬೇಕು. ಸಂಘಗಳು ಎಲ್ಲ ರೈತರಿಗೆ ಸದಸ್ಯತ್ವ ನೀಡಬೇಕು. ಅವರಿಗೆ ಶೂನ್ಯ ಬಡ್ಡಿ ದರದ ಸಾಲ ದೊರೆಯುವಂತೆ ಮಾಡಲು ಸದಸ್ಯರು ಬದ್ಧರಾಗಬೇಕು. ಕಣಕಿಕೊಪ್ಪ ಪಿಕೆಪಿಎಸ್ ಪ್ರತಿ ವರ್ಷ ಹೊಸ ದಾಖಲೆ ಬರೆಯಬೇಕು’ ಎಂದು ಸಚಿವ ಪಾಟೀಲ ಸಲಹೆ ನೀಡಿದರು.
ಶತಮಾನೋತ್ಸವ ಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಸಿ.ಸಿ.ಪಾಟೀಲ, ‘ಬ್ರಿಟಿಷರ ಆಡಳಿತದ ಸಂದರ್ಭದಲ್ಲಿ ಈ ಗ್ರಾಮದಲ್ಲಿ ಸಹಕಾರಿ ಸಂಘ ಆರಂಭಗೊಂಡಿತ್ತು. ಭಾರತದಲ್ಲಿ ಸಹಕಾರ ಚಳವಳಿ ಆರಂಭಗೊಂಡಿದ್ದೇ ಗದಗ ಜಿಲ್ಲೆಯಲ್ಲಿ. ದಿ.ಸಿದ್ದನಗೌಡ ಪಾಟೀಲರ ಸೇವೆ ಸ್ಮರಣೀಯ. ಸಹಕಾರ ಸಂಘಗಳು ಬೀಜ, ಗೊಬ್ಬರ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ’ ಎಂದರು.
‘ಗ್ರಾಮದ ಶಾಲೆಗೆ ಅಗತ್ಯವಿರುವ ಕೊಠಡಿ ಹಾಗೂ ಬಾಲಕಿಯರಿಗೆ ಅಗತ್ಯವಿರುವ ಪಿಂಕ್ ಶೌಚಾಲಯ ನಿರ್ಮಿಸಿ ಕೊಡಲಾಗುವುದು. ಹೂಲಿ ಅಜ್ಜನ ಮಠದ ನಿರ್ಮಾಣಕ್ಕೆ ಮುಂದಾದರೆ ಅದಕ್ಕೆ ಸಂಪೂರ್ಣ ಅನುದಾನ ಒದಗಿಸಲಾಗುವುದು’ ಎಂದು ಶಾಸಕ ಪಾಟೀಲ ಹೇಳಿದರು.
ಚಂದರಗಿಯ ವೀರಭದ್ರ ಶಿವಾಚಾರ್ಯರು, ಹೂಲಿ ಸಾಂಬಯ್ಯನ ಮಠದಷಉಮೇಶ್ವರ ಶಿವಾಚಾರ್ಯರು, ಶಿರಕೋಳದ ಗುರುಸಿದ್ಧೇಶ್ವರ ಶಿವಾಚಾರ್ಯ, ಶಿವಮಹಾಂತ ಶಿವಾಚಾರ್ಯ, ಪಂಚಗೃಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ, ವಿರಕ್ತಮಠದ ಶಿವುಕುಮಾರ ಶ್ರೀ, ಪತ್ರಿವನಮಠಧ ಗುರುಸಿದ್ದ ವೀರಶಿವಯೋಗಿ ಶಿವಾಚಾರ್ಯ, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ, ಶಿವಪುತ್ರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕೆಪಿಸಿಸಿ ಮಾಧ್ಯಮ ವಕ್ತಾರ ಡಾ.ಸಂಗಮೇಶ ಕೊಳ್ಳಿಯವರ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಎಸ್. ಡಿ.ಕೊಳ್ಳಿಯವರ ಮಾತನಾಡಿದರು. ಪಿಕೆಪಿಎಸ್ ಅಧ್ಯಕ್ಷ ಮರಿಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ವಿ.ಎನ್. ಕೊಳ್ಳಿಯವರ, ಪಿಕೆಪಿಎಸ್ ನಿರ್ದೇಶಕರಾದ ವಿಜಯ ಕುಲಕರ್ಣಿ, ಎಚ್‌ಬಿ.ಹಿರೇಗೌಡ್ರ, ಗೌಡಪ್ಪಗೌಡ ಹುಡೇದಮನಿ, ಕೆ.ಒ.ಒ.ಎಫ್ ನಿರ್ದೇಶಕ ಶತೀರ್ಥಗೌಡ ಪಾಟೀಲ, ತಹಶೀಲ್ದಾರ್ ಶ್ರೀಶೈಲ ತಳವಾರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು. ವೈದ್ಯ ಡಾ.ಜಿ.ಎಸ್.ನುಗ್ಗಾನಟ್ಟಿ, ಎಸ್.ಎಲ್.ಮರಿಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.