ADVERTISEMENT

 ಬೆಣ್ಣಿ ಹಳ್ಳದ ಪ್ರವಾಹ: ನಡುಗಡ್ಡೆಯಾದ ಸುರಕೋಡ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 8:45 IST
Last Updated 9 ಆಗಸ್ಟ್ 2019, 8:45 IST
ನರಗುಂದ ತಾಲ್ಲೂಕಿನ ಸುರಕೋಡ ಗ್ರಾಮ ಬೆಣ್ಣಿಹಳ್ಳದಿಂದ ತುಂಬಿ ಹರಿದ ನೀರಿಗೆ ಜಲಾವೃತಗೊಂಡಿತು
ನರಗುಂದ ತಾಲ್ಲೂಕಿನ ಸುರಕೋಡ ಗ್ರಾಮ ಬೆಣ್ಣಿಹಳ್ಳದಿಂದ ತುಂಬಿ ಹರಿದ ನೀರಿಗೆ ಜಲಾವೃತಗೊಂಡಿತು   

ನರಗುಂದ:ಬೆಣ್ಣಿಹಳ್ಳ ಪ್ರವಾಹದಿಂದ ತಾಲ್ಲೂಕಿನ ಸುರಕೋಡ ಗ್ರಾಮ ನಡುಗಡ್ಡೆಯಾಗಿ ಬದಲಾಗಿದೆ. ಗ್ರಾಮವು ಸಂಪೂರ್ಣವಾಗಿ ಹೊರಗಿನ ಸಂಪರ್ಕ ಕಳೆದುಕೊಂಡಿದೆ. ಅಲ್ಲಿರುವ ಜನರು ಆತಂಕದ ನಡುವೆ ಬದುಕು ದೂಡುತ್ತಿದ್ದಾರೆ.

‘ಪ್ರವಾಹ ಪರಿಸ್ಥಿತಿ ತಲೆದೋರಿದ ಹಿನ್ನೆಲೆಯಲ್ಲಿ ಶೇ 30ರಷ್ಟು ಜನರು ಈಗಾಗಲೇ ಗ್ರಾಮದಿಂದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದಾರೆ. ನೀರು ಗ್ರಾಮದೊಳಗೆ ಬರುವುದಿಲ್ಲ ಎಂದು ನಂಬಿಕೊಂಡು ಶೇ 70ರಷ್ಟು ಜನರು ಅಲ್ಲೇ ಉಳಿದಿದ್ದಾರೆ. ಅವರನ್ನು ಮನವೊಲಿಸಿ, ಕರೆತರಲು ಎನ್‍ಡಿಆರ್‍ಎಫ್ ತಂಡ ಬೋಟ್‌ನೊಂದಿಗೆ ಸಿದ್ಧವಾಗಿದೆ.

ಸುರಕೋಡ ಗ್ರಾಮಸ್ಥರಿಗಾಗಿ, ಆಸರೆ ಮನೆಗಳಿರುವ ಸರ್ಕಾರಿ ಪ್ರೌಢ ಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಗ್ರಾಮ ಪಂಚಾಯ್ತಿ ಅಧಿಕಾರಿಗಳು ಅಲ್ಲಿಯೇ ಬೀಡು ಬಿಟ್ಟು ಅದರ ಉಸ್ತುವಾರಿ ವಹಿಸಿದ್ದಾರೆ.

ADVERTISEMENT

ಕುರ್ಲಗೇರಿ ಗ್ರಾಮವೂ ಜಲಾವೃತವಾಗಿದ್ದು, ಗುರುವಾರ ಬೆಳಿಗ್ಗೆ ಹೆಚ್ಚಿನ ನೀರು ಬಂದಿದ್ದರಿಂದ ಜನರು ಆಸರೆ ಮನೆಗಳಿಗೆ ತೆರಳಲು ಹಾಗೂ ಗಂಜಿ ಕೇಂದ್ರದತ್ತ ತೆರಳುತ್ತಿರುವುದು ಕಂಡು ಬಂತು. ಗ್ರಾಮದಲ್ಲಿನ ಎತ್ತು, ಚಕ್ಕಡಿಗಳನ್ನು, ವಿವಿಧ ಸಾಮಗ್ರಿಗಳನ್ನು ನೀರಿನಲ್ಲಿಯೇ ಸಾಗಿಸುತ್ತಿರುವುದು ಕಂಡು ಬಂತು. ಕೆಲವರನ್ನು ನರಗುಂದದ ಎಪಿಎಂಸಿ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಿದರೆ, ಇನ್ನು ಕೆಲವರನ್ನು ಆಸರೆ ಮನೆಗಳಿರುವ ಶಾಲೆಗೆ ಸ್ಥಳಾಂತರಿಸಲಾಗಿದೆ.

ಹದ್ಲಿ ಗ್ರಾಮವು ಬೆಣ್ಣಿಹಳ್ಳ ಪ್ರವಾಹದಿಂದ ತೊಂದರೆಗೆ ಒಳಗಾಗಿದೆ. ಜಮೀನುಗಳು ಪ್ರವಾಹಕ್ಕೆ ತುತ್ತಾಗಿವೆ. ಪ್ರಸಿದ್ದ ಬಸವೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಕೊಣ್ಣೂರು ಗ್ರಾಮದಲ್ಲಿ ಆರ್‌ಎಸ್‍ಎಸ್ ಹಾಗೂ ಮಹದೇವ ತಾತನವರ ಬಳಗದವರು ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡಿದರು. ಹೆದ್ದಾರಿ ಮಧ್ಯದಲ್ಲಿಯೇ ಊಟ ಬಡಿಸಿ ಹಸಿವು ಇಂಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.