ನರಗುಂದ: ಎರಡು ವಾರದಿಂದ ನಿರಂತರ ಮಳೆ ಸುರಿದ ಪರಿಣಾಮ ಮಂಗಳವಾರ ಮಲಪ್ರಭಾ ನದಿಗೆ ಒಳಹರಿವು ಹೆಚ್ಚಾಗಿದ್ದು, ತಾಲ್ಲೂಕಿನ ಮಲಪ್ರಭಾ ನದಿ ಪಾತ್ರದ ಗ್ರಾಮಗಳ ಜನರು ಆತಂಕಗೊಂಡಿದ್ದಾರೆ.
ಸವದತ್ತಿ ಬಳಿಯ ಮಲಪ್ರಭಾ ನದಿಯ ನವಿಲುತೀರ್ಥ ಜಲಾಶಯ ಭರ್ತಿಯಾಗಲು ಕೇವಲ ಒಂದು ಅಡಿ ಬಾಕಿ ಇದೆ. ಒಳಹರಿವು ಹೆಚ್ಚಿರುವ ಕಾರಣ, ಮಂಗಳವಾರ ಸಂಜೆ 12,794 ಕ್ಯುಸೆಕ್ ನೀರನ್ನು ಕಾಲುವೆಗಳಿಗೆ ಬಿಡಲಾಗಿದೆ. ಬುಧವಾರ ಸಂಜೆ ಹೊತ್ತಿಗೆ ಇನ್ನು ಹೆಚ್ಚಳವಾಗುವ ಸಂಭವವಿದೆ. ಹೊರ ಹರಿವು ಹೆಚ್ಚಾದಲ್ಲಿ ಬೆಳೆಹಾನಿಯ ಜತೆಗೆ ನದಿ ಪಾತ್ರದ ಮನೆಗಳಿಗೆ ಹಾನಿ ಸಂಭವಿಸುವ ಆತಂಕ ಎದುರಾಗಿದೆ. ಇಲ್ಲಿಯವರೆಗೆ ನಿರಂತರ ಮಳೆಯಿಂದ ತೊಂದರೆಗೊಳಗಾಗಿದ್ದ ಜನರು ಈಗ ಮಲಪ್ರಭಾ ಪ್ರವಾಹ ಎದುರಿಸಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ.
2079.50 ಅಡಿ ಸಾಮರ್ಥ್ಯ ಹೊಂದಿರುವ ನವಿಲುತೀರ್ಥ ಜಲಾಶಯದಲ್ಲಿ 2077.95 ಅಡಿಗಳಷ್ಟು ನೀರು ಸಂಗ್ರಹವಾಗಿದೆ. 15.125 ಕ್ಯುಸೆಕ್ ಒಳಹರಿವಿದ್ದು, 12,794 ಕ್ಯುಸೆಕ್ ಹೊರ ಹರಿವಿದೆ. ಮಳೆಯ ನದಿ ಮೇಲ್ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿರುವುದರಿಂದ ಪ್ರವಾಹ ಹೆಚ್ಚಾಗುವ ಸಂಭವವಿದೆ.
ಮಲಪ್ರಭಾ ಪ್ರವಾಹ ಲಕಮಾಪುರದ ಜಮೀನುಗಳಿಗೆ ಪ್ರವೇಶ ಮಾಡಿದೆ. ಇದರಿಂದ ಸ್ವಲ್ಪ ಬೆಳೆ ಹಾನಿ ಸಂಭವಿಸಿದೆ. ಪ್ರವಾಹ ಗ್ರಾಮದತ್ತ ಬಂದರೆ ಜನರ ಸುರಕ್ಷತೆಗೆ ತಾಲ್ಲೂಕು ಆಡಳಿತ ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆಶ್ರೀಶೈಲ ತಳವಾರ, ತಹಶೀಲ್ದಾರ್ ,ನರಗುಂದ
ಲಕಮಾಪುರ ಪ್ರವೇಶಿಸಿದ ಪ್ರವಾಹ: ಮಲಪ್ರಭಾ ಪ್ರವಾಹಕ್ಕೆ ತುತ್ತಾಗುವ ಮೊದಲ ಗ್ರಾಮ ಲಕಮಾಪುರ ಆಗಿದ್ದು, ಗ್ರಾಮದ ಸಮೀಪ ಬೆಳೆಗಳಿಗೆ ನುಗ್ಗಿದೆ. 15 ಸಾವಿರ ಕ್ಯುಸೆಕ್ ನೀರು ಬಿಟ್ಟರೆ ಮನೆಗಳಿಗೆ ನೀರು ನುಗ್ಗುವ ಸಂಭವ ಹೆಚ್ಚಾಗಿದೆ. ಬೆಳ್ಳೇರಿ ವ್ಯಾಪ್ತಿಯಲ್ಲಿನ ಜಮೀನುಗಳಿಗೂ ನೀರು ನುಗ್ಗಿದ್ದು, ಮೆಕ್ಕೆಜೋಳ, ಕಬ್ಬು, ತರಕಾರಿ ಹಾನಿಯಾಗುವುದು ನಿಶ್ಚಿತವಾಗಿದೆ.
ಕೊಣ್ಣೂರ ಹಳೆ ಸೇತುವೆ ಮುಳುಗಡೆ: ಕೊಣ್ಣೂರ ಬಳಿಯ ಮಲಪ್ರಭಾ ಹೊಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಈ ಮಾರ್ಗದ ಮೂಲಕ ಗೋವನಕೊಪ್ಪ ಗ್ರಾಮಕ್ಕೆ ಹಾಗೂ ಜಮೀನುಗಳಿಗೆ ಸಂಚರಿಸಲಾಗುತ್ತಿತ್ತು. ಇದೀಗ ಹೊಳೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಆತಂಕಗೊಂಡ ಗ್ರಾಮಗಳು: ಮಲಪ್ರಭಾ ಪ್ರವಾಹ ಉಂಟಾಗಿರುವುದರಿಂದ ಹೊರ ಹರಿವು ಹೆಚ್ಚಳವಾದರೆ ಲಕಮಾಪುರ, ಬೆಳ್ಳೇರಿ, ವಾಸನ, ಕೊಣ್ಣೂರ, ಕಲ್ಲಾಪುರ, ಕಪಲಿ, ಶಿರೋಳ, ಬೂದಿಹಾಳ ಗ್ರಾಮಗಳು ಪ್ರವಾಹಕ್ಕೆ ಒಳಗಾಗಲಿವೆ.
ಬೆಣ್ಣೆ ಹಳ್ಳದ ಪ್ರವಾಹ ಹೆಚ್ಚಳ: ನಿರಂತರ ಮಳೆಯಿಂದ ಬೆಣ್ಣೆಹಳ್ಳ ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದ್ದು, ಮಳೆ ಮುಂದುವರಿದರೆ ಪ್ರವಾಹ ಹೆಚ್ಚಾಗಲಿದೆ. ಮಂಗಳವಾರ ನಿರಂತರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಉಪವಿಭಾಗಾಧಿಕಾರಿ ಭೇಟಿ
ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಮಂಗಳವಾರ ಲಕಮಾಪುರ ಹಾಗೂ ಕೊಣ್ಣೂರ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ‘ಸುರಕ್ಷತೆ ದೃಷ್ಟಿಯಿಂದ ನದಿಯ ಕಡೆಗೆ ತೆರಳದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರವಾಹ ಹೆಚ್ಚಾದರೆ ಜನರ ಸುರಕ್ಷಿತೆಗಾಗಿ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ’ ಎಂದರು. ಈ ಸಂದರ್ಭದಲ್ಲಿ ಲಕಮಾಪುರ ಗ್ರಾಮಸ್ಥರು ಕೊಣ್ಣೂರ ಕಂದಾಯ ನಿರೀಕ್ಷಕ ಕಳಸಣ್ಣವರ ಗ್ರಾಮಲೆಕ್ಕಾಧಿಕಾರಿಗಳು ಪಿಡಿಒ ವಾಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.