ಗದಗ: ‘ದೇಹವನ್ನು ಸಮತೋಲನಗೊಳಿಸಿ; ಆತ್ಮಶಕ್ತಿಯನ್ನು ಉನ್ನತಗೊಳಿಸುವ ಮಲ್ಲಕಂಬದಂತಹ ಕ್ರೀಡೆಯ ಬಗ್ಗೆ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಗದಗ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಹೇಳಿದರು.
ನಗರದ ಕಳಸಾಪುರ ರಸ್ತೆಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಚಾಲುಕ್ಯ ಮಲ್ಲಕಂಬ ಅಕಾಡೆಮಿ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
‘ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಗದುಗಿನ ಕೀರ್ತಿ ತರುವಂತೆ ಚಾಲುಕ್ಯ ಮಲ್ಲಕಂಬ ಅಕಾಡೆಮಿ ಶ್ರಮಿಸಬೇಕು. ಇವರ ಮುಂದಾಳತ್ವದಲ್ಲಿ ಮಲ್ಲಕಂಬ ಕ್ರೀಡೆ ಯಶಸ್ವಿಯಾಗಲಿ’ ಎಂದರು.
ಕಳಸಾಪುರ ಗ್ರಾಮದ ಹಿರಿಯ ಮುಖಂಡ ಶರದರಾವ್ ಹುಯಿಲಗೋಳ ಮಾತನಾಡಿ, ‘ಮಲ್ಲಕಂಬವು ಭಾರತದಲ್ಲಿ ಹುಟ್ಟಿದ ಶಕ್ತಿ ಮತ್ತು ಶಾರೀರಿಕ ಕೌಶಲ್ಯದ ಪ್ರಾಚೀನ ಕಲೆ. ಶತಮಾನಗಳಿಂದಲೂ ಇದು ವಿಶೇಷ ಸ್ಥಾನ ಪಡೆದಿದೆ’ ಎಂದರು.
‘ಪೈಲ್ವಾನರು ಮತ್ತು ಯೋಧರು ಶಕ್ತಿಯ ಅಭ್ಯಾಸಕ್ಕೆ ಮಲ್ಲಕಂಬ ಬಳಸಿ ಶಿಸ್ತು ಮತ್ತು ಶಕ್ತಿಯನ್ನು ಬೆಳೆಸಿದರು. ಮೈಸೂರಿನ ಅರಮನೆ, ವಿಜಯನಗರ ಸಾಮ್ರಾಜ್ಯ, ಬದಾಮಿ ಚಾಲುಕ್ಯರು ಮತ್ತು ಹಳ್ಳಿಯ ಅಖಾಡಗಳಲ್ಲಿ ಈ ಕಲೆ ತನ್ನ ಬಂಗಾರದ ಯುಗವನ್ನು ಕಂಡಿತು. ಹಳ್ಳಿಗಳ ಅಖಾಡಗಳಲ್ಲಿ ಶಿಸ್ತಿನ ವ್ಯಾಯಾಮವಾಗಿ ಬೆಳೆದ ಮಲ್ಲಕಂಬ ಪ್ರಮುಖ ಪಾತ್ರ ವಹಿಸುತ್ತದೆ’ ಎಂದರು.
ಉದ್ಯಮಿ ಶಂಕರ ಹಾನಗಲ್ ಮಾತನಾಡಿ, ‘ಚಾಲುಕ್ಯ ಮಲ್ಲಕಂಬ ಅಕಾಡೆಮಿ ಗದಗ ಜಿಲ್ಲೆಯಲ್ಲಿ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಅಭಿವೃದ್ಧಿಗಾಗಿ ಸ್ಥಾಪನೆಗೊಂಡ ತರಬೇತಿ ಸಂಸ್ಥೆಯಾಗಿದೆ. ಮಲ್ಲಕಂಬದ ವಿವಿಧ ಶೈಲಿಗಳ ತರಬೇತಿಯನ್ನು ಅನುಭವಿ ತರಬೇತುದಾರರ ಮಾರ್ಗದರ್ಶನದಲ್ಲಿ ಪಡೆದು, ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಬೇಕು’ ಎಂದರು.
ಚಾಲುಕ್ಯ ಮಲ್ಲಕಂಬ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ವಿಜಯ ಚನ್ನಗೋಣಿ ಮಾತನಾಡಿ, ‘ಮಲ್ಲಕಂಬ ಕ್ರೀಡೆಗೆ ಪ್ರವೇಶ ತರಗತಿಗಳು ಪ್ರಾರಂಭಗೊಂಡಿದ್ದು, ಕ್ರೀಡಾಪಟುಗಳು ಸೆಪ್ಟೆಂಬರ್ 1ರಿಂದ ತರಗತಿಗಳು ಪ್ರಾರಂಭಗೊಳ್ಳಲಿವೆ. ಆಸಕ್ತರು 89046 72543 ಸಂಪರ್ಕಿಸಿ, ನೋಂದಣಿ ಮಾಡಿಕೊಳ್ಳಬಹುದು’ ಎಂದರು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಶರಣು ಗೋಗೇರಿ, ಸಿದ್ದು ಪಾಟೀಲ, ಮಹೇಶ ರಂಗಣ್ಣವರ, ಸಚಿನ್ ಮಲ್ಲಾಪೂರ, ದೀಪಕ್ ದಾನಿ, ಕೆ.ಎಸ್.ಗಂಗನಗೌಡರ, ಪರಶುರಾಮ ಹಬೀಬ, ಶಿವು ಸಿದ್ದರಾಮಸ್ವಾಮಿಮಠ, ಮಾರುತಿ ಮರೆಯಪ್ಪನವರ ಸೇರಿದಂತೆ ಮಲ್ಲಕಂಬ ತರಬೇತುದಾರರು, ಕ್ರೀಡಾಪಟುಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.