
ಲಕ್ಷ್ಮೇಶ್ವರ: ಸದ್ಯ ತಾಲ್ಲೂಕಿನಲ್ಲಿ ಎಲ್ಲೇ ನೋಡಿದರೂ ಮಾವಿನ ಮರಗಳಲ್ಲಿ ಹೂವಿನ ರಾಶಿಯೇ ಕಂಡು ಬರುತ್ತಿದೆ. ಮಹಿಳೆಯೊಬ್ಬಳು ತಲೆ ತುಂಬಾ ಹೂವು ಮುಡಿದಂತೆ ಮಾವಿನ ಮರಗಳು ಹೂವಿನಿಂದ ಕಂಗೊಳಿಸುತ್ತಿವೆ.
ಪ್ರಸ್ತುತ ವರ್ಷ ಹೂ ಬಿಡಲು ಅನುಕೂಲಕರವಾದ ಚಳಿ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಗಿಡಗಳ ತುಂಬ ಹೂ ಗೊಂಚಲುಗಳು ಗಮನ ಸೆಳೆಯುತ್ತಿದ್ದು, ಬೆಳೆಗಾರರಲ್ಲಿ ಉತ್ತಮ ಇಳುವರಿ ನಿರೀಕ್ಷೆ ಮೂಡಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಪಾರ ಪ್ರಮಾಣದಲ್ಲಿ ಹೂ ಬಿಟ್ಟಿದ್ದು ಸಹಜವಾಗಿ ಇದು ಸಮೃದ್ಧ ಫಲ ಬರುವ ಆಶಾಭಾವನೆ ಹೆಚ್ಚಿಸಿದೆ.
‘ಹವಾಮಾನದಲ್ಲಾದ ಬದಲಾವಣೆ, ಸಮಯಕ್ಕೆ ಸರಿಯಾದ ಮಳೆ ಹಾಗೂ ತಾಪಮಾನದ ಸಮತೋಲನವೇ ಈ ಅಪೂರ್ವ ಹೂವಿನ ಸಮೃದ್ಧತೆಗೆ ಕಾರಣ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪಿ.ಆರ್. ಕುಲಕರ್ಣಿ ತಿಳಿಸಿದ್ದಾರೆ.
ಮಾವಿನ ಹೂವು ಕೇವಲ ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲ ಜೇನು ಹುಳುಗಳು, ಚಿಟ್ಟೆಗಳು ಸೇರಿದಂತೆ ಹಲವಾರು ಪರಾಗ ಜೀವಿಗಳನ್ನು ಆಕರ್ಷಿಸುತ್ತಿವೆ.
ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಅಂದಾಜು 70-80 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದ್ದು, ಬಾಲೆಹೊಸೂರು, ರಾಮಗೇರಿ, ಸೂರಣಗಿ, ಶಿಗ್ಲಿ, ದೊಡ್ಡೂರು, ಗೋವನಾಳ, ಅಡರಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಮಾವಿನ ಕೃಷಿ ಇದೆ.
‘ಆರು ವರ್ಷಗಳ ಮರದಿಂದ 240 ಕಾಯಿ, ಎಂಟು ವರ್ಷದ ಮರದಿಂದ 300-500 ಮಾವಿನಕಾಯಿ ಇಳುವರಿ ನಿರೀಕ್ಷಿಸಬಹುದು. ಬೆಳೆಗಾರರು ಸೂಕ್ತ ಕಾಳಜಿ ವಹಿಸಿದರೆ ಮಾವಿನ ಕೃಷಿಯಿಂದ ಉತ್ತಮ ಆದಾಯ ಗಳಿಸಲು ಸಾಧ್ಯ’ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಶಂಭುಲಿಂಗಪ್ಪ ನೆಗಳೂರು ತಿಳಿಸಿದರು.
‘ಈ ವರ್ಷ ಮರದ ತುಂಬ ಹೂ ಬಿಟ್ಟಿದ್ದು ಇಳುವರಿ ಹೆಚ್ಚು ಬರುವ ಆಶಾಭಾವನೆ ಇದೆ’ ಎಂದು ತಾಲ್ಲೂಕಿನ ರಾಮಗೇರಿ ಗ್ರಾಮದ ಮಾವು ಬೆಳೆಗಾರ ಮಹೇಂದ್ರ ಬೆಟಗೇರಿ ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.