ಗದಗ: ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಪಟ್ಟಣದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸಲಾಗಿತ್ತು. 45 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಈ ವೇಳೆ ಮಾತನಾಡಿದ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ, ‘ನೂತನ ವಧು– ವರರು ಹೊಂದಾಣಿಕೆಯಿಂದ ಒಬ್ಬರನ್ನೊಬ್ಬರು ಗೌರವಿಸುತ್ತಾ ನೆಮ್ಮದಿಯಿಂದ ಬಾಳಬೇಕು’ ಎಂದರು.
ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿ.ಬಿ ಬೀಡನಾಳ ಅವರಿಗೆ ವೀರಭದ್ರೇಶ್ವರ ಪ್ರತಿಷ್ಠಾನ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಬೀಡನಾಳ ಅವರು, ‘ಸುಶಿಕ್ಷಿತರಿಗಿಂತ ಅಹಂಕಾರ ತ್ಯಜಿಸುವವನು ಶ್ರೇಷ್ಟ. ಹಮ್ಮು, ಬಿಮ್ಮುಗಳನ್ನು ಬದಿಗೊತ್ತಿ ಸತ್ಪ್ರಜೆಗಳಾಗಿ ಬಾಳಬೇಕು. ಹಣ, ಐಶ್ವರ್ಯಗಳನ್ನು ಗಳಿಸಿದವನಿಗಿಂತ ಜ್ಞಾನ ಸಂಪಾದಿಸಿರುವವನ ಕೀರ್ತಿ ಹೆಚ್ಚಾಗುತ್ತದೆ’ ಎಂದರು.
ವೀರಭದ್ರೇಶ್ವರ ಸೇವಾ ಸಮಿತಿ ಅದ್ಯಕ್ಷ ಎಸ್.ವಿ.ಲಿಂಬಿಕಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಪುರಸಭೆಯ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಜಾತ್ರಾ ಸಮಿತಿ ಅಧ್ಯಕ್ಷ ವೀರೇಶ ಗುಗ್ಗರಿ ಮಾತನಾಡಿದರು.
ಷಡಕ್ಷರಯ್ಯ ಅಳವುಂಡಿಮಠ, ವಿ.ಆರ್.ಹಿರೇಮಠ ಹಾಗೂ ಸದಾಶಿವಯ್ಯ ಕಬ್ಬೂರಮಠ ವಿವಾಹ ಸಮಾರಂಭದ ವಿಧಿ, ವಿಧಾನಗಳನ್ನು ನಡೆಸಿಕೊಟ್ಟರು. ಕಾಶೀನಾಥ ಬಿಳಿಮಗ್ಗ, ಕೊಟ್ರೇಶ ಅಂಗಡಿ, ಶರಣಪ್ಪ ಕುಬಸದ ಪುರಸಭೆ ಅದ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಸದಸ್ಯೆ ಶಾಂತಮ್ಮ ಕರಡಿಕೊಳ್ಳ, ವೀರಭದ್ರೇಶ್ವರ ಮಹಿಳಾ ವೇದಿಕೆಯ ಅಧ್ಯಕ್ಷೆ ಗೌರಮ್ಮ ಹುರಕಡ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.