ADVERTISEMENT

ಗದಗ: ಜಿಲ್ಲೆಯಲ್ಲಿ ಶಾಂತಿಯುತ ಮತದಾನ

ಬೆಳಿಗ್ಗೆ ಮಂದಗತಿ; ಮಧ್ಯಾಹ್ನ ಉತ್ಸಾಹ; ಸಂಜೆ ಚುರುಕು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 19:45 IST
Last Updated 23 ಏಪ್ರಿಲ್ 2019, 19:45 IST
ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್‌ ಪಾಟೀಲ ಅವರು ಮಂಗಳವಾರ ಹುಲಕೋಟಿಯ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯ ಮತಗಟ್ಟೆ ಸಂಖ್ಯೆ 139 ರಲ್ಲಿ ಮತ ಚಲಾಯಿಸಿ, ಬಳಿಕ ಶಾಹಿ ಗುರುತು ತೋರಿಸಿದರು
ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್‌ ಪಾಟೀಲ ಅವರು ಮಂಗಳವಾರ ಹುಲಕೋಟಿಯ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯ ಮತಗಟ್ಟೆ ಸಂಖ್ಯೆ 139 ರಲ್ಲಿ ಮತ ಚಲಾಯಿಸಿ, ಬಳಿಕ ಶಾಹಿ ಗುರುತು ತೋರಿಸಿದರು   

ಗದಗ: ಕೆಲವು ಮತಗಟ್ಟೆಗಳಲ್ಲಿ, ಮತಯಂತ್ರಗಳಲ್ಲಿ ಕಾಣಿಸಿಕೊಂಡ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ ಹೊರತುಪಡಿಸಿದರೆ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆಯಿತು.

ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗದಗ, ರೋಣ, ಶಿರಹಟ್ಟಿ ವಿಧಾನಸಭಾ ಕ್ಷೇತ್ರ ಮತ್ತು ಬಾಗಲಕೋಟೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನರಗುಂದ ಮತಕ್ಷೇತ್ರದಲ್ಲಿ ಸಂಜೆ 6 ಗಂಟೆಯವರೆಗೆ ಶೇ–––ರಷ್ಟು ಮತದಾನವಾಗಿದೆ.

ಜಿಲ್ಲೆಯಲ್ಲಿ 959 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಯವರೆಗೆ ಮುಂದುವರಿಯಿತು. ಸಂಜೆ 6 ಗಂಟೆ ಕಳೆದರೂ, ಕೆಲವು ಮತಗಟ್ಟೆಗಳಲ್ಲಿ ತಮ್ಮ ಸರದಿಗಾಗಿ ಕಾಯುತ್ತಾ ನಿಂತಿದ್ದ ಮತದಾರರಿಗೆ ಮತದಾನಕ್ಕೆ ಅವಕಾಶ ನೀಡಲಾಯಿತು.

ADVERTISEMENT

ಮಂಗಳವಾರ ಜಿಲ್ಲೆಯಲ್ಲಿ 38 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಉರಿ ಬಿಸಿಲನ್ನೂ ಲೆಕ್ಕಿಸದೆ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು. ಬೆಳಿಗ್ಗೆ ಮತದಾನ ಮಂದಗತಿಯಲ್ಲಿತ್ತು.ಮೊದಲ ಎರಡು ಗಂಟೆಗಳ ಅವಧಿಯಲ್ಲಿ ಶೇ 6ರಷ್ಟು ಮತದಾನ ಮಾತ್ರ ದಾಖಲಾಗಿತ್ತು. 11 ಗಂಟೆ ಸುಮಾರಿಗೆ ಈ ಪ್ರಮಾಣವು ಶೇ 19ಕ್ಕೆ ಏರಿತು. 11ರಿಂದ ಮಧ್ಯಾಹ್ನ 3ರ ಸಮಯದಲ್ಲಿ ಚುರುಕಿನ ಮತದಾನ ನಡೆಯಿತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಜಿಲ್ಲೆಯ ಶೇ 34 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಪ್ರಮಾಣವು ಶೇ 50ಕ್ಕೆ ಏರಿಕೆ ಕಂಡಿತು.ಕೊನೆಯ ಮೂರು ಗಂಟೆಗಳ ಅವಧಿಯಲ್ಲಿ ಮತದಾರರು ಉತ್ಸಾಹದಿಂದ ಮತಗಟ್ಟುಗಳತ್ತ ಹೆಜ್ಜೆ ಹಾಕಿದರು. ಸಂಜೆ 5ರ ಹೊತ್ತಿಗೆಲ್ಲ ಜಿಲ್ಲೆಯಲ್ಲಿ ಶೇ 60.95ರಷ್ಟು ಮತದಾನ ದಾಖಲಾಯಿತು.

ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌ ಪಾಟೀಲ ಅವರು ತಮ್ಮ ಸಹೋದರ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ ಪಾಟೀಲ ಅವರೊಂದಿಗೆ ಸ್ವಗ್ರಾಮ ಹುಲಕೋಟಿಯ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆ, ಮತಗಟ್ಟೆ ಸಂಖ್ಯೆ 139 ರಲ್ಲಿ ಮತ ಚಲಾಯಿಸಿದರು. ವಿಧಾನ ಪರಿಷತ್‌ ಸದಸ್ಯ ಎಸ್‌.ವಿ ಸಂಕನೂರ ಅವರು ಗದುಗಿನ ನಗರಸಭೆ ಕಾಲೇಜಿನ ಮತಗಟ್ಟೆಯಲ್ಲಿ ಮತ್ತು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ಗದುಗಿನ ಕೆವಿಎಸ್ಆರ್ ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಮತಯಂತ್ರದಲ್ಲಿ ದೋಷ: ಜಿಲ್ಲೆಯ ರೋಣ, ಗಜೇಂದ್ರಗಡ, ಲಕ್ಕುಂಡಿ, ಡಂಬಳ, ನರೇಗಲ್‌ ಸೇರಿದಂತೆ ಕೆಲವೆಡೆ ಮತಗಟ್ಟೆಗಳಲ್ಲಿ, ಮತಯಂತ್ರಗಳಲ್ಲಿ ತಾಂತ್ರಿಕ ಲೋಪ ಕಂಡುಬಂದಿದ್ದು, ಮತದಾನಕ್ಕೆ ಸ್ವಲ್ಪ ವಿಳಂಬವಾಯಿತು. ಉಳಿದೆಡೆ ಶಾಂತಿಯುತವಾಗಿ ಮತದಾನ ನಡೆಯಿತು. ನರಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ರೋಣ ತಾಲ್ಲೂಕಿನ ಹುಲ್ಲೂರ ಗ್ರಾಮದಲ್ಲಿನ ಎರಡು ಮತಗಟ್ಟೆಗಳಲ್ಲಿ ಇವಿಎಂ ಕೈ ಕೊಟ್ಟಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು, ಕೆಲ ಹೊತ್ತಿನ ಬಳಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು. ಗದಗದಲ್ಲಿದ್ದ ಸುವ್ಯವಸ್ಥಿತ ಮತಯಂತ್ರವನ್ನು ತೆಗೆದುಕೊಂಡು ಬಂದು ಮತದಾನಕ್ಕೆ ಅನುವು ಮಾಡಿಕೊಡಲಾಯಿತು.

ಮತದಾನಕ್ಕಾಗಿ ಬೆಂಗಳೂರಿನಿಂದ ಬಂದರು: ಬೆಂಗಳೂರು,ಮಂಗಳೂರು, ಪುಣೆ, ಗೋವಾದಲ್ಲಿ ಕೆಲಸ ಮಾಡುತ್ತಿರುವ ಜಿಲ್ಲೆಯ ನೂರಾರು ಯುವಕ, ಯುವತಿಯರು ಮತದಾನದ ಹಿನ್ನೆಲೆಯಲ್ಲಿ ಮಂಗಳವಾರ ಸ್ವಗ್ರಾಮಕ್ಕೆ ಮರಳಿದ್ದರು.ಕೆಲವರು ಬೆಂಗಳೂರಿನಿಂದ ಮಂಗಳವಾರ ಬೆಳಿಗ್ಗೆ ವಿಶೇಷ ರೈಲಿನಲ್ಲಿ ಹೊರಟು, ಮಧ್ಯಾಹ್ನದ ವೇಳೆಗೆ ಸ್ವಗ್ರಾಮ ತಲುಪಿದ್ದರು. ‘ಪ್ರತಿ ಮತವೂ ಅಮೂಲ್ಯ.ಮತದಾನ ಮಾಡಲೆಂದೇ ಬೆಂಗಳೂರಿನಿಂದ ಊರಿಗೆ ಬಂದಿದ್ದೇವೆ’ ಎಂದು ಸೊರಟೂರು ಗ್ರಾಮದ ಯುವಕರಾದ ಸುಭಾಶ್‌ ಮಾಡಳ್ಳಿ, ಪ್ರಸನ್ನ ಸೊರಟೂರ, ವಸಂತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.