
ಗದಗ: ‘ಪ್ರತಿಯೊಬ್ಬರ ದೈನಂದಿನ ಚಟುವಟಿಕೆಗಳಲ್ಲಿ ಗಣಿತ ಅವಿಭಾಜ್ಯ ಅಂಗವಾಗಿದೆ. ಗಣಿತವು ವಿದ್ಯಾರ್ಥಿಗಳಲ್ಲಿನ ಸಾಮಾನ್ಯಜ್ಞಾನದ ಅರಿವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ವಿಷಯವಾಗಿದೆ’ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಎಚ್.ಕೆ.ಪಾಟೀಲ ಪ್ರತಿಷ್ಠಾನ, ಜಿಎನ್‌ಟಿಟಿಎಫ್ ಗದಗ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಗರದ ಪಂ.ಭೀಮಸೇನ ಜೋಶಿ ರಂಗಮಂದಿರದಲ್ಲಿ ಆಯೋಜಿಸಿದ್ದ ಎರಡನೇ ಹಂತದ ತಾಲ್ಲೂಕು ಮಟ್ಟದ ಗಣಿತ ಬಾಲಭಾಸ್ಕರ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
‘ಆರ್ಯಭಟ, ಭಾಸ್ಕರರಂಥ ಗಣಿತ ಪಂಡಿತರು ಜನಿಸಿದ ಭೂಮಿ ಭಾರತ. ಇಂಥಹ ನಾಡಿನಲ್ಲಿರುವ ಮಕ್ಕಳು ಬಾಲ್ಯದಿಂದಲೇ ಗಣಿತದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ಗಣಿತವನ್ನು ಶಿಸ್ತುಬದ್ಧವಾಗಿ, ರಚನಾತ್ಮಕವಾಗಿ, ಅತ್ಯಂತ ಉತ್ಸಾಹದಿಂದ ಕಲಿತು ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬೇಕು’ ಎಂದರು.
ಜಿಎನ್‌ಟಿಟಿಎಫ್‌ನ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ‘ವಿದ್ಯಾರ್ಥಿಗಳು ಬಾಲ್ಯದಿಂದಲೇ ಕಲಿಕೆಯಲ್ಲಿ ಶ್ರದ್ಧೆ, ಶಿಸ್ತು, ಆಸಕ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಬಹು ಆಸಕ್ತಿಯಿಂದ ಮೊದಲನೇ ಸುತ್ತಿನಲ್ಲಿ ಭಾಗವಹಿಸಿ ಎರಡನೇ ಹಂತಕ್ಕೆ ಆಯ್ಕೆಯಾಗಿ ಬಂದಿದ್ದೀರಿ. ಮುಖ್ಯವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದು ಪ್ರತಿಭಾ ಸಾಮರ್ಥ್ಯ ತೋರಿಸಿಕೊಟ್ಟಿದ್ದೀರಿ. ಮುಂಬರುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿಯೂ ಇಷ್ಟೇ ಆಸಕ್ತಿಯಿಂದ ಭಾಗವಹಿಸಬೇಕು’ ಎಂದರು.
ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ್ ನಾಡಗೌಡರ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್.ಬುರಡಿ ಮಾತನಾಡಿದರು. ಎಚ್.ಕೆ.ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಆರ್.ಆರ್.ಓದುಗೌಡರ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮಟ್ಟದ ಒಂದನೇ ಹಂತದ ಸ್ಪರ್ಧೆಯಲ್ಲಿ 13,500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎರಡನೇ ಹಂತದ ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ 1,560ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.