ADVERTISEMENT

ಗದಗ | ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗರಿಷ್ಠ; ಶೌಚಾಲಯ ಸೌಲಭ್ಯ ಕನಿಷ್ಠ

ಮುದೇನಗುಡಿ, ಹುಲ್ಲೂರು, ಕುರಹಟ್ಟಿ, ಕೊತಬಾಳ, ಮುಗಳಿ ಗ್ರಾಮದ ಶಾಲೆಗಳಲ್ಲಿ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 6:32 IST
Last Updated 21 ಜೂನ್ 2025, 6:32 IST
ರೋಣ ಪಟ್ಟಣದ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಶೌಚಾಲಯ
ರೋಣ ಪಟ್ಟಣದ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಶೌಚಾಲಯ   

ರೋಣ: ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕುಗಳ ಪೈಕಿ ರೋಣ ತಾಲ್ಲೂಕು ಕೂಡ ಪ್ರಮುಖವಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ನೀಡಬೇಕಾದ ಕನಿಷ್ಠ ಮೂಲ ಸೌಲಭ್ಯಗಳು ಕೂಡ ದೊರೆಯದಿರುವುದು ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ನೂರಾರು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳಲ್ಲಿ ಕೇವಲ ಒಂದು ಅಥವಾ ಎರಡು ಶೌಚಾಲಯ ಸೌಲಭ್ಯವಿದೆ. ಮೂಲ ಸೌಲಭ್ಯ ಕಲ್ಪಿಸಲು ವಿಫಲವಾದ ಇಲಾಖೆಯ ಕಾರ್ಯವೈಖರಿಯನ್ನು ಸಾರ್ವಜನಿಕರು ಅಣಕಿಸುವಂತಾಗಿದೆ. ತಾಲ್ಲೂಕಿನ ಮುದೇನಗುಡಿ, ಹುಲ್ಲೂರು,ಕುರಹಟ್ಟಿ,ಕೊತಬಾಳ,ಮುಗಳಿ ಸೇರಿದಂತೆ ವಿವಿಧ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರೂ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಷ್ಟು ಮೂತ್ರಾಲಯಗಳಾಗಲಿ ಶೌಚಾಲಯಗಳಾಗಲಿ ಇಲ್ಲದಿರುವುದು ಶೋಚನೀಯವಾಗಿದೆ.

ಕುರಹಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಪಿಂಕ್ ಟಾಯ್ಲೆಟ್

ಮುದೇನಗುಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯು ಹಳೆಯ ಪುಟ್ಟ ಶೌಚಾಲಯ ಹೊಂದಿದ್ದು ನಿರ್ವಹಣೆಯ ಕೊರತೆ ಎದುರಿಸುತ್ತಿದೆ. ನೂತನ ಶೌಚಾಲಯ ನಿರ್ಮಾಣ ಹಂತದಲ್ಲಿದ್ದು ಶಾಲೆ ಪ್ರಾರಂಭವಾದರೂ ನಿರ್ಮಾಣ ಕಾರ್ಯ ಪ್ಲಿಂತ್ ಹಂತವನ್ನು ದಾಟಿಲ್ಲ. ಶೌಚಾಲಯ ನಿರ್ಮಾಣಕ್ಕೆ ಇನ್ನೆಷ್ಟು ದಿನ ಬೇಕು ಎಂಬ ಪ್ರಶ್ನೆ ಹುಟ್ಟು ಹಾಕುತ್ತಿದೆ.

ADVERTISEMENT

ತಾಲ್ಲೂಕಿನ ಹಲವು ಭಾಗಗಳಲ್ಲಿನ ಸರ್ಕಾರಿ ಶಾಲೆಗಳ ಶೌಚಾಲಯಗಳು ಶಿಥಿಲಾವಸ್ಥೆ ತಲುಪಿದ್ದು ಅವುಗಳನ್ನು ಪುನರ್ ನಿರ್ಮಿಸುವ ಅಗತ್ಯವಿದೆ. ಕೆಲವು ಕಡೆ ಸೂಕ್ತ ನಿರ್ವಹಣೆ ಇಲ್ಲದೆ ದುರ್ವಾಸನೆ ಹೊಡೆಯುತ್ತಿದ್ದು ವಿದ್ಯಾರ್ಥಿಗಳು ಅವುಗಳನ್ನೆ ಬಳಸಿಕೊಳ್ಳುವಂತಾಗಿದೆ.

ತಾಲ್ಲೂಕಿನ ಹುಲ್ಲೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯನ್ನು ವಿಲೀನಗೊಳಿಸಿರುವುದರಿಂದ ಪುಟ್ಟ ಶೌಚಾಲಯವನ್ನೆ ಶಾಲೆಯ ಎಲ್ಲ ಮಕ್ಕಳು ಬಳಸುತ್ತಿದ್ದಾರೆ. ಕೇವಲ ಮೂತ್ರಾಲಯಕ್ಕೆ ಮಾತ್ರ ಅವಕಾಶವಿದ್ದು ಶೌಚಕ್ಕೆ ಬಯಲೇ ಗತಿ ಎಂಬ ವಾತಾವರಣವಿದೆ. ಗ್ರಾಮದ ಪದವಿಪೂರ್ವ ಕಾಲೇಜಿನಲ್ಲಿಯೂ ಕೂಡ ಶೌಚಾಲಯ ನಿರ್ಮಾಣ ಮಾಡಿದ್ದು ಪಕ್ಕದಲ್ಲಿರುವ ಹಳ್ಳದ ನೆರೆ ಬಂದು ಆಗಾಗ ಹೂಳು ತುಂಬುತ್ತಿದೆ ಜೊತೆಗೆ ನೀರಿನ ಸಮರ್ಪಕ ಸೌಲಭ್ಯಗಳು ಕೂಡ ಇಲ್ಲ.

ಶಿಥಿಲಾವಸ್ಥೆಯಲ್ಲಿರುವ ಕುರಹಟ್ಟಿ ಗ್ರಾಮದ ಶಾಲೆಯ ಶೌಚಾಲಯ

ಇನ್ನು ಹಲವು ಗ್ರಾಮಗಳಲ್ಲಿ ವಿದ್ಯಾರ್ಥಿನಿಯರಿಗಾಗಿ ಪಿಂಕ್ ಟಾಯ್ಲೆಟ್ ಗಳನ್ನು ನಿರ್ಮಿಸಲಾಗಿದೆ. ಇಲ್ಲಿಯೂ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯಗಳು ಇಲ್ಲದಂತಾಗಿದೆ. ಮಕ್ಕಳಿಗೆ ಸ್ವಚ್ಛತೆಯ ಪಾಠ ಹೇಳಬೇಕಾದ ಶಿಕ್ಷಣ ಇಲಾಖೆಯೇ ನೈರ್ಮಲ್ಯದ ಕುರಿತು ಅಜಾಗೃತಿ ವಹಿಸುತ್ತಿರುವುದು ಸಾರ್ವಜನಿಕರಲ್ಲಿ ಬೇಸರ ಉಂಟು ಮಾಡಿದೆ.

ದುರಾದೃಷ್ಟವಶಾತ್ ಇಂದಿನವರೆಗೂ ಸರ್ಕಾರಿ ಶಾಲೆಗಳಿಗೆ ಶೌಚಾಲಯದಂತಹ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲು ಸಾಧ್ಯವಾಗುತ್ತಿಲ್ಲ.
– ಮಲ್ಲಿಕಾರ್ಜುನ ನಾಯ್ಕರ, ಕುರಟ್ಟಿ ಗ್ರಾಮದ ನಿವಾಸಿ
ಶೌಚಾಲಯಗಳ ಕೊರತೆಯ ಬಗ್ಗೆ ಈಗಾಗಲೇ ಜಿಲ್ಲಾ ಪಂಚಾಯಿತಿಗೆ ಇಲಾಖೆ ವತಿಯಿಂದ ಪತ್ರ ಬರೆದಿದ್ದು ಶೀಘ್ರದಲ್ಲಿಯೇ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.
– ಎಂ.ಎ.ಫನಿಬಂದ, ರೋಣ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ
ಹಳ್ಳದ ಪ್ರವಾಹಕ್ಕೆ ಪದೇ ಪದೇ ಸಿಲುಕುವ ಹುಲ್ಲೂರು ಪದವಿ ಪೂರ್ವ ಕಾಲೇಜಿನ ಶೌಚಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.