
ಗದಗ: ‘ಇಂದಿನ ಒತ್ತಡದ ಬದುಕಿನಲ್ಲಿ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯಕ್ಕೆ ಒತ್ತು ನೀಡುವುದು ಅವಶ್ಯಕ’ ಎಂದು ನ್ಯಾಯಾಧೀಶ ಗಂಗಾಧರ ಸಿ.ಎಂ. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಹಾಗೂ ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಗರದ ಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ನಿತ್ಯದ ಬದುಕಿನಲ್ಲಿ ಒತ್ತಡ, ಆತಂಕ, ನಿರೀಕ್ಷೆ, ಇತ್ಯಾದಿಗಳು ಅಡಕವಾಗಿವೆ. ಮಾನಸಿಕ ಆರೋಗ್ಯವು ಮಾನವನ ಮೂಲಭೂತ ಹಕ್ಕಾಗಿದೆ. ವಿದ್ಯಾರ್ಥಿ ಜೀವನ ಮಹತ್ವದ್ದಾಗಿದ್ದು ಈ ಸಮಯದಲ್ಲಿ ನಿರಾಶೆ, ಹೋಲಿಕೆ, ಒಂಟಿತನ, ಭಾವನೆಗಳ ತೊಳಲಾಟ ಸಾಮಾನ್ಯವಾಗಿರುತ್ತದೆ. ಮಾನಸಿಕ ಅನಾರೋಗ್ಯ ಎಲ್ಲರನ್ನು ಬಾಧಿಸುವಂತಹದ್ದಾಗಿದ್ದು, ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ’ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಮಾತನಾಡಿ, ‘ಮಾನಸಿಕ ಆರೋಗ್ಯ ಪ್ರತಿಯೊಬ್ಬರಿಗೆ ಅವಶ್ಯಕವಾಗಿದ್ದು, ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯ ಪಡೆಯಬೇಕು’ ಎಂದು ತಿಳಿಸಿದರು.
‘ಜಿಲ್ಲಾ ಮಾನಸಿಕ ಆರೋಗ್ಯ ಪುನರ್ವಿಮರ್ಶಾ ಮಂಡಳಿಯು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮೂಲಭೂತ ಹಕ್ಕುಗಳನ್ನು ನೀಡಲು ಸಹಾಯ ಮಾಡುತ್ತದೆ. ಇದರ ಸದುಪಯೋಗ ಪಡೆಯಬೇಕು’ ಎಂದು ತಿಳಿಸಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನ ಅಧಿಕಾರಿ ಡಾ. ರಾಜೇಂದ್ರ ಸಿ. ಬಸರಿಗಿಡದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್.ನೀಲಗುಂದ, ಸಹಾಯಕ ಕಾನೂನು ಅಭಿರಕ್ಷಕ ಗುರುರಾಜ ಬಿ. ಗೌರಿ, ಜಿಲ್ಲಾ ಮಾನಸಿಕ ಆರೋಗ್ಯ ಪುನರ್ವಿಮರ್ಶಾ ಮಂಡಳಿ ಸದಸ್ಯ ಆರ್.ಎಚ್. ಪಾಟೀಲ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚೌವಾಣ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿನಿಯರಾದ ಮಂಜುಶ್ರೀ ಹಿರೇಮಠ ಮತ್ತು ಅನುಶ್ರೀ ಪ್ರಾರ್ಥಿಸಿದರು. ಪ್ರೊ. ಆನಂದ ವಿ. ದೇಸಾಯಿಪಟ್ಟಿ ಕಾರ್ಯಕ್ರಮ ನಿರೂಸಿದರು.
ಅತಿಯಾದ ಬೇಸರ ನಿರಾಸಕ್ತಿ ಸುಸ್ತು ಏಕಾಗ್ರತೆ ಕೊರತೆ ನಕಾರಾತ್ಮಕ ಆಲೋಚನೆಗಳು ಮಾನಸಿಕ ಕಾಯಿಲೆಗಳು ಬರಲು ಕಾರಣವಾಗಿದೆ. ಮಾನಸಿಕವಾಗಿ ಸದೃಢರಾಗಲು ಸೂಕ್ತ ಸಂದರ್ಭದಲ್ಲಿ ಮನೋವೈದ್ಯರನ್ನು ಕಾಣಬೇಕು-ಡಾ. ಸೋಮಶೇಖರ ಬಿಜ್ಜಳ ಮನೋವೈದ್ಯ
ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಅತ್ಯವಶ್ಯಕ. ವಿದ್ಯಾರ್ಥಿಗಳು ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವುದರ ಜತೆಗೆ ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಮುಂದಾಗಬೇಕು-ಪ್ರೊ. ಎಂ.ಎಂ.ಬುರುಡಿ ಪ್ರಾಂಶುಪಾಲ ಬಸವೇಶ್ವರ ಮಹಾವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.