ADVERTISEMENT

ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು: ತೋಂಟದ ಶ್ರೀ

​ಪ್ರಜಾವಾಣಿ ವಾರ್ತೆ
Published 23 ಮೇ 2020, 13:53 IST
Last Updated 23 ಮೇ 2020, 13:53 IST
ಡಾ. ಸಿದ್ಧರಾಮ ಸ್ವಾಮೀಜಿ
ಡಾ. ಸಿದ್ಧರಾಮ ಸ್ವಾಮೀಜಿ   

ಗದಗ: ‘ಕಮೀಷನ್‌ ಆಸೆಗಾಗಿ ಸರ್ಕಾರವು ಕಪ್ಪತಗುಡ್ಡದಲ್ಲಿ ಮತ್ತೆ ಗಣಿಗಾರಿಕೆಗೆ ಅವಕಾಶ ಕೊಡಬಾರದು. ಅವಕಾಶ ನೀಡಿದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯ’ ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಖಡಕ್‌ ಎಚ್ಚರಿಕೆ ನೀಡಿದರು.

ಶನಿವಾರ ಇಲ್ಲಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಎಸ್‌.ಆರ್ ಹಿರೇಮಠ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು,‘ಲಾಕ್‌ಡೌನ್‌ನಿಂದ ಸರ್ಕಾರದ ಬೊಕ್ಕಸಕ್ಕೆ ಹಣದ ಕೊರತೆಯಾಗಿದೆಯೆಂದು ಅರಣ್ಯ ಮತ್ತು ಖನಿಜ ಸಂಪತ್ತು ಕೊಳ್ಳೆಹೊಡೆಯಲು ಅವಕಾಶ ನೀಡಬಾರದು’ ಎಂದರು.

‘ಸರ್ಕಾರ ಈಗಾಗಲೇ ಬೊಕ್ಕಸ ತುಂಬಿಕೊಳ್ಳಲು ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಈಗ ಗಣಿಗಾರಿಕೆ ಮೂಲಕವೂ ಬೊಕ್ಕಸ ಭರ್ತಿ ಮಾಡುವ ಚಿಂತನೆಯಿದ್ದರೆ, ತಕ್ಷಣ ಅದರಿಂದ ಹಿಂದೆ ಸರಿಯಬೇಕು’ ಎಂದು ಸ್ವಾಮೀಜಿ ಹೇಳಿದರು.

ADVERTISEMENT

ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಪೋಸ್ಕೊ ಕಂಪೆನಿ ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿ ನೆಲೆಯೂರಲು ಪ್ರಯತ್ನಿಸಿತ್ತು. ಆದರೆ, ಅಂದು ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ನಡೆದ ಹೋರಾಟವು ಈ ಕಂಪೆನಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮತ್ತೆ ಯಡಿಯೂರಪ್ಪ ಅವರ ಅವಧಿಯಲ್ಲೇ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ಗುಮಾನಿ ಎದ್ದಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು’ ಎಂದು ಸ್ವಾಮೀಜಿ ಆಗ್ರಹಿಸಿದರು.

‘ಯಾವುದೇ ಕಾರಣಕ್ಕೂ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಬಿಡುವುದಿಲ್ಲ’ ಎಂದು ಎಸ್‌.ಆರ್‌ ಹಿರೇಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.