
ಗದಗ: ‘ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ನೆಲದಿಂದ ಪುಟಿದೆದ್ದು ಬಂದವರು. ಬದುಕಿನಲ್ಲಿ ಎದುರಾದ ಹಲವಾರು ಸವಾಲುಗಳನ್ನು ಮೆಟ್ಟಿ ನಿಂತು ಶಿಕ್ಷಕಿಯಾದರು. ಇಡೀ ಶಿಕ್ಷಕ ಕುಲಕ್ಕೆ ಫುಲೆ ಸ್ಫೂರ್ತಿಯ ಚಿಲುಮೆ. ಬಹು ದೊಡ್ಡ ಪ್ರೇರಣಾಶಕ್ತಿ’ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಗದಗ ಜಿಲ್ಲಾ ಘಟಕದ ವತಿಯಿಂದ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವದ ಅಂಗವಾಗಿ ನಗರದ ಬಾಬು ಜಗಜೀವನ್ ರಾಮ್ ಸಭಾ ಭವನದಲ್ಲಿ ಸೋಮವಾರ ನಡೆದ ಉತ್ತಮ ಶಿಕ್ಷಕಿಯರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಬಸವಣ್ಣನವರು 800 ವರ್ಷಗಳ ಹಿಂದೆಯೇ ಮಹಿಳೆ ಕೂಡ ಗಂಡಿನಂತೆ ಸಮಾನಳು; ಅವಳಿಗೆ ಆರ್ಥಿಕ, ಸಾಮಾಜಿಕ, ಧಾರ್ಮಿಕ ಸ್ವಾತಂತ್ರ್ಯ ಸಿಗಬೇಕು ಎಂದಿದ್ದರು. ಈ ಶ್ರೇಣಿಕೃತ ವ್ಯವಸ್ಥೆಯಲ್ಲಿ ಇವತ್ತಿಗೂ ಮುಂದುವರಿದ ಸಮಾಜದಲ್ಲಿನ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಇಲ್ಲ’ ಎಂದರು.
‘ಮನು ಸಂಸ್ಕೃತಿ ಎತ್ತಿಹಿಡಿಯುವ ಜನರು ಇವತ್ತು ದೇಶ ಆಳುತ್ತಿದ್ದಾರೆ. ಅವರು ಮಹಿಳೆಯರಿಗೆ ಸಮಾನ ಅವಕಾಶ ನೀಡುವುದಿಲ್ಲ. ಮಕ್ಕಳು ಹಡೆಯುವುದು ಮಾತ್ರ ಹೆಣ್ಣಿನ ಕೆಲಸ ಎನ್ನುತ್ತಾರೆ. ಇಂತಹ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಒದಗಿಸಿ ಅವರನ್ನು ಮೇಲೆತ್ತುವ ಕೆಲವನ್ನು ಕಾಂಗ್ರೆಸ್ ಮಾಡುತ್ತಿದೆ’ ಎಂದರು.
‘ಸಂವಿಧಾನದ 73, 74ನೇ ತಿದ್ದುಪಡಿ ಮೂಲಕ ಸ್ಥಳೀಯ ಆಡಳಿತದಲ್ಲಿ ಮಹಿಳೆಯರಿಗೆ ರಾಜಕೀಯ ಅವಕಾಶ ನೀಡಲಾಯಿತು. ಈಗ ಸಾಮಾಜಿಕ ನ್ಯಾಯ ಸಿಕ್ಕಿದೆ’ ಎಂದು ಹೇಳಿದರು.
‘ಅಂಬೇಡ್ಕರ್ ರಚಿಸಿದ ಸಂವಿಧಾನವು ಸಮಾನತೆ ನೀಡಿದೆ. ಸಂವಿಧಾನದ ಪೀಠಿಕೆಯ ಆಶಯದಂತೆ ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಕಾಂಗ್ರೆಸ್ಸಿಗರ ಧರ್ಮವೇ ಸಂವಿಧಾನ. ಅದನ್ನು ಆಡಳಿತದಲ್ಲಿ ಅನುಷ್ಠಾನ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ’ ಎಂದರು.
‘ಸಮಾಜದಲ್ಲಿ ಜಾತಿ ಕಲಹಗಳು ಹೆಚ್ಚುತ್ತಿವೆ. ಇವು ಜನರಲ್ಲಿ ಒಡಕು ಮೂಡಿಸುತ್ತಿವೆ. ಶಿಕ್ಷಕರು ಮಕ್ಕಳಿಗೆ ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಏನಿದೆ? ಅದನ್ನು ಅರಿತುಕೊಂಡು ಹೇಗೆ ಬದುಕಬೇಕು ಎಂಬುದನ್ನಷ್ಟೇ ಕಲಿಸಿದರೆ ಸಾಕು. ಇಂತಹ ಶಿಕ್ಷಣ ಸಿಕ್ಕರೆ ಆ ಮಕ್ಕಳು ದೊಡ್ಡ ಅಧಿಕಾರಿ, ಆಡಳಿತಗಾರರಾಗುತ್ತಾರೆ’ ಎಂದು ತಿಳಿಸಿದರು.
ದಲಿತ ಸಾಹಿತ್ಯ ಅಕಾಡೆಮಿಯ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ.ಕುಂದರಗಿ ಅಧ್ಯಕ್ಷತೆ ವಹಿಸಿದ್ದರು. ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ಕಾಂಗ್ರೆಸ್ ಮುಖಂಡರಾದ ಸುಜಾತಾ ದೊಡ್ಡಮನಿ, ಬಿ.ಬಿ.ಅಸೂಟಿ, ಎಸ್.ಎನ್.ಬಳ್ಳಾರಿ, ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಮುತ್ತು ಬಿಳೆಯಲಿ ಇದ್ದರು.
ಸಾವಿತ್ರಿಬಾಯಿ ಫುಲೆ ಅವರು ಸನಾತನವನ್ನು ಮೆಟ್ಟಿ ನಿಂತು ದಲಿತರು ಹಿಂದುಳಿದವರಿಗೆ ಶಿಕ್ಷಣ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅದೇ ಸಾಲಿನಲ್ಲಿ ಫಾತಿಮಾ ಶೇಖ್ ಕೂಡ ಸೇರುತ್ತಾರೆಎಫ್.ಎಚ್.ಜಕ್ಕಪ್ಪನವರ ವಿಧಾನ ಪರಿಷತ್ ಸದಸ್ಯ
ಎಲ್ಲ ವರ್ಗದ ಜನರು ಶಿಕ್ಷಿತರಾಗಬೇಕೆಂಬ ಬಹುದೊಡ್ಡ ಕನಸು ಕಟ್ಟಿದ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿ ಬಾ ಫುಲೆಯವರ ಜಯಂತಿಯನ್ನು ಸಂಘಟನೆಗಳ ಒತ್ತಡದ ಮೇಲೆ ಸರ್ಕಾರ ಆಚರಣೆಗೆ ತಂದಿರುವುದುಸ್ವಾಗಾತಾರ್ಹ ಶರೀಫ ಬಿಳೆಯಲಿ ಚಿಂತಕ
‘ದಲಿತ ಸಾಹಿತಿಗಳು ವಸ್ತುನಿಷ್ಠವಾಗಿ ಸತ್ಯವಾಗಿ ಬರೆಯುತ್ತಾರೆ. ಆದರೆ ಆ ಸಾಹಿತ್ಯದ ನೈಜ ಪ್ರಭಾವ ಸಮಾಜದ ಮೇಲೆ ಆಗುತ್ತಿಲ್ಲ’ ಎಂದು ಸಚಿವ ಎಚ್.ಕೆ.ಪಾಟೀಲ ಬೇಸರ ವ್ಯಕ್ತಪಡಿಸಿದರು. ‘ದಲಿತ ಲೇಖಕರು ಸಾಹಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ದಲಿತ ಸಾಹಿತ್ಯ ಅಕಾಡೆಮಿ ಪ್ರಾರಂಭ ಆಯಿತು. ಒಂದು ಕಾಲದಲ್ಲಿ ಎಲ್ಲ ಪತ್ರಿಕೆಗಳು ಶೋಷಿತ ವರ್ಗದಿಂದ ಬಂದಿರುವ ಲೇಖಕರ ಸಾಹಿತ್ಯ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಆ ಪ್ರಮಾಣ ಈಗ ಕಡಿಮೆ ಆಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.