ಗದಗ: ‘ಭಾರತೀಯ ಸೇನೆಯ ಯೋಧರು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಒಂಬತ್ತು ಉಗ್ರರ ಅಡಗುತಾಣಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿದ್ದಾರೆ. ಪಾಕ್ ಇನ್ನು ಮುಂದಾದರೂ ಬುದ್ಧಿ ಕಲಿಯಬೇಕು. ಇಲ್ಲವಾದರೆ ಸರ್ವನಾಶವಾಗುವುದು ಖಂಡಿತ’ ಎಂದು ಶಾಸಕ ಸಿ.ಸಿ.ಪಾಟೀಲ ತಿಳಿಸಿದರು.
‘ಏ.22 ಭಾರತೀಯರಿಗೆ ಕರಾಳ ದಿನ. ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಗೆ 26 ಮಂದಿ ಪ್ರವಾಸಿಗರು ಹತರಾದರು. ಧರ್ಮ ಕೇಳಿ ಮನುಷ್ಯರನ್ನು ಕೊಂದಿದ್ದು ಉಗ್ರರ ಮತಾಂಧತೆ ತೋರಿಸುತ್ತದೆ. ಈ ಕೃತ್ಯದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಲಷ್ಕರ್-ಎ-ತಯಬಾ ಸಂಘಟನೆಯ ಕೈವಾಡ ಇರುವುದರನ್ನು ಭಾರತೀಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ದೇಶಭಕ್ತ ಭಾರತೀಯರು ಉಗ್ರರ ಈ ದುಷ್ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ಪ್ರತೀಕಾರಕ್ಕೆ ಒತ್ತಾಯಿಸಿದರು. ದೇಶಭಕ್ತರ ಮನವಿಗೆ ಸ್ಪಂದಿಸಿದ ಪ್ರಧಾನಿ ಮೋದಿ, ಈ ಘಟನೆಗೆ ಕಾರಣರಾದವರನ್ನು ಅವರ ಊಹೆಗೂ ನಿಲುಕದ ರೀತಿಯಲ್ಲಿ ಶಿಕ್ಷಿಸುವುದಾಗಿ ಹೇಳಿದ್ದರು. ಅದರಂತೆ ಮಂಗಳವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಭಾರತೀಯ ಯೋಧರು ಉಗ್ರರ ಕ್ಯಾಂಪ್‌ಗಳ ಮೇಲೆ ನಿಖರ ದಾಳಿ ನಡೆಸಿ, ಎಲ್ಲರನ್ನೂ ಕೊಂದು ಹಾಕಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಭಾರತೀಯ ಸೈನಿಕರನ್ನು ದೇಶ ಅಭಿನಂದಿಸುತ್ತದೆ’ ಎಂದರು.
‘ಉಗ್ರರ ಮೇಲೆ ದಾಳಿ ನಡೆಸುವ ಸಂಬಂಧ ಪ್ರಧಾನಿ ಮೋದಿ ಅವರು ಭಾರತೀಯ ಸೇನೆಗೆ ಪರಮಾಧಿಕಾರ ನೀಡಿದ್ದರು. ಅಜಿತ್ ಡೊಭಾಲ್ ನೇತೃತ್ವದಲ್ಲಿ ಸೇನೆಯು ನಿಖರ ಕಾರ್ಯಾಚರಣೆ ನಡೆಸಿ, ಶತ್ರುಗಳನ್ನು ಸಂಹರಿಸಿದೆ. ಈ ಕಾರ್ಯಾಚರಣೆಯಲ್ಲಿ ಚೀನಾ ಯುದ್ಧ ವಿಮಾನಗಳು ಧ್ವಂಸಗೊಂಡಿರುವುದು ನಿಜವೇ ಆಗಿದ್ದಲ್ಲಿ ಚೀನಾಕ್ಕೂ ದೊಡ್ಡ ಮುಖಭಂಗ ಆಗಲಿದೆ’ ಎಂದು ಹೇಳಿದರು.
‘ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ರಾಜತಾಂತ್ರಿಕ ನಡೆಯಿಂದಲೂ ಭಾರತ ದಿಗ್ಬಂಧನ ಹಾಕುತ್ತಿದೆ. ಸಿಂಧೂ ನದಿಯ ಹರಿವಿಗೆ ತಡೆಯೊಡ್ಡಿದೆ. ಪಾಕಿಸ್ತಾನ ಈಗಾಗಲೇ ಆರ್ಥಿಕ ಹಾಗೂ ರಾಜಕೀಯವಾಗಿ ದಿವಾಳಿ ಎದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ನೀರಿಗೂ ಹಾಹಾಕಾರ ಉಂಟಾದರೆ ಅಲ್ಲಿ ಆಂತರಿಕ ಕ್ಷೋಭೆ ಉಂಟಾಗಿ ಜನರು ದಂಗೆ ಏಳುವ ಸಮಯ ದೂರವಿಲ್ಲ’ ಎಂದರು.
‘ಈಚೆಗೆ ಸ್ವಾಮೀಜಿಯೊಬ್ಬರು, ಪ್ರಪಂಚದ ಭೂಪಟದಲ್ಲಿ ಒಂದು ರಾಷ್ಟ್ರ ಅಳಿಸಿಹೋಗಲಿದೆ ಎಂದು ಭವಿಷ್ಯ ನುಡಿದಿದ್ದರು. ಪಾಕಿಸ್ತಾನ ಈಗಲೇ ಬುದ್ಧಿ ಕಲಿತುಕೊಂಡು ಹಿಂದಕ್ಕೆ ಸರಿದರೆ ಸರಿ. ಇಲ್ಲವೇ, ಯುದ್ಧೋನ್ಮಾದದಿಂದ ಮುಂದಡಿ ಇಟ್ಟರೆ ಅವರ ಭವಿಷ್ಯ ನಿಜವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ’ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ಶಾಸಕ ಡಾ. ಚಂದ್ರು ಲಮಾಣಿ, ಮುಖಂಡರಾದ ಪ್ರಶಾಂತ್ ನಾಯ್ಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.