ADVERTISEMENT

ಮುಂಡರಗಿ: ಮತಗಟ್ಟೆಗಳಲ್ಲಿ ಅತಿಹೆಚ್ಚು ಮಹಿಳಾ ಮತದಾರರು

ಅಂಗವಿಕಲ ಮತದಾರರಿಗೆ ಗಾಲಿಕುರ್ಚಿ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 7 ಮೇ 2024, 14:36 IST
Last Updated 7 ಮೇ 2024, 14:36 IST
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮಹಿಳೆಯರು ಸರದಿಯಲ್ಲಿ ನಿಂತು ಮತದಾನ ಮಾಡಿದರು
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮಹಿಳೆಯರು ಸರದಿಯಲ್ಲಿ ನಿಂತು ಮತದಾನ ಮಾಡಿದರು   

ಮುಂಡರಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಳವಾರ ಶಾಂತಿ ಹಾಗೂ ಸುವ್ಯವಸ್ಥಿತವಾಗಿ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯಿತು.

ಪ್ರತೀ ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಮಧ್ಯಾಹ್ನದವರೆಗೂ ಎಲ್ಲೆಡೆಯಲ್ಲೂ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವುದು ಗಮನ ಸೆಳೆಯಿತು.

ಮಧ್ಯಾಹ್ನ 12 ಗಂಟೆಯವರೆಗೆ ಮತದಾನ ಬಿರುಸಿನಿಂದ ನಡೆಯಿತು. ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಸರದಿಯಲ್ಲಿ ನಿಂತು ಮತಚಲಾಯಿಸಿದರು. ಕೆಲವು ಗ್ರಾಮಗಳಲ್ಲಿ ಮಧ್ಯಾಹ್ನ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದ ಕಾರಣದಿಂದ ಮತದಾನ ನಿಧಾನಗತಿಯಲ್ಲಿ ಸಾಗುತ್ತಿರುವುದು ಕಂಡುಬಂತು. ಸಂಜೆ 4ಗಂಟೆಯಿಂದ 7ಗಂಟೆಯವರೆಗೂ ಪುನಃ ಮತದಾನ ಚುರುಕು ಪಡೆಯಿತು.

ADVERTISEMENT

ಭಾರಿ ಬಿಸಿಲು ಇರುವ ಕಾರಣದಿಂದಾಗಿ ಬಹುತೇಕ ಮತಗಟ್ಟೆಗಳ ಆವರಣಗಳಲ್ಲಿ ಪೆಂಡಾಲ್ ಹಾಕಲಾಗಿತ್ತು. ಕೆಲವು ಸರದಿ ಸಾಲಿನಲ್ಲಿ ನಿಲ್ಲುವ ಮತದಾರರಿಗೆ ತೊಂದರೆಯಾಗದಿರಲಿ ಎಂದು ಬೃಹತ್ ಪ್ಯಾನ್‍ಗಳನ್ನು ಅಳವಡಿಸಲಾಗಿತ್ತು. ಎಲ್ಲ ಮತಗಟ್ಟೆಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲಾಯಿತು. ಆರೋಗ್ಯ ಇಲಾಖೆಯ ಸಿಬ್ಬಂದಿ ಮತದಾರರ ಆರೋಗ್ಯದ ಮೇಲೆ ನಿಗಾ ವಹಿಸಿದ್ದರು.

ವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ವಿಕಲಚೇತನರಿಗೆ ಅನುಕೂಲವಾಗಲಿ ಎನ್ನುವ ಕಾರಣದಿಂದ ಪ್ರತೀ ಮತಗಟ್ಟೆಯಲ್ಲಿ ಗಾಲಿಕುರ್ಚಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಮನೆಯಿಂದ ಮತದಾನ ಮಾಡಲು ನಿರಾಕರಿಸಿದ ಹಾಗೂ ಮನೆಯಿಂದ ಮತದಾನ ಮಾಡುವ ವ್ಯವಸ್ಥೆಯ ಕುರಿತು ಮಾಹಿತಿ ದೊರಕದ ಕೆಲವು ವೃದ್ಧರು ಕುಟುಂಬ ಸದಸ್ಯರ ನೆರವಿನೊಂದಿಗೆ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರು.

ಮಾಜಿ ಸಚಿವ ಎಸ್.ಎಸ್.ಪಾಟೀಲ ಅವರು ಮನೆಯಿಂದ ಮತದಾನ ಮಾಡುವುದನ್ನು ನಿರಾಕರಿಸಿ ತಾಲ್ಲೂಕಿನ ಕಲಕೇರಿ ಗ್ರಾಮದ ಮತಗಟ್ಟೆ ಸಂಖ್ಯೆ 62ರಲ್ಲಿ ಮತದಾರರೊಂದಿಗೆ ಸರದಿಯಲ್ಲಿ ನಿಂತು ಮತಚಲಾಯಿಸಿದರು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಪಟ್ಟಣದ ಎಂ.ಸಿ.ಎಸ್. ಶಾಲೆಯಲ್ಲಿ ತೆರೆಯಲಾಗಿದ್ದ ಮತಗಟ್ಟೆ ಸಂಖ್ಯೆ 42ರಲ್ಲಿ ಮತಚಲಾಯಿಸಿದರು.

ತಹಶೀಲ್ದಾರ್ ಧನಂಜಯ್ ಮಾಲಗತ್ತಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಸಮನಿ, ಸಿಪಿಐ ಮಂಜುನಾಥ ಕುಸುಗಲ್ಲ ಸೇರಿದಂತೆ ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳು ನಿಯಮಿತವಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.