ಮುಳಗುಂದ: ಪಟ್ಟಣ ವ್ಯಾಪ್ತಿಯಲ್ಲಿ ನೀರಿನ ಬರ ಎದುರಾಗಿದೆ. ಎರಡ್ಮೂರು ತಿಂಗಳಿಂದ 10 ದಿನಗಳಿಗೊಮ್ಮೆ ನೀರು ಬರುತ್ತಿದೆ. ಮನೆಯಲ್ಲಿ ಎರಡ್ಮೂರು ದಿನಗಳಿಗೆ ಬಳಕೆ ಆಗುವಷ್ಟು ನೀರು ಸಂಗ್ರಹ ಇರುತ್ತದೆ. ಆದರೆ, 8-10 ದಿನಗಳಾದರೂ ನೀರು ಬರದಿದ್ದಾಗ ದೇವರೇ ನಮ್ಮನ್ನು ಕಾಪಾಡಬೇಕಿದೆ...
– ಹೀಗೆ ಆಕ್ರೋಶಭರಿತ ಅಸಹಾಯಕ ಧ್ವನಿಯಲ್ಲಿ ಹೇಳಿದರು ಸ್ಥಳೀಯರಾದ ಮಹಾಂತೇಶ.
‘ಹತ್ತಿರದಲ್ಲಿ ಬಾವಿ, ಕೆರೆ ಇಲ್ಲ. ನಿಯಮಿತವಾಗಿ ನೀರು ಪೂರೈಸದಿದ್ದರೆ ನಾವು ಎಲ್ಲಿಗೆ ಹೋಗೋದು. ಸ್ಥಳಿಯ ಪಟ್ಟಣ ಪಂಚಾಯಿತಿ ನೀರು ಪೂರೈಕೆಯಲ್ಲಿ ಪದೆಪದೇ ನಿರ್ಲಕ್ಷ್ಯ ವಹಿಸುತ್ತಿದೆ. ತುಂಗಭದ್ರ ನೀರು ಸಹ ಇಲ್ಲದಾಗಿದೆ’ ಎಂದು ಕಿಡಿಕಾರಿದರು.
ಕೆಲವು ದಿನಗಳಿಂದ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಕೈ ಕೊಡುತ್ತಿರುವ ಕಾರಣದಿಂದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸಾರ್ವಜನಿಕರು ನಿತ್ಯ ನೀರಿಗಾಗಿ ಪರಿತಪಿಸುವ ಸ್ಥಿತಿ ಎದುರಾಗಿದೆ.
ಪಟ್ಟಣದ 19 ವಾರ್ಡ್‌ಗಳಿಗೆ ಕೊಳವೆಬಾವಿಗಳ ನೀರು ಮಾತ್ರ ಆಧಾರವಾಗಿದೆ. ಮೂರು ದಿನಕ್ಕೊಮ್ಮೆ ಸರದಿಯಲ್ಲಿ ನೀರು ಸರಬರಾಜು ಆಗುತ್ತಿತ್ತು. ಆದರೆ, ಈಗ ವಾರ– ಹತ್ತು ದಿನಗಳಾದರೂ ನೀರು ಸರಬರಾಜು ಬರುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
‘ಕೆಲವೊಮ್ಮೆ ನೀರು ಎತ್ತುವ ಯಂತ್ರಗಳು ಕೈ ಕೊಟ್ಟಾಗ, ಗಾಳಿ ಮಳೆಗೆ ರಾತ್ರಿ ವೇಳೆ ವಿದ್ಯುತ್ ಕಡಿತ ಮೇಲಿಂದ ಮೇಲೆ ಆಗುತ್ತಿದೆ. ಈ ಕಾರಣದಿಂದ ನೀರು ಸಂಗ್ರಹ ಸಾಧ್ಯವಾಗುತ್ತಿಲ್ಲ. ಪರಿಣಾಮ ನೀರೆತ್ತುವ ಯಂತ್ರಗಳು ಬಂದ್ ಆಗುತ್ತಿವೆ’ ಎಂದು ನೀರು ಪೂರೈಕೆ ಸಿಬ್ಬಂದಿ ತಿಳಿಸಿದ್ದಾರೆ.
ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿ ಒಂದು ವರ್ಷ ಕಳೆದಿದೆ. ಆದರೆ, ಈವರೆಗೂ ನೀರು ಪೂರೈಕೆ ಆಗದ ಹಿನ್ನೆಲೆ ಯಂತ್ರಗಳು ಹಾಳಾಗಿ, ಘಟಕ ಬಂದ್ ಆಗಿದೆ.
ಇದಕ್ಕೆ ಪೂರೈಕೆ ಆಗುತ್ತಿದ್ದ ಕೊಳವೆಬಾವಿ ನೀರು ಕಬ್ಬಿಣಾಂಶ ಹೆಚ್ಚು ಇದೆ ಎನ್ನುವ ಕಾರಣಕ್ಕೆ ಘಟಕವನ್ನು ಸ್ಥಗಿತ ಮಾಡಲಾಗಿದೆ. ಆದರೆ ಪರ್ಯಾಯವಾಗಿ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಮುಂಜಾಗ್ರತೆ ವಹಿಸಲಾಗಿದೆ. ಹೆಚ್ಚುವರಿ ಯಂತ್ರಗಳನ್ನು ಸಂಗ್ರಹ ಸಹ ಮಾಡಿಕೊಂಡಿದ್ದೇವೆ. ಆದರೆ ನೀರಿನ ಸಂಪು ಇರುವ ಕಡೆ ವಿದ್ಯುತ್ ಸಂಪರ್ಕ ಕಡಿತವಾದಾಗ ಈ ರೀತಿ ಸಮಸ್ಯೆ ಆಗಿದೆಮಂಜುನಾಥ ಗುಳೇದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.