ಮುಳಗುಂದ: ಬಹು ಬೇಡಿಕೆಯ ಸೋನಾಲಿಕ್ ತಳಿಯ ದ್ರಾಕ್ಷಿ ಬೆಳೆಯುವ ಮೂಲಕ ರೈತ ಹುಸೇನಸಾಬ ತಹಶೀಲ್ದಾರ ತಮ್ಮ ವರಮಾನವನ್ನು ಪ್ರಸ್ತುತ ವರ್ಷದಲ್ಲಿ ದ್ವಿಗುಣ ಮಾಡಿಕೊಂಡಿದ್ದಾರೆ.
ಗದಗ ತಾಲ್ಲೂಕಿನ ಹುಲಕೋಟಿ ಗ್ರಾಮದ ಹಿರಿಯ ರೈತ ಮೂಲತಃ ಕೃಷಿಯಲ್ಲೇ ಬದುಕು ಕಟ್ಟಿಕೊಂಡವರು. ಇವರು 40 ಎಕರೆ ಜಮೀನು ಹೊಂದಿದ್ದು, ಇದರಲ್ಲಿ 9 ಎಕರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಪ್ರಸ್ತುತ 5 ಎಕರೆ ತೋಟದಲ್ಲಿ 1 ಹೆಕ್ಟೇರ್‌ನಲ್ಲಿ ಥಾಮ್ಸನ್ ತಳಿಯ ದ್ರಾಕ್ಷಿ, 1 ಹೆಕ್ಟೇರ್‌ನಲ್ಲಿ ಸೋನಾಲಿಕ್ ತಳಿಯ ದ್ರಾಕ್ಷಿ ಬೆಳೆದಿದ್ದಾರೆ. ಪ್ರಸ್ತುತ ಉತ್ತಮ ವರಮಾನ ಬಂದಿದ್ದು, ಅದರಲ್ಲೇ ಸೋನಾಲಿಕ್ ತಳಿಗೆ ಹೆಚ್ಚಿನ ಬೇಡಿಕೆ ಒದಗಿ ಬಂದಿದೆ.
‘ದ್ರಾಕ್ಷಿ ಫಸಲು ಆರಂಭದ 2 ವರ್ಷ ಅಷ್ಟಾಗಿ ಲಾಭ ಆಗಿರಲಿಲ್ಲ. ಬಳಿಕ ಎರಡು ವರ್ಷಗಳಿಂದ ಉತ್ತಮ ಆದಾಯ ಬರುತ್ತಿದೆ. ಆರಂಭದಲ್ಲಿ ದ್ರಾಕ್ಷಿ ನಾಟಿ, ಕಸಿ, ರಾಸಾಯನಿಕ ಸಿಂಪರಣೆ ಮಾಡುವುದು ಸೇರಿದಂತೆ ಪ್ರತಿ ಎಕರೆಗೆ₹4 ಲಕ್ಷದಿಂದ ₹5 ಲಕ್ಷ ಖರ್ಚು ಬರುತ್ತದೆ. ನಂತರ ಕ್ರಮೇಣ ಇಳುವರಿ ಹೆಚ್ಚುತ್ತದೆ. ಹೀಗಾಗಿ ಪ್ರಸ್ತುತ ನಮಗೆ ನಿರೀಕ್ಷೆ ಮೀರಿ ಆದಾಯ ಬಂದಿದೆ. ಫಸಲು ಕಟಾವು ಬಂದ 15-20 ದಿನಗಳಲ್ಲಿ ಮುಗಿಯುತ್ತದೆ. ಗದಗ ನಮಗೆ ಉತ್ತಮ ಮಾರುಕಟ್ಟೆ ಒದಗಿಸಿದೆ’ ಎನ್ನುತ್ತಾರೆ ರೈತ ಹುಸೇನಸಾಬ.
‘ದ್ರಾಕ್ಷಿ ಬಹು ವರ್ಷದ ಬೆಳೆಯಾಗಿದ್ದು, ಮೊದಲು ಡಾಗ್ರಾಜ್ 3 ವರ್ಷ ಬೆಳೆಸಿ ನಂತರ ಅದಕ್ಕೆ ತಿಕೋಟಾದಿಂದ ಸೋನಾಲಿಕ್ ಕಸಿ ಮಾಡಿದರೆ ಸುಮಾರು 12 ರಿಂದ 15 ವರ್ಷ ಫಲ ಕೊಡುತ್ತದೆ. ಥಾಮ್ಸನ್ ತಳಿ ರುಚಿ ಮತ್ತು ಒಣ ದ್ರಾಕ್ಷಿಗೆ ಬರುತ್ತದೆ. ಆದರೆ, ಸೋನಾಲಿಕ್ ದ್ರಾಕ್ಷಿ ತಳಿ ಹೆಚ್ಚು ಸಿಹಿ ಇರುವುದರಿಂದ ಜನರಿಗೆ ಇಷ್ಟವಾಗುತ್ತಿದೆ. ಜನರ ಬೇಡಿಕೆಗೆ ಅನುಗುಣವಾಗಿ ಈ ಭಾಗದಲ್ಲೇ ನಾನೇ ಮೊದಲು ನಾಟಿ ಮಾಡಿದ್ದೆ, ಈಗ ಇನ್ನೊಂದಿಬ್ಬರು ರೈತರು ಬೆಳೆಯಲು ಆರಂಭಿಸಿದ್ದಾರೆ’ ಎಂದು ಹುಸೇನಸಾಬ ತಿಳಿಸಿದರು.
ಒಣ ಬೇಸಾಯದ ಜತೆಗೆ ತೋಟಗಾರಿಕೆ ಬೆಳೆಗಳಲ್ಲಿ ಉತ್ತಮ ಆದಾಯ ಕಂಡುಕೊಂಡಿದ್ದಾರೆ. ಸದ್ಯ ಇವರ ತೋಟದಲ್ಲಿ 600 ಲಿಂಬೆ ಸಸಿ ನಾಟಿ ಮಾಡಿದ್ದು ಇನ್ನೂ 3 ವರ್ಷದಲ್ಲಿ ಫಸಲು ಆರಂಭವಾಗಲಿದೆ. 300 ತೆಂಗು, 150 ಸಾಗವಾನಿ ಇದ್ದು, ಈ ಭಾರಿ 4 ಎಕರೆ ಬೆಳ್ಳುಳ್ಳಿ ಬೆಳೆದು ಮಾದರಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ. ದ್ರಾಕ್ಷಿಯ ಮೊದಲ ಕಟಾವು ಸಿಎಂ ಸಿದ್ದರಾಮಯ್ಯ, ಸಚಿವ ಎಚ್.ಕೆ.ಪಾಟೀಲ ಸೇರಿದಂತೆ ಹಲವು ಗಣ್ಯರಿಗೆ ಕಳುಹಿಸಿಕೊಟ್ಟಿದ್ದಾಗಿ ಹೇಳಿದರು.
ಉನ್ನತ ಶಿಕ್ಷಣ ಓದಿದ ಎಲ್ಲರಿಗೂ ನೌಕರಿ ಬೇಕು ಎಂದರೆ ಸರ್ಕಾರ ಎಲ್ಲರಿಗೂ ನೌಕರಿ ಕೊಡಲು ಸಾಧ್ಯವಿಲ್ಲ ವಿದ್ಯಾವಂತರು ಕೃಷಿಯತ್ತ ಚಿತ್ತ ಹರಿಸಬೇಕುಹುಸೇನಸಾಬ ಹಿರಿಯ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.