ADVERTISEMENT

ಮುಳಗುಂದ| ಕಳಪೆ ಕಾಮಗಾರಿ; ಸಾರ್ವಜನಿಕರಿಗೆ ತಪ್ಪದ ಕಿರಿಕಿರಿ

ಮುಳಗುಂದ ಪಟ್ಟಣ ಪಂಚಾಯಿತಿಯ ವಿವಿಧ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 6:45 IST
Last Updated 29 ಸೆಪ್ಟೆಂಬರ್ 2025, 6:45 IST
ಮುಳಗುಂದ ಹರಿಣಶಿಕಾರಿ ಕಾಲೊನಿ ಹತ್ತಿರ ಮುಖ್ಯರಸ್ತೆಗೆ ನಿರ್ಮಿಸಿದ ಸಾರ್ವಜನಿಕ ಮಾದರಿ ಶೌಚಾಲಯ ನಿರ್ವಹಣೆ ಇಲ್ಲದೆ ಹಾಳಾಗಿದೆ
ಮುಳಗುಂದ ಹರಿಣಶಿಕಾರಿ ಕಾಲೊನಿ ಹತ್ತಿರ ಮುಖ್ಯರಸ್ತೆಗೆ ನಿರ್ಮಿಸಿದ ಸಾರ್ವಜನಿಕ ಮಾದರಿ ಶೌಚಾಲಯ ನಿರ್ವಹಣೆ ಇಲ್ಲದೆ ಹಾಳಾಗಿದೆ   

ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯಿತಿಯ ವಿವಿಧ ಯೋಜನೆಗಳ ಅಡಿ ಪಟ್ಟಣದ ನಾನಾ ಭಾಗದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಕೆಲವೇ ದಿನಗಳಲ್ಲಿ ಹಾಳಾಗುತ್ತಿವೆ. ಇದರಿಂದಾಗಿ ಸಾರ್ವಜನಿಕರು ವರ್ಷಪೂರ್ತಿ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸಾಪೂರ ಗ್ರಾಮದಲ್ಲಿ 2024ನೇ ಸಾಲಿನ ಎಸ್‌ಎಫ್‌ಸಿ ಅನುದಾನದಲ್ಲಿ ಚರಂಡಿ ಮತ್ತು ಸಿಡಿ ನಿರ್ಮಿಸಲಾಗಿತ್ತು. ಆದರೆ ಕಾಮಗಾರಿ ಮುಗಿದ ಕೆಲವೇ ತಿಂಗಳಲ್ಲಿ ಸಿಡಿ ಸ್ಲ್ಯಾಬ್ ಕುಸಿದು, ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಸಿಸಿ ಚರಂಡಿ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದೆ. ಚರಂಡಿ ಗೋಡೆಗಳಲ್ಲಿ ಬಿರುಕು ಉಂಟಾಗಿ, ಬಾಳಿಕೆ ಕ್ಷೀಣಿಸಿದೆ.

ಇದೇ ಗ್ರಾಮದ ಸ್ಮಶಾನ ಅಭಿವೃದ್ದಿ ಯೋಜನೆಯಡಿ ಇಲ್ಲಿ ಕೊರೆದಿರುವ ಕೊಳವೆಬಾವಿಗೆ ಈವರೆಗೂ ಯಂತ್ರ ಅಳವಡಿಕೆ ಆಗಿಲ್ಲ. ನೀರಿನ ಟ್ಯಾಂಕ್ ನಿರ್ಮಿಸಿ ಸಂಪರ್ಕ ಕಲ್ಪಿಸದೇ ಹಾಗೆ ಬಿಡಲಾಗಿದೆ. ಇದರಿಂದ ಸಾರ್ವಜನಿಕರ ಪ್ರಯೋಜನಕ್ಕೆ ಬಾರದಾಗಿದೆ.

ADVERTISEMENT

ಪಟ್ಟಣದಲ್ಲಿ 15ನೇ ಹಣಕಾಸು ಯೋಜನೆ ಅಡಿ ಅಂದಾಜು ₹45 ಲಕ್ಷ ಅನುದಾನದಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಚಿಂಚಲಿ ಕ್ರಾಸ್ ಹಾಗೂ ವಾಲಿಯವರ ಕ್ರಾಸ್‌ನಿಂದ ಸಿದ್ಧೇಶ್ವರ ದೇವಸ್ಥಾನದವರೆಗೆ ಕಳೆದ ವರ್ಷ ಮೇ ತಿಂಗಳಲ್ಲಿ ರಸ್ತೆ ಡಾಂಬರು ಹಾಕುವ ಕಾಮಗಾರಿ ನಿರ್ವಹಿಸಲಾಗಿದೆ. ಆದರೆ ಎರಡನೇ ನಂಬರ್‌ ಶಾಲೆಯಿಂದ ಸಿದ್ಧೇಶ್ವರ ದೇವಸ್ಥಾನದವರೆಗೆ ಗುಣಮಟ್ಟದ ಕಾಮಗಾರಿ ಮಾಡಿಲ್ಲ. ರಸ್ತೆಬದಿ ಪೇವರ್ಸ್‌ ಅಳವಡಿಸಿದ್ದು, ಅವೈಜ್ಞಾನಿಕ ಕಾಮಗಾರಿ ಕಾರಣದಿಂದ ನೀರು ನಿಲ್ಲುವಂತಾಗಿದೆ. ಪಾದಚಾರಿಗಳು, ಬೈಕ್ ಸಂಚಾರಕ್ಕೆ ತೊಂದರೆ ಆಗುತ್ತಿದೆ.

ಅಬ್ಬಿಕೆರೆ ದಡದಲ್ಲಿ ನಗರೋತ್ಥಾನ ಎರಡನೇ ಹಂತದ ಯೋಜನೆಯಲ್ಲಿ ಪಶ್ಚಿಮ ಭಾಗದಲ್ಲಿ ಕೈಗೊಂಡ ಅಭಿವೃದ್ದಿ ಕಾಮಗಾರಿಗಳು ಅರೆಬರೆ ಆಗಿದ್ದು, ಈವರೆಗೂ ಪೂರ್ಣವಾಗಿಲ್ಲ.

ಇಲ್ಲಿ ಅಳವಡಿಸಿದ ವಿದ್ಯುತ್ ದೀಪಗಳು ಬೆಳಗುತ್ತಿಲ್ಲ. ದಡದಲ್ಲಿ ಅಳವಾಡಿಸಲಾದ ಕಬ್ಬಿಣದ ಬ್ಯಾರಿಕೇಡ್‌ಗೆ ಬಣ್ಣ ಬಳಿದಿಲ್ಲ. ಹೀಗಾಗಿ ಕೆಲವೇ ತಿಂಗಳಲ್ಲಿ ತುಕ್ಕು ಹಿಡಿದಿವೆ. ಇದೇ ಕೆರೆಗೆ ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡ ಕಾಮಗಾರಿ ಸಹ ಅಪೂರ್ಣವಾಗಿದೆ. ಚಿಂಚಲಿ ಕ್ರಾಸ್ ಹತ್ತಿರ ಶುದ್ದ ಕುಡಿಯುವ ನೀರಿನ ಘಟಕದ ನಿರ್ಮಾಣಕ್ಕೆ ತೆಗೆದು ಹಾಕಿದ್ದ ಪೇವರ್ಸ್‌ಗಳನ್ನು ಸರಿಯಾಗಿ ಜೋಡಿಸದೇ ಹಾಗೆ ಬಿಡಲಾಗಿದೆ. ಘಟಕದ ಪಕ್ಕದಲ್ಲಿ ಚರಂಡಿ ಮೇಲೆ ಸ್ಲ್ಯಾಬ್ ಹಾಕದ ಕಾರಣ ಪಾದಚಾರಿಗಳೀಗೆ ಸಮಸ್ಯೆ ಉಂಟಾಗಿದೆ.

ಎರಡನೇ ವಾರ್ಡ್‌ನಲ್ಲಿ ಬರುವ ಹರಿಣಶಿಕಾರಿ ಕಾಲೊನಿ ಹತ್ತಿರ ಮುಖ್ಯರಸ್ತೆಗೆ ನಿರ್ಮಿಸಿದ ಸಾರ್ವಜನಿಕ ಮಾದರಿ ಶೌಚಾಲಯ ಕೂಡ ನಿರ್ವಹಣೆ ಇಲ್ಲದೆ ಹಾಳಾಗಿದೆ. ಕೆಲ ತಿಂಗಳ ಹಿಂದೆ ಕಾಂಪೌಂಡ್‌ ನಿರ್ಮಾಣ ಮಾಡಿದ್ದು, ಅಪೂರ್ಣವಾಗಿದೆ. ಶೌಚಾಲಯದ ಮುಂಭಾಗ ಕಸ ಬೆಳೆದು ನಿಂತಿದೆ. ಮಹಿಳೆಯರು ಶೌಚಕ್ಕೆ ಹೋಗಲು ಸಮಸ್ಯೆ ಆಗಿದೆ.

ಅಶ್ವಿನಿ ನಗರದ ನಿವಾಸಿಗಳ ಕುಡಿಯುವ ನೀರಿನ ಬವಣೆ ನೀಗಿಸುವ ಉದ್ದೇಶದಿಂದ ಸ್ಥಳೀಯ ಪಟ್ಟಣ ಪಂಚಾಯಿತಿ ವತಿಯಿಂದ ₹5 ಲಕ್ಷ ವೆಚ್ಚದಲ್ಲಿ 2022ರಲ್ಲಿ ಕೊಳವೆಬಾವಿ ಕೊರೆದು ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು. ಆದರೆ ಒಂದು ಟ್ಯಾಂಕ್‌ಗೆ ಮಾತ್ರ ನೀರಿನ ಸಂಪರ್ಕ ಕೊಟ್ಟಿದ್ದು, ಇನ್ನೊಂದು ಟ್ಯಾಂಕ್‌ಗೆ ಪೈಪ ಅಳವಡಿಸದೆ ಹಾಗೆ ಬಿಡಲಾಗಿದೆ. ಹಾಗೆಯೇ ಬಿಟ್ಟ ಟ್ಯಾಂಕ್ ಪೈಪ್ ಹಾಳಾಗಿದ್ದು, ಸಾರ್ವಜನಿಕರಿಗೆ ಪ್ರಯೋಜನವಿಲ್ಲದಂತಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಪಂಚಾಯಿತಿಯವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ನಗರದ ನಿವಾಸಿಗಳು ಅವಲತ್ತುಕೊಂಡಿದ್ದಾರೆ.

ಯಳವತ್ತಿ ರಸ್ತೆಯ ಎಸ್‌ಜೆಜೆಎಂ ಕಾಲೇಜಿನಿಂದ ಮೊರಾರ್ಜಿ ಶಾಲೆವರೆಗೆ ಬೀದಿದೀಪ ಅಳವಡಿಸುವ ಉದ್ದೇಶದಿಂದ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಆದರೆ, ಕಾಮಗಾರಿ ಮುಗಿದು ಗುತ್ತಿಗೆದಾರನಿಗೆ ಬಿಲ್ ಸಂದಾಯವಾಗಿದ್ದರೂ ಸಹ ಈವರೆಗೂ ಒಂದು  ಕಂಬದಲ್ಲಿ ಕೂಡ ಬೀದಿದೀಪ ಅಳವಡಿಸಿಲ್ಲ.

ಫೆಬ್ರುವರಿಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಮಹಾಂತೇಶ ಕಣವಿ ಈ ಬಗ್ಗೆ ಪ್ರಶ್ನಿಸಿದ್ದರು. ಆಗ, ಬೀದಿದೀಪಗಳನ್ನು ಹಾಕುವ ಭರವಸೆ ನೀಡಿದ್ದ ಮುಖ್ಯಾಧಿಕಾರಿ ಈವರೆಗೂ ಅಳವಡಿಸಲು ಕ್ರಮ ಕೈಗೊಂಡಿಲ್ಲ. ಹೀಗೆ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳಲ್ಲಿ ಲೋಪ ಆಗುತ್ತಿದ್ದರೂ ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿ, ಎಂಜಿನಿಯರ್ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಸರ್ಕಾರದ ಅನುದಾನ ಸದ್ಭಳಕೆ ಆಗಬೇಕು. ಉದ್ದೇಶಿತ ಕಾಮಗಾರಿ ಗುಣಮಟ್ಟದಿಂದ ಮಾಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ಪಟ್ಟಣದ ಮುಖ್ಯರಸ್ತೆ ಡಾಂಬರೀಕರಣ ಮಾಡಿದ ನಂತರ ಫುಟ್‌ಪಾತ್‌ ಮೇಲೆ ಮಳೆ ನೀರು ನಿಲ್ಲುತ್ತಿದೆ
ಮುಳಗುಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಸಾಪೂರ ಗ್ರಾಮದಲ್ಲಿ ಎಸ್ಎಫ್‌ಸಿ ಅನುದಾನದಲ್ಲಿ ನಿರ್ಮಿಸಿದ ಸಿಡಿ ಕುಸಿದಿರುವದು
ಮುಳಗುಂದ ಅಶ್ವಿನಿ ನಗರದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ ಪೈಪ್ ಸಂಪರ್ಕ ಮಾಡದಿರುವುದು
ಮಹ್ಮದಲಿ ಶೇಖ ರೈತರು
ಎಂ.ಎಸ್.ಕಣವಿ
ಕೃಷ್ಣಪ್ಪ ಜಾಧವ ಅಶ್ವಿನಿ ನಗರದ ನಿವಾಸಿ
ಮಹಾಂತೇಶ ಎಚ್.ಕಣವಿ
ಕೃಷ್ಣ ಹಾದಿಮನಿ
ಬಸಾಪೂರದಲ್ಲಿ ನಡೆದ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರನಿಗೆ ಈಗಾಗಲೆ ನೋಟಿಸ್ ನೀಡಲಾಗಿದೆ. ಮತ್ತೊಮ್ಮೆ ಸಿಡಿ ತೆಗೆದು ಕಾಮಗಾರಿ ಮಾಡುವಂತೆ ತಿಳಿಸಲಾಗಿದೆ. ಇನ್ನುಳಿದ ಭಾಗಗಳಲ್ಲಿ ನಡೆದ ಕಾಮಗಾರಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
ಕೃಷ್ಣ ಹಾದಿಮನಿ ಪ್ರಭಾರ ಮುಖ್ಯಾಧಿಕಾರಿ ಮುಳಗುಂದ ಪಟ್ಟಣ ಪಂಚಾಯಿತಿ
ಯಾರು ಏನಂತಾರೆ?
ರೈತರಿಗೆ ಸಮಸ್ಯೆ ಬಸಾಪೂರ ಗ್ರಾಮದಲ್ಲಿ ಹೊಲಕ್ಕೆ ಶೀತಾಲಹರಿ ದಾರಿಗೆ ಕಳೆದ ಮಾರ್ಚ್‌ನಲ್ಲಿ ಚರಂಡಿ ಮತ್ತು ಸಿಡಿ ನಿರ್ಮಿಸಲಾಗಿತ್ತು. ಕೆಲವೇ ದಿನಗಳಲ್ಲಿ ಸಿಡಿ ಕುಸಿದಿದ್ದು, ಸಂಚಾರಕ್ಕೆ ತೊಂದರೆ ಆಗುತ್ತಿದೆ. ಕಾಮಗಾರಿ ನಡೆಯುವ ವೇಳೆ ಗುಣಮಟ್ಟದ ಕೆಲಸ ನಿರ್ವಹಿಸಿ ಎಂದು ಮನವಿ ಮಾಡಿತ್ತು. ಆದರೆ ಪಂಚಾಯಿತಿಯವರು ಈ ಬಗ್ಗೆ ಕ್ರಮ ವಹಿಸಿಲ್ಲ. ಇದರ ಪರಿಣಾಮ ರೈತರಿಗೆ ಸಮಸ್ಯೆ ಉಂಟಾಗಿದೆ. ಮಹ್ಮದಲಿ ಶೇಖ, ರೈತ
ಪಂ.ಪಂಚಾಯ್ತಿಯೇ ಕಾರಣ
ಎರಡು ಮೂರು ವರ್ಷಗಳಿಂದ ಪಟ್ಟಣ ಪಂಚಾಯಿತಿ ವಿವಿಧ ಯೋಜನೆಗಳ ಅಡಿ ಕೈಗೊಂಡ ಸಿಸಿ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಸಾರ್ವಜನಿಕರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಪಟ್ಟಣದಲ್ಲಿ ಕಾಮಗಾರಿ ಮಾಡಿದ ನಂತರವೂ ಸಾರ್ವಜನಿಕರಿಗೆ ತೊಂದರೆ ಆಗುವುದು ತಪ್ಪುತ್ತಿಲ್ಲ. ಇದಕ್ಕೆ ಮುಖ್ಯಾಧಿಕಾರಿ, ಎಂಜನಿಯರ್‌ಗಳೇ ಕಾರಣ. ಎಂ.ಎಸ್.ಕಣವಿ, ಕರ್ನಾಟಕ ಜನಪರ ಅಭಿವೃದ್ದಿ ವೇದಿಕೆಯ ಗದಗ ಜಿಲ್ಲಾ ಕಾರ್ಯಾಧ್ಯಕ್ಷ‌
ಮನವಿಗೆ ಸ್ಪಂದನೆ ಇಲ್ಲ
ನಮ್ಮ ಮನೆ ಮುಂದೆ ಇರುವ ನೀರಿನ ಟ್ಯಾಂಕ್ ನಿರ್ಮಿಸಿ ಮೂರು ವರ್ಷಗಳೇ ಆಗಿವೆ. ಆದರೆ ಈವರೆಗೂ ನೀರು ತುಂಬಿಸಿಲ್ಲ. ಇದಕ್ಕೆ ಅಳವಡಿಸಿದ ಪೈಪ್‌ ಸಹ ಕಿತ್ತು ಹೋಗಿದೆ. ಸಂಬಂಧಿಸಿದ ಮುಖ್ಯಾಧಿಕಾರಿ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಕೃಷ್ಣಪ್ಪ ಜಾಧವ, ಅಶ್ವಿನಿ ನಗರ ನಿವಾಸಿ
ಪಂಚಾಯಿತಿಯಿಂದ ನಿರ್ಲಕ್ಷ್ಯ
ಉದ್ದೇಶದಿಂದ ಕೈಗೊಂಡ ಕಾಮಗಾರಿ ಪೂರ್ಣಗೊಂಡು ಮೂರು ವರ್ಷಗಳಾದರೂ ಈವರೆಗೆ ಕಂಬಗಳಗೆ ವಿದ್ಯುತ್ ಬಲ್ಬ್‌ಗಳನ್ನು ಅಳವಡಿಸಿಲ್ಲ. ಈ ಮಾರ್ಗದಲ್ಲಿ ವಸತಿ ಶಾಲೆ, ಕಾಲೇಜುಗಳಿದ್ದು ರಾತ್ರಿ ವೇಳೆ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಈ ಹಿಂದೆ ಹಲವು ಭಾರಿ ಮನವಿ ಮಾಡಿದ್ರು ಪಂಚಾಯತಿ ಅಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆ. ಮಹಾಂತೇಶ ಎಚ್.ಕಣವಿ, ಜೆಡಿಎಸ್ ಸ್ಥಳಿಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.