ADVERTISEMENT

ಸೌಲಭ್ಯ ವಂಚಿತ ಬಸ್ ನಿಲ್ಧಾಣ; ತಪ್ಪದ ತಾಪತ್ರಯ

ಮುಳಗುಂದ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತೊಂದರೆ; ಸೌಲಭ್ಯಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:08 IST
Last Updated 29 ಜನವರಿ 2026, 7:08 IST
ಮುಳಗುಂದ ಬಸ್ ನಿಲ್ಧಾಣ ಮೂತ್ರಾಲಯದ ಕಮೋಡ್‌ಗಳ ಪೈಪ್ ಒಡೆದಿರುವುದು
ಮುಳಗುಂದ ಬಸ್ ನಿಲ್ಧಾಣ ಮೂತ್ರಾಲಯದ ಕಮೋಡ್‌ಗಳ ಪೈಪ್ ಒಡೆದಿರುವುದು   

ಮುಳಗುಂದ: ಇಲ್ಲಿನ ಬಸ್ ನಿಲ್ಧಾಣ ಮೂರು ವರ್ಷಗಳಿಂದ ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿದ್ದು, ಸೌಲಭ್ಯ ಒದಗಿಸುವಲ್ಲಿ ಸಾರಿಗೆ ಸಂಸ್ಥೆ ಗದಗ ವಿಭಾಗವು ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2018ರಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ₹1.82 ಕೋಟಿ ಅನುದಾನದ ಬಳಸಿಕೊಂಡು 32 ಗುಂಟೆ ವಿಸ್ತಿರ್ಣ ಜಾಗದಲ್ಲಿ ಹೊಸದಾಗಿ ಬಸ್ ನಿಲ್ಧಾಣ ನಿರ್ಮಿಸಲಾಗಿದೆ. ಹೊಸದರಲ್ಲಿ ಬಸ್ ಫ್ಲಾಟ್‌ಫಾರ್ಮ್‌, ನಿಯಂತ್ರಣಾಧಿಕಾರಿ ಕೊಠಡಿ, ಮಹಿಳಾ ನಿರೀಕ್ಷಣಾ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಪುರುಷ ಹಾಗೂ ಮಹಿಳೆಯರಿಗಾಗಿ ಪ್ರತೇಕ ಶೌಚಾಲಯ ಹಾಗೂ ಉಪಾಹಾರಗೃಹ, 8 ವಾಣಿಜ್ಯ ಮಳಿಗಳು ಸೇರಿದಂತೆ 30 ಪ್ರಯಾಣಿಕರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

ಆದರೆ, ಮೂರು ವರ್ಷಗಳಿಂದ ಸೌಲಭ್ಯಗಳು ಒಂದೊಂದಾಗಿ ಬಂದ್‌ ಆಗಿವೆ. ಶೌಚ ಹಾಗೂ ಮೂತ್ರ ವಿಸರ್ಜನೆಯ ಕಮೋಡ್‍ಗಳು ಮುರಿದಿವೆ. ಪೈಪ್‌ಗಳು ಒಡೆದು ಹೋಗಿವೆ. ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ಶೌಚಾಲಯ ದುರ್ನಾತ ಬೀರುತ್ತಿದೆ. ಪ್ರಯಾಣಿಕರು ಮೂಗು ಮುಚ್ಚಿಕೊಂಡೆ ಶೌಚಗೃಹಕ್ಕೆ ಹೋಗವ ಸ್ಥಿತಿ ಇದೆ.

ಮುಖ್ಯದ್ವಾರದ ಬಳಿ ಕಾಲುವೆಯಲ್ಲಿ ಕಸದ ರಾಶಿ ಬಿದ್ದಿದೆ. ಆವರಣದಲ್ಲಿ ಎಲ್ಲೆಂದರಲ್ಲಿ ಅಡಕಿ ಎಲೆ ಉಗಿದು ಗಲೀಜು ಉಂಟಾಗಿದೆ. ನಿಲ್ಧಾಣದ ಸ್ವಚ್ಛತೆ ಮತ್ತು ಶೌಚಾಲಯಗಳ ನಿರ್ವಹಣೆಗೆ ಇರುವ ಕಾರ್ಮಿಕನಿಗೆ ರಕ್ಷಾ ಕವಚಗಳನ್ನು ಒದಗಿಸಿಲ್ಲ, ಬರಿ ಕೈಯಲ್ಲೆ ಕೆಲಸ ನಡೆಯುತ್ತಿದೆ.

ಲಕ್ಷ್ಮೇಶ್ವರ, ಗದಗ, ಹುಬ್ಬಳ್ಳಿ, ಶಿರಹಟ್ಟಿ ಸೇರಿದಂತೆ ಪ್ರಮುಖ ನಗರಗಳಿಗೆ, ಈ ನಿಲ್ಧಾಣದ ಮೂಲಕ ನಿತ್ಯ ನೂರಕ್ಕೂ ಹೆಚ್ಚು ಬಸ್‍ಗಳು ಸಂಚಾರವಿದೆ. ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಾರೆ. ಆದರೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆ ಮಾಡಿಲ್ಲ. 30 ಜನರು ಮಾತ್ರ ಕುಳಿತುಕೊಳ್ಳುವಷ್ಟು ಆಸನಗಳ ವ್ಯವಸ್ಥೆ ಇದೆ. ಹಲವು ಪ್ರಯಾಣಿಕರು ನೆಲದ ಮೇಲೆ ಕುಳಿತು ಕೊಳ್ಳಬೇಕು, ಅದರಲ್ಲೂ ಮಹಿಳಾ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ.

ನಿಲ್ಧಾಣದ ಆವರಣದಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕೆಲವರು ನಿಲ್ಧಾಣವನ್ನು ಹರಟೆ ಕಟ್ಟೆಯಾಗಿ ಮಾಡಿಕೊಂಡಿದ್ದು, ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ನಿರ್ದಿಷ್ಟ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಹೀಗಾಗಿ ಎಲ್ಲೆಂದರಲ್ಲಿ ಬೈಕ್ ನಿಲ್ಲಿಸುವುದರಿಂದ ಬಸ್ ನಿಲುಗಡೆಗೂ ಸಮಸ್ಯೆ ಉಂಟಾಗಿದೆ.  ಅಗತ್ಯ ಸೌಲಭ್ಯಗಳ ಕೊರೆತೆ ಈ ನಿಲ್ಧಾಣದಲ್ಲಿ ಎದ್ದು ಕಾಣುತ್ತಿದ್ದು, ಇದರಿಂದ ಇಲ್ಲಿಗೆ ಬರುವ ಪ್ರಯಾಣಿಕರಿಗೆ ತಾಪತ್ರಯ ತಪ್ಪುತ್ತಿಲ್ಲ. ಸರ್ಕಾರದ ಶಕ್ತಿ ಯೋಜನೆ ಜಾರಿ ಆದಾಗಿನಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಬಸ್‌ ನಿಲ್ದಾಣದಲ್ಲಿ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ನಿಲ್ಧಾಣದ ಆವರಣದಲ್ಲಿ ಕಸ ಬೆಳೆದು ಅದರ ಮದ್ಯ ಕೊಳವೆಬಾವಿ ಮುಚ್ಚಿರುವುದು
ಮುಳಗುಂದ ಬಸ್ ನಿಲ್ಧಾಣ ಹೊರ ನೋಟ
ಆಸನ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ನೆಲದ ಮೇಲೆ ಕುಳಿತಿರುವುದು
ಈಗಿರುವ ಆಸನಗಳು ಕಡಿಮೆ ಇದ್ದು ಶಕ್ತಿ ಯೋಜನೆ ಜಾರಿ ಆದಾಗಿನಿಂದ ಪ್ರಯಾಣಿಕರ ಸಂಖ್ಯೆ ಏರಿಕೆ ಆಗಿದೆ. ಸಮಪರ್ಕಕ ಆಸನಗಳ ವ್ಯವಸ್ಥೆ ಮಾಡಬೇಕು ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಮಾಡಬೇಕು.
–ಬಸವರಾಜ ಕರಿಗಾರ ರೈತ ಸಂಘದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.