ಮುಂಡರಗಿ: ತಾಲ್ಲೂಕಿನ ವೆಂಕಟಾಪುರ ಗ್ರಾಮದ ವಿಜಯಲಕ್ಷ್ಮಿ ಶಿವಸಿಂಪಿಗೇರ ಎನ್ನುವ ಬಡ ವಿದ್ಯಾರ್ಥಿನಿಯು ರಜಾ ದಿನಗಳಲ್ಲಿ ನರೇಗಾ ಸಮುದಾಯ ಕಾಮಗಾರಿಗಳಲ್ಲಿ ಪಾಲ್ಗೊಂಡು ತನ್ನ ಕಾಲೇಜಿನ ಸಂಪೂರ್ಣ ಖರ್ಚು, ವೆಚ್ಚಗಳನ್ನು ತಾನೇ ಸಂಪಾದಿಸಿದ್ದಾರೆ. ಇದೀಗ ಅವರು ಪದವಿ ಪೂರ್ಣಗೊಳಿಸಿದ್ದು, ಕುಟುಂಬದ ಸದಸ್ಯರೊಂದಿಗೆ ಮತ್ತೇ ನರೇಗಾ ಕೆಲಸಕ್ಕೆ ಹಾಜರಾಗಿದ್ದಾರೆ. ತನ್ನ ಕೂಲಿ ಹಣದಿಂದ ತನ್ನ ಸಹೋದರರ ಶಾಲಾ ಖರ್ಚು, ವೆಚ್ಚಗಳನ್ನು ಭರಿಸುತ್ತಿದ್ದಾರೆ.
ಗ್ರಾಮದ ಶೋಭಾ ಗೋಣಿಸ್ವಾಮಿ ಎನ್ನುವ ವಿದ್ಯಾರ್ಥಿನಿಯು ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡುತ್ತಲೇ ಈ ವರ್ಷ ಪದವಿ ಪೂರ್ಣಗೊಳಿಸಿದ್ದಾರೆ. ಸದ್ಯ ಅವರು ಸರ್ಕಾರಿ ಕೆಲಸ ಪಡೆಯುವ ಸಿದ್ಧತೆ ನಡೆಸಿದ್ದು, ಅದರ ಜತೆಗೆ ನಿಯಮಿತವಾಗಿ ನರೇಗಾ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ತಮ್ಮ ಆದಾಯದಿಂದ ಕುಟುಂಬಕ್ಕೆ ನೆರವಾಗುತ್ತಿದ್ದಾರೆ.
ಅದೇ ಗ್ರಾಮದ ಚಂದ್ರಿಕಾ ಕಟಗೇರಿ ಎನ್ನುವ ವಿದ್ಯಾರ್ಥಿನಿಯು ಗದುಗಿನ ಖಾಸಗಿ ಕಾಲೇಜಿನಲ್ಲಿ ಬಿಎ ಎರಡನೇ ಸೆಮಿಸ್ಟರ್ ಓದುತ್ತಿದ್ದು, ಈಗ ರಜೆ ಇರುವುದರಿಂದ ಅವರು ನರೇಗಾ ಕೆಲಸದಲ್ಲಿ ತೊಡಗಿದ್ದಾರೆ. ನರೇಗಾ ಮೂಲಕ ತಾನು ಸಂಪಾದಿಸುವ ಹಣದಿಂದ ತನ್ನ ಕಾಲೇಜಿನ ಖರ್ಚು, ವೆಚ್ಚಗಳ ಜೊತೆಗೆ ತನ್ನ ತಮ್ಮಂದಿರ ಶಾಲಾ ವೆಚ್ಚವನ್ನೂ ಅವರು ಭರಿಸುತ್ತಿದ್ದಾರೆ.
ಪೆನ್ನು, ಪುಸ್ತಕ ಹಿಡಿಯುವ ಕೈಗಳು ಗುದ್ದಲಿ, ಸಲಿಕೆಗಳನ್ನು ಹಿಡಿದು ಸಮರ್ಥವಾಗಿ ಕೂಲಿ ಕೆಲಸವನ್ನೂ ಮಾಡಬಲ್ಲವು ಎನ್ನುವುದನ್ನು ಮೂವರು ವಿದ್ಯಾರ್ಥಿನಿಯರು ಇತರರಿಗೆ ತೋರಿಸಿಕೊಟ್ಟಿದ್ದಾರೆ.
ಈಗ ದೈನಂದಿನ ನರೇಗಾ ಕೂಲಿ ಮೊತ್ತವು ₹370 ಆಗಿದ್ದು, ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ. ಈ ಹಣದ ನೆರವಿನಿಂದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ನೆಮ್ಮದಿಯಿಂದ ಜೀವನ ನಿರ್ವಹಿಸುವಂತಾಗಿದೆ ಎಂದು ವಿದ್ಯಾರ್ಥಿನಿಯರು ಅಭಿಪ್ರಾಯಪಟ್ಟಿದ್ದಾರೆ.
ನರೇಗಾ ಯೋಜನೆಯಿಂದ ನಿತ್ಯ ₹370 ಕೂಲಿ ಸಿಗುತ್ತಿದ್ದು ಇದರಿಂದ ತುಂಬಾ ಸಹಾಯವಾಗಿದೆ. ಕಾಯಂ ಉದ್ಯೋಗ ದೊರೆಯುವವರೆಗೂ ನರೇಗಾದಲ್ಲಿ ಕೆಲಸ ಮಾಡುತ್ತೇನೆಶೋಭಾ ಗೋಣಿಸ್ವಾಮಿ ವಿದ್ಯಾರ್ಥಿನಿ
ಅಂಗವಿಕಲರು ಸೇರಿದಂತೆ ಗ್ರಾಮೀಣ ಭಾಗದ ಬಡ ಜನರಿಗೆ ನರೇಗಾ ಯೊಜನೆ ಆಸರೆಯಾಗಿದೆ. ಅದರಿಂದ ಸಾಕಷ್ಟು ಬಡ ಕುಟುಂಬಗಳು ನೆಮ್ಮದಿಯಿಂದ ಇವೆವಿಶ್ವನಾಥ ಹೊಸಮನಿ ತಾಲ್ಲೂಕು ಪಂಚಾಯಿತಿ ಇಒ ಮುಂಡರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.