ADVERTISEMENT

ದ್ಯಾಮವ್ವನ ಜಾತ್ರೆಗೆ ನಾಲ್ಕು ದಿನ ಸಂಚಾರ ಸಂಪೂರ್ಣ ಸ್ಥಗಿತ..!

ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ಆಚರಣೆ; ಅಗಸಿ ಬಾಗಿಲಾಚೆ ನಿಲ್ಲುವ ವಾಹನಗಳು

ಕಾಶಿನಾಥ ಬಿಳಿಮಗ್ಗದ
Published 2 ಫೆಬ್ರುವರಿ 2020, 19:30 IST
Last Updated 2 ಫೆಬ್ರುವರಿ 2020, 19:30 IST
ಗ್ರಾಮ ದೇವತೆ ಜಾತ್ರೆಯ ಅಂಗವಾಗಿ ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಹೊರವಲಯದಲ್ಲಿ ನಿಂತಿರುವ ವಾಹನಗಳು
ಗ್ರಾಮ ದೇವತೆ ಜಾತ್ರೆಯ ಅಂಗವಾಗಿ ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಹೊರವಲಯದಲ್ಲಿ ನಿಂತಿರುವ ವಾಹನಗಳು   

ಮುಂಡರಗಿ: ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ಫೆ.2ರಿಂದ ಫೆ.5ರವರೆಗೆ ಗ್ರಾಮ ದೇವತೆ (ದ್ಯಾಮವ್ವ) ಜಾತ್ರೆ ನಡೆಯುತ್ತಿದ್ದು, ಈ ನಾಲ್ಕೂ ದಿನಗಳಲ್ಲಿಗ್ರಾಮಸ್ಥರು ಗ್ರಾಮದಿಂದ ಹೊರಗೆ ಹೋಗುವಂತಿಲ್ಲ ಮತ್ತು ಪಾದರಕ್ಷೆ ಧರಿಸುವಂತಿಲ್ಲ. ಇದು ದಶಕಗಳಿಂದ ನಡೆದುಕೊಂಡು ಬಂದ ಸಂಪ್ರದಾಯ.

ಜಾತ್ರೆ ಪೂರ್ಣಗೊಳ್ಳುವವರೆಗೂ ಯಾವುದೇ ಪರಿಸ್ಥಿತಿ ಬಂದರೂ, ಗ್ರಾಮಸ್ಥರು ಗ್ರಾಮದಿಂದ ಹೊರ ಹೋಗುವಂತಿಲ್ಲ. ಸೈಕಲ್ ಸೇರಿದಂತೆ ಯಾವುದೇ ವಾಹನ ಗ್ರಾಮದಲ್ಲಿ ಸಂಚರಿಸುವಂತಿಲ್ಲ. ಹಿಟ್ಟಿನ ಗಿರಣಿ ಸೇರಿದಂತೆ ಯಾವುದೇ ರೀತಿಯ ಚಕ್ರಗಳು ಉರುಳುವಂತಿಲ್ಲ ಇವೆಲ್ಲವೂ ಈ ಜಾತ್ರೆಯೊಂದಿಗೆ ನಂಟು ಹಾಕಿಕೊಂಡಿರುವ ಆಚರಣೆಗಳು.

ಹೀಗಾಗಿ ಜಾತ್ರೆ ಆರಂಭಕ್ಕಿಂತ ಮೊದಲೇ, ತಮ್ಮ ನೆಂಟರನ್ನು ಗ್ರಾಮಸ್ಥರು, ಗ್ರಾಮಕ್ಕೆ ಕರೆಯಿಸಿಕೊಂಡಿದ್ದಾರೆ. ಜಾತ್ರೆ ಪೂರ್ಣಗೊಳ್ಳುವವರೆಗೂ ಅವರೂ ಗ್ರಾಮವನ್ನು ತೊರೆಯುವಂತಿಲ್ಲ. ಜಾತ್ರೆ ಬಗ್ಗೆ ತಿಳಿಯದೇ, ಈ ಗ್ರಾಮಕ್ಕೆ ಬಂದವರೂ, ಜಾತ್ರೆ ಮುಗಿದ ನಂತರವೇ ಗ್ರಾಮವನ್ನು ತೊರೆಯಬೇಕು.

ADVERTISEMENT

ಹೀಗಾಗಿ, ಫೆ.2ರಿಂದ ಈ ಗ್ರಾಮಕ್ಕೆ ಬರುವ ಸರ್ಕಾರಿ ಬಸ್ಸುಗಳು, ಖಾಸಗಿ ವಾಹನಗಳು ಗ್ರಾಮದ ಗಡಿಯಾಚೆ (ಅಗಸಿ ಬಾಗಿಲಾಚೆ) ನಿಲ್ಲುತ್ತಿವೆ. ಅಲ್ಲಿಂದ ಗ್ರಾಮಸ್ಥರು ನಡೆದುಕೊಂಡೇ ತಮ್ಮ ಮನೆಗಳನ್ನು ಸೇರಬೇಕಾಗಿದೆ. ಜಾತ್ರೆಯ ಪ್ರಯುಕ್ತ ಗ್ರಾಮದ ರೈತರು ಕೃಷಿ ಚಟುವಟಿಕೆಗಳನ್ನು ಸ್ವ ಇಚ್ಛೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

ಜಾತ್ರೆಯ ಪ್ರಯುಕ್ತ ಮೂರು ದಿನ ಗ್ರಾಮದ ಶಾಲೆಗಳಿಗೆ ರಜೆ ನೀಡಲಾಗಿದೆ. ಗ್ರಾಮದಿಂದ ಪಟ್ಟಣದಲ್ಲಿರುವ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳೂ ಮೂರು ದಿನ ರಜೆ ಹಾಕಬೇಕಾಗಿದೆ. ಎಲ್ಲರೂ ಮನೆಯಲ್ಲಿಯೇ ಇರಬೇಕಾಗಿರುವುದರಿಂದ ಗ್ರಾಮದ ಬಹುತೇಕ ಮನೆಗಳು ಜನದಟ್ಟಣೆಯಿಂದ ತುಂಬಿವೆ. ಎಲ್ಲ ಮನೆಗಳಲ್ಲಿ ಸಂಭ್ರಮ ಮನೆಮಾಡಿದೆ.

'ಜಾತ್ರೆ ನೆಪದಲ್ಲಿ ಕೆಲವು ನಿಬಂಧನೆಗಳನ್ನು ಹೇರುವ ಮೂಲಕ ಕುಟುಂಬದ ಸದಸ್ಯರನ್ನೆಲ್ಲ ಒಂದೆಡೆ ಸೇರಿಸಲಾಗುತ್ತಿದೆ. ಎಲ್ಲರೂ ತಮ್ಮ ದೈನಂದಿನ ಜಂಜಾಟಗಳನ್ನು ಬದಿಗೊತ್ತಿ ನಾಲ್ಕು ದಿನ ಒಂದೆಡೆ ಸೇರಿ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ’ ಎನ್ನುತ್ತಾರೆ ಗ್ರಾಮದ ನಿವೃತ್ತ ಉಪನ್ಯಾಸಕ ಧರ್ಮರಾಜ ಚೌಡಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.