ADVERTISEMENT

ಮುಂಡರಗಿ: ನದಿ ಪಕ್ಕದಲ್ಲಿದ್ದರೂ ಶುದ್ಧ ನೀರಿಗೆ ಪರದಾಟ

ಕಾಶಿನಾಥ ಬಿಳಿಮಗ್ಗದ
Published 30 ಏಪ್ರಿಲ್ 2025, 5:37 IST
Last Updated 30 ಏಪ್ರಿಲ್ 2025, 5:37 IST
ಮುಂಡರಗಿ ಪಟ್ಟಣದ ಬೃಂದಾವನ ವೃತ್ತದ ಬಳಿಯ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಹಿಡಿದುಕೊಳ್ಳಲು ಸರದಿಯಲ್ಲಿ ನಿಂತಿರುವ ಸಾರ್ವಜನಿಕರು
ಮುಂಡರಗಿ ಪಟ್ಟಣದ ಬೃಂದಾವನ ವೃತ್ತದ ಬಳಿಯ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಹಿಡಿದುಕೊಳ್ಳಲು ಸರದಿಯಲ್ಲಿ ನಿಂತಿರುವ ಸಾರ್ವಜನಿಕರು   

ಮುಂಡರಗಿ: ಪಟ್ಟಣವು ಸದ್ಯ 50 ಸಾವಿರ ಜನಸಂಖ್ಯೆ ಹೊಂದಿದ್ದು, ದಶಕಗಳ ಹಿಂದೆ ಪೂರೈಸುತ್ತಿದ್ದ ಪ್ರಮಾಣದಷ್ಟೇ ನೀರನ್ನು ಈಗಲೂ ಪೂರೈಸಲಾಗುತ್ತಿದೆ. ಮೊದಲು ಕೊರ್ಲಹಳ್ಳಿ ಗ್ರಾಮದ ಬಳಿಯ ತುಂಗಭದ್ರಾ ನದಿಯಿಂದ ಪ್ರತ್ಯೇಕ ಘಟಕದ ಮೂಲಕ ಮುಂಡರಗಿ ಪಟ್ಟಣಕ್ಕೆ ನೀರು ಪೂರೈಸಲಾಗುತ್ತಿತ್ತು. ಇದರಿಂದ ಜನರ ಬಳಕೆಗೆ ತಕ್ಕಷ್ಟು ನೀರು ಸಿಗುತ್ತಿತ್ತು.

ಆದರೆ, ಈಗ ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಗೆ ಹಮ್ಮಿಗಿ ಗ್ರಾಮದಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕೊರ್ಲಹಳ್ಳಿ ಬಳಿಯ ನೀರು ಸರಬರಾಜು ಘಟಕವನ್ನು ಸ್ಥಗಿತಗೊಳಿಸಿ ಈಗ ಮುಂಡರಗಿ ಪಟ್ಟಣಕ್ಕೂ ಹಮ್ಮಿಗಿಯಿಂದಲೇ ಶುದ್ಧ ಕುಡಿಯುವ ನೀರು ಪುರೈಸಲಾಗುತ್ತಿದೆ. ಹೀಗಾಗಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಲ್ಪ ಹಿನ್ನಡೆಯಾಗಿದ್ದು, ಜನತೆಗೆ ಮೊದಲಿನಂತೆ ಸಾಕಷ್ಟು ಪ್ರಮಾಣದಲ್ಲಿ ನೀರು ಪೂರೈಸಲು ಪುರಸಭೆಗೆ ಸಾಧ್ಯವಾಗುತ್ತಿಲ್ಲ. ಪಟ್ಟಣದ ಜನತೆಗೆ ಐದು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಜಾಲವಾಡಿಗೆಯಿಂದ ಪಟ್ಟಣಕ್ಕೆ ನೇರವಾಗಿ ಮತ್ತು ಪ್ರತ್ಯೇಕವಾಗಿ ನೀರು ಪೂರೈಕೆ ಘಟಕ ಸ್ಥಾಪಿಸಿದರೆ ಪಟ್ಟಣದ ಜನತೆಗೆ ಸಾಕಾಗುವಷ್ಟು ನೀರನ್ನು ಪೂರೈಸಬಹುದಾಗಿದೆ. ಪ್ರತ್ಯೇಕ ಘಟಕ ನಿರ್ಮಾಣಕ್ಕೆ ಕೆಡಬ್ಲ್ಯುಎಸ್‌ನಿಂದ ₹18.50 ಕೋಟಿ ಮಂಜೂರಾಗಿತ್ತು. ಕಾರಣಾಂತರಗಳಿಂದ ಕಾಮಗಾರಿ ಆರಂಭವಾಗದ್ದರಿಂದ ಮಂಜೂರಾಗಿದ್ದ ಹಣ ವಾಪಸ್ ಹೋಗಿದೆ.

ADVERTISEMENT

ಪಟ್ಟಣದಲ್ಲಿ 13 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅವುಗಳಲ್ಲಿ ಕೆಲವು ಸ್ಥಗಿತಗೊಂಡಿವೆ. ಅವುಗಳ ದುರಸ್ತಿ ಕಾರ್ಯವನ್ನು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿರುವುದರಿಂದ ಘಟಕಗಳು ಕೆಟ್ಟು ನಿಂತರೆ ಅವರು ಬಂದು ಸರಿ ಮಾಡುವವರೆಗೂ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. 

ಮುಂಡರಗಿ ಹೋಬಳಿಯ ಬಹುತೇಕ ಗ್ರಾಮಗಳು ತುಂಗಭದ್ರಾ ನದಿ ದಂಡೆಯ ಮೇಲಿರುವುದರಿಂದ ಅಲ್ಲಿಯ ಜನ ಹಾಗೂ ಜಾನುವಾರು ಬಳಕೆಗೆ ಸಾಕಷ್ಟು ನೀರು ದೊರೆಯುತ್ತದೆ. ಡಂಬಳ ಹೋಬಳಿಯ ವೆಂಕಟಾಪುರ, ಹಳ್ಳಿಗುಡಿ ಹಾಗೂ ಮತ್ತಿತರ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಆದರೆ, ಜನರು ಬೀದಿಗಿಳಿದು ಹೋರಾಟ ಮಾಡುವಷ್ಟು ಪರಿಸ್ಥಿತಿ ಬಿಗಡಾಯಿಸಿಲ್ಲ.

ಇತ್ತೀಚಿನ ವರ್ಷಗಳ ಮಳೆಗಾಲದಲ್ಲಿ ತುಂಗಭದ್ರಾ ನದಿಯಿಂದ ತಾಲ್ಲೂಕಿನ ಬಸಾಪುರ, ತಾಂಬ್ರಗುಂಡಿ, ಡಂಬಳ ಮೊದಲಾದ ಕೆರೆಗಳನ್ನು ನದಿ ನೀರಿನಿಂದ ತುಂಬಿಸಲಾಗುತ್ತಿದೆ. ಕೆರೆಯ ನೀರು ಜನರು ತಮ್ಮ ದೈನಂದಿನ ಬಳಕೆಗೆ ಹಾಗೂ ಜಾನುವಾರುಗಳಿಗೆ ಬಳಸಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಹಾಗೂ ಪೈಪ್ ಲೈನ್ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಈ ಕುರಿತು ಅಗತ್ಯ ಮಾಹಿತಿ ಪಡೆದುಕೊಳ್ಳಲು ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸಿದರೂ ಸಿಗಲಿಲ್ಲ.

ಹಲವು ದಿನಗಳಿಂದ ಸ್ಥಗಿತಗೊಂಡಿರುವ ಮುಂಡರಗಿ ಕೋಟೆ ಭಾಗದ ಶುದ್ಧ ಕುಡಿಯುವ ನೀರಿನ ಘಟಕ
ಜಾಲವಾಡಿಗೆ ಮೂಲಕ ಪುರಸಭೆಗೆ ಪ್ರತ್ಯೇಕ ನೀರು ಪೂರೈಕೆ ಘಟಕ ಸ್ಥಾಪಿಸುವ ಕುರಿತಂತೆ ಕೆಡಬ್ಲ್ಯುಎಸ್‌ಗೆ ಪ್ರಸ್ತಾವ ಸಲ್ಲಿಸಲಾಗಿದ್ದು ಅದು ಮಂಜೂರಾದರೆ ಪಟ್ಟಣದ ಜನತೆಗೆ 24/7 ನೀರು ಪೂರೈಸಲು ಸಾಧ್ಯವಾಗುತ್ತದೆ
ನಾಗೇಶ ಹುಬ್ಬಳ್ಳಿ ಉಪಾಧ್ಯಕ್ಷ ಪುರಸಭೆ ಮುಂಡರಗಿ
ತಾಲ್ಲೂಕಿನ ಹಳ್ಳಿಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು ಅದನ್ನು ನಿವಾರಿಸಲು ಕ್ರಮವಹಿಸುವಂತೆ ಶಾಸಕ ಜಿ.ಎಸ್.ಪಾಟೀಲ ಅವರಿಗೆ ಮನವಿ ಮಾಡಲಾಗಿದೆ
–ನಾಗರಾಜ ಸಜ್ಜನರ ಹಳ್ಳಿಕೇರಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.