ADVERTISEMENT

ನಿರ್ವಹಣೆ ಸಮಸ್ಯೆ; ‘ವಿದ್ಯಾನಗರಿ’ಗೆ ಕಪ್ಪು ಚುಕ್ಕೆಯಾದ ಉದ್ಯಾನಗಳು

ಪರಿಸರ ದಿನಾಚರಣೆಯ ದಿನ ಮಾತ್ರ ಸ್ವಚ್ಛತೆ; ಪಾಳು ಬಿದ್ದ ಜಾಗ ಹಂದಿ, ನಾಯಿಗಳ ಆವಾಸ ಕೇಂದ್ರ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 9 ಮಾರ್ಚ್ 2020, 19:30 IST
Last Updated 9 ಮಾರ್ಚ್ 2020, 19:30 IST
ನರೇಗಲ್ ಪಟ್ಟಣದ 3ನೇ ವಾರ್ಡಿನ ಬುಲ್ಡೋಜರ್ ನಗರದಲ್ಲಿ ಐದು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಉದ್ಯಾನವನ ಇಂದಿಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ
ನರೇಗಲ್ ಪಟ್ಟಣದ 3ನೇ ವಾರ್ಡಿನ ಬುಲ್ಡೋಜರ್ ನಗರದಲ್ಲಿ ಐದು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಉದ್ಯಾನವನ ಇಂದಿಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ   

ನರೇಗಲ್: ಜಿಲ್ಲೆಯ ‘ವಿದ್ಯಾನಗರಿ’ ಎಂದೇ ಹೆಸರಾಗಿರುವ ನರೇಗಲ್ ಪಟ್ಟಣದಲ್ಲಿ ಯಾವ ಬಡಾವಣೆಯಲ್ಲೂ ಉದ್ಯಾನ ಕಣ್ಣಿಗೆ ಬೀಳುವುದಿಲ್ಲ. ಆದರೆ, ಹಲವು ಬಡಾವಣೆಗಳಲ್ಲಿ ಉದ್ಯಾನಗಳು ಇವೆ ಎನ್ನುವುದು ಪಟ್ಟಣ ಪಂಚಾಯ್ತಿ ದಾಖಲೆಯಲ್ಲಿದೆ. ವಾಸ್ತವದಲ್ಲಿ ಹಲವು ಉದ್ಯಾನಗಳು ನಿರ್ವಹಣೆ ಸಮಸ್ಯೆಯಿಂದ ನಾಮಾವಶೇಷವಾಗಿವೆ.

ಪಟ್ಟಣ ಪಂಚಾಯ್ತಿ ದಾಖಲೆಗಳಲ್ಲಿರುವ ಉದ್ಯಾನಕ್ಕೆ ಪ್ರತಿ ವರ್ಷ ನಿರ್ವಹಣೆಗಾಗಿ ಅನುದಾನ ಮೀಸಲಿಡಲಾಗುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಟೆಂಡರ್‌ ಕರೆದು ಲಕ್ಷಾಂತರ ರೂಪಾಯಿ ಉದ್ಯಾನ ಅಭಿವೃದ್ಧಿ ಖರ್ಚು ತೋರಿಸಲಾಗುತ್ತದೆ. ಆದರೆ, ಯಾವ ಉದ್ಯಾನದಲ್ಲೂ ಇಂದಿಗೂ ಒಂದು ಹಸಿರು ಗರಿಕೆಯೂ ಬೆಳೆದಿಲ್ಲ. ಬಹುತೇಕ ಉದ್ಯಾನಗಳು ಮತ್ತು ಉದ್ಯಾನಕ್ಕೆ ಮೀಸಲಿಟ್ಟ ಜಾಗ ಹಾಳು ಕೊಂಪೆಯಾಗಿ ಬದಲಾಗಿದ್ದು, ಹಂದಿ, ನಾಯಿಗಳ ಆವಾಸ ಕೇಂದ್ರಗಳಾಗಿವೆ. ಕುಡುಕರಿಗಂತೂ ಉದ್ಯಾನದ ಜಾಗ, ರಾತ್ರಿ ಪಾನಗೋಷ್ಠಿಯ ತಾಣಗಳಾಗಿವೆ.

ವಿದ್ಯಾಕಾಶಿಯನ್ನು ‘ಉದ್ಯಾನ ನಗರಿಯಾಗಿಸುವ’ ಉದ್ದೇಶದಿಂದ ಪಟ್ಟಣದ ಬುಲ್ಡೋಜರ್ ನಗರ, ಅನ್ನದಾನೇಶ್ವರ ಮಹಾವಿದ್ಯಾಲಯ ಪಕ್ಕದಲ್ಲಿರುವ ಶಿಕ್ಷಕರ ಕಾಲೋನಿ, ಈಶ್ವರ ನಗರ, ಪಟ್ಟಣ ಪಂಚಾಯ್ತಿ ಹತ್ತಿರ ಇರುವ ಭೂತನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಉದ್ಯಾನಗಳನ್ನು ನಿರ್ವಿುಸಲಾಗಿತ್ತು. ಆದರೆ, ಉದ್ಯಾನ ಉದ್ಘಾಟನೆ ನಂತರ ನಿರ್ವಹಣೆ ಮರೆತಿದ್ದರಿಂದ ಈಗ ಬಹುತೇಕ ಉದ್ಯಾನಗಳಲ್ಲಿ ಮುಳ್ಳಿನ ಪೊದೆ ಬೆಳೆದು, ಪಟ್ಟಣದ ಸೌಂದರ್ಯಕ್ಕೆ ಕಪ್ಪು ಚುಕ್ಕೆಗಳಾಗಿವೆ.

ADVERTISEMENT

ಪಟ್ಟಣದ ಹಲವೆಡೆ ಉದ್ಯಾನಕ್ಕಾಗಿ ಕಾಯ್ದಿರಿಸಿದ ಜಾಗಗಳಿವೆ. ಕೆಲವೆಡೆ ಉದ್ಯಾನದ ಜಾಗಕ್ಕೆ ಆವರಣ ಗೋಡೆಯನ್ನೂ ನಿರ್ಮಿಸಲಾಗಿದೆ. ಕೆಲವು ಕಡೆ ತಂತಿ ಬೇಲಿ ಅಳವಡಿಸಲಾಗಿದೆ. ಆದರೆ, ಯಾವ ಉದ್ಯಾನದಲ್ಲೂ ಹಸಿರಿಲ್ಲ. ಅನ್ನದಾನೇಶ್ವರ ಕಾಲೇಜು ಸಮೀಪದ ಉದ್ಯಾನದಲ್ಲಿ ನಡಿಗೆಪಥ ಸೌಲಭ್ಯ ಕಲ್ಪಿಸಲಾಗಿತ್ತು. ಈಗ ಅಲ್ಲಿನ ಕಲ್ಲುಬೆಂಚುಗಳು ಮುರಿದುಬಿದ್ದಿವೆ. ಈಶ್ವರ ನಗರದ ಉದ್ಯಾನದಲ್ಲಿ ವಿಶ್ರಾಂತಿಗಾಗಿ ಹಾಕಿದ್ದ ಕುರ್ಚಿಗಳು ಮುರಿದಿವೆ. ಜಾನುವಾರುಗಳನ್ನು ಮೇಯಲು ಉದ್ಯಾನದೊಳಗೆ ಬಿಡುತ್ತಾರೆ. ಕೆಲವರಿಗಂತೂ ಇದು ಕಸ ಎಸೆಯುವ ತೊಟ್ಟಿಯಾಗಿದೆ’ ಎನ್ನುವುದು ಸ್ಥಳೀಯರ ಆರೋಪ.

ಪ್ರತಿ ವರ್ಷ ಪರಿಸರ ದಿನಾಚರಣೆಯ ದಿನ ಮಾತ್ರ ಉದ್ಯಾನಗಳ ಸ್ವಚ್ಛತೆ ಕಾರ್ಯ ನಡೆಯುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಒಂದೆರಡು ಸಸಿಗಳನ್ನು ನೆಟ್ಟು ಪರಿಸರಪ್ರೇಮ ಮೆರೆಯುತ್ತಾರೆ. ನಂತರ ಇದರತ್ತ ತಲೆಯೂ ಹಾಕುವುದಿಲ್ಲ. ‘ಉದ್ಯಾನ ನಿರ್ವಹಣೆಗಾಗಿ ವಾರ್ಷಿಕ ಹಣಕಾಸು ಯೋಜನೆ ಮತ್ತು ಪಟ್ಟಣ ಪಂಚಾಯ್ತಿ ನಿಧಿಯಲ್ಲಿ ಹಣ ಬಳಕೆ ಮಾಡಲಾಗುತ್ತಿದೆ. ಆದರೆ, ಯಾವ ಉದ್ಯಾನದಲ್ಲೂ ಹಸಿರಿನ ಒಂದು ಗರಿಕೆಯೂ ಕಾಣಲು ಸಿಗುವುದಿಲ್ಲ’ ಎನ್ನುತ್ತಾರೆ ಪಟ್ಟಣದ ನಿವಾಸಿಗಳು.

15ನೇ ವಾರ್ಡಿನಲ್ಲಿ ಹೊಸದಾಗಿ ಉದ್ಯಾನ ನಿರ್ಮಿಸಲು ₹25 ಲಕ್ಷ ಮೊತ್ತದಲ್ಲಿ ಟೆಂಡರ್ ಕರೆಯಲಾಗಿದೆ. ಹಳೆಯ ಉದ್ಯಾನಗಳನ್ನೇ ಸರಿಯಾಗಿ ನಿರ್ವಹಣೆ ಮಾಡಲು ಆಗುತ್ತಿಲ್ಲ. ಈಗ ಹೊಸ ಉದ್ಯಾನ ನಿರ್ಮಿಸುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯರೊಬ್ಬರು ಹೇಳಿದರು.

ಪಟ್ಟಣದ ಹಲವೆಡೆ, ನಿವೇಶನಗಳನ್ನು ಮಾಡಲು ಕೃಷಿ ಜಮೀನನ್ನು ಕೃಷಿಯೇತರ ಜಮೀನನ್ನಾಗಿ ಪರಿವರ್ತಿಸಲಾಗಿದೆ. ಪಟ್ಟಣ ಪಂಚಾಯ್ತಿ ನಿಯಮಾವಳಿ ಅನುಸಾರ ಇಲ್ಲಿ ಉದ್ಯಾನಕ್ಕಾಗಿ ಜಾಗ ಮೀಸಲಿಡಬೇಕು. ಜಾಗ ಮೀಸಲಿಡಲಾಗಿದೆ, ಆದರೆ ಉದ್ಯಾನ ತಲೆಎತ್ತಿಲ್ಲ. ಸದ್ಯ ಪಟ್ಟಣದಲ್ಲಿ ಎಂಟು ಹೊಸ ಲೇಔಟ್‌ಗಳು ನಿರ್ಮಾಣಗೊಂಡಿವೆ. ಅಲ್ಲಾದರೂ ಉದ್ಯಾನ ನಿರ್ಮಿಸಲು ಪಟ್ಟಣ ಪಂಚಾಯ್ತಿ ಆಸಕ್ತಿ ವಹಿಸುತ್ತದೆಯಾ ಎನ್ನುವುದನ್ನು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.