ನರಗುಂದ: ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಭೂಮಿಯ ತೇವಾಂಶ ಅಧಿಕಗೊಂಡಿದ್ದು, ರೈತರನ್ನು ಚಿಂತೆಗೆ ದೂಡಿದೆ. ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಗೋವಿನಜೋಳ ಬೆಳೆ ಜಲಾವೃತಗೊಂಡು ಆರಂಭದಲ್ಲಿಯೇ ಬೆಳವಣಿಗೆ ಕುಂಠಿತಗೊಂಡಿದೆ.
ಮುಂಗಾರು ಹಂಗಾಮಿನಲ್ಲಿ ನವಿಲುತೀರ್ಥ ಜಲಾಶಯ ಅವಲಂಬಿಸಿ ಮಲಪ್ರಭಾ ನೀರಾವರಿ ಕಾಲುವೆಗಳಿಗೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಶೇ 50ರಷ್ಟು ರೈತರು ಗೋವಿನಜೋಳ ಬೆಳೆದಿದ್ದು, ಸಕಾಲಕ್ಕೆ ಮಳೆಯಾದ ಪರಿಣಾಮ ಎಕರೆಗೆ 25ರಿಂದ 35 ಕ್ವಿಂಟಲ್‌ವರೆಗೆ ಬೆಳೆ ತೆಗೆಯುವ ಭರವಸೆ ಹೊಂದಿದ್ದರು. ಆದರೆ, ಒಂದು ವಾರದಿಂದ ನಿರಂತರ ಮಳೆ ಸುರಿದು ಈ ಬೆಳೆಗೆ ತೇವಾಂಶ ಹೆಚ್ಚಾಗಿ ರೋಗ ಹಾಗೂ ಸೈನಿಕ ಹುಳುಬಾಧೆಯಿಂದ ಬೆಳವಣಿಗೆ ಕುಂಠಿತಗೊಂಡಿದೆ.
ಯೂರಿಯಾ ಕೊರತೆ: ಒಟ್ಟು 17,225 ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಬಿತ್ತನೆಯಾಗಿದೆ. ನಿರಂತರ ಮಳೆ ಪರಿಣಾಮ ಗೋವಿನಜೋಳಕ್ಕೆ ಯೂರಿಯಾ ಅಗತ್ಯವಿದ್ದು, ಲಭ್ಯವಿಲ್ಲದ ಕಾರಣ ಕೆಂಪುರೋಗಕ್ಕೆ ತುತ್ತಾಗುವಂತಾಗಿದೆ.
ವಾಡಿಕೆಗಿಂತ ಹೆಚ್ಚು ಮಳೆ: ತಾಲ್ಲೂಕಿನಲ್ಲಿ ಜುಲೈನಲ್ಲಿ ನರಗುಂದ ಹೋಬಳಿಯಲ್ಲಿ 60.1 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, 95.3 ಮಿ.ಮೀ ಮಳೆ ಆಗಿದೆ. ಕೊಣ್ಣೂರ ಹೋಬಳಿ ವ್ಯಾಪ್ತಿಯಲ್ಲಿ 71.3 ಮಿ.ಮೀ. (ವಾಡಿಕೆ ಮಳೆ 60.5 ಮಿ.ಮೀ.) ಆಗಿದೆ. ಆ.1ರಿಂದ 10ರವರೆಗೆ ನರಗುಂದ ಹೋಬಳಿಯಲ್ಲಿ 76.6 ಮಿ.ಮೀ. (ವಾಡಿಕೆ ಮಳೆ 21.8 ಮಿ.ಮೀ.) ಮಳೆ ಆಗಿದೆ.
ತಾಲ್ಲೂಕಿನಲ್ಲಿ ಹೆಚ್ಚಿನ ರೈತರು ಗೋವಿನಜೋಳ ಬೆಳೆದಿದ್ದಾರೆ. ಅಗತ್ಯವಿರುವ ಯೂರಿಯಾ ಪೂರೈಸಲಾಗುತ್ತಿದೆ. ಎಲ್ಲ ರೈತರಿಗೂ ತಲುಪಿಸುವ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಒಂದು ಸಾವಿರ ಮೆಟ್ರಿಕ್ ಟನ್‌ನಷ್ಟು ಅಧಿಕ ಗೊಬ್ಬರ ಪೂರೈಕೆಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಬರಲಿದೆಎಂ.ಎಸ್. ಕುಲಕರ್ಣಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಬೆಳೆ ಪರಿಹಾರಕ್ಕೆ ಆಗ್ರಹ
ಯೂರಿಯಾ ಕೊರತೆ ಅತಿಯಾದ ಮಳೆ ರೋಗಬಾಧೆ ಸೈನಿಕ ಹುಳ ಕಾಟ ಹೀಗೆ ಹಲವಾರು ಕಾರಣಗಳಿಂದ ಗೋವಿನಜೋಳ ಬೆಳೆ ಹಾನಿಯಾಗಿದೆ. ಆದ್ದರಿಂದ ಸರ್ಕಾರ ಗೋವಿನಜೋಳ ಬೆಳೆದ ರೈತರಿಗೆ ಎಕರೆಗೆ ₹50 ಸಾವಿರ ಬೆಳೆಹಾನಿ ಪರಿಹಾರ ನೀಡುವಂತೆ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎಸ್.ಎಸ್. ಪಾಟೀಲ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.