ನರಗುಂದ: ‘ಸ್ವಾತಂತ್ರ್ಯ ದೊರೆತು 75 ವರ್ಷ ಗತಿಸಿದರೂ ರಾಜ್ಯ ಮತ್ತು ಕೇಂದ್ರ ಸರ್ಕಾರವು ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ರೈತರು ಮತ್ತೇ ಹೋರಾಟ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಹುತಾತ್ಮ ರೈತ ದಿನದಲ್ಲಿ ದಿ.ವೀರಪ್ಪ ಕಡ್ಲಿಕೊಪ್ಪರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
‘ರೈತ ಮತ್ತು ದುಡಿಯುವ ಕಾರ್ಮಿಕ ಎರಡು ವರ್ಗಗಳು ಸಂಕಷ್ಟದಲ್ಲಿವೆ, ಇದರಿಂದಾಗಿ ನಮ್ಮ ಹಕ್ಕುಗಳಿಗಾಗಿ ಉಭಯ ಸರ್ಕಾರಗಳ ವಿರುದ್ಧ ಗಟ್ಟಿಯಾದ ಹೋರಾಟ ಮಾಡಬೇಕಿದೆ. ಇಲ್ಲದಿದ್ದರೆ ನಮ್ಮ ಬೇಡಿಕೆಗಳು ಈಡೇರುವುದಿಲ್ಲ’ ಎಂದರು.
‘ಕೇಂದ್ರ ಸರ್ಕಾರದ ಪ್ರಧಾನಿಗಳಾದ ನರೇಂದ್ರ ಮೋದಿಯವರು ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸುವುದು ನೋವು ತಂದಿದೆ. ಅದೇ ಗುಜರಾತ, ರಾಜಸ್ಥಾನ ರಾಜ್ಯಗಳ ಸಮಸ್ಯೆಗಳು ಇದ್ದರೆ ಪ್ರಧಾನಿಯವರೇ ಅವರನ್ನು ಕರೆಸಿ ನೀರಾವರಿ ಸಮಸ್ಯೆಗಳನ್ನು ಬಗೆಹರಿಸಿ ಕಳಿಸುತ್ತಾರೆ. ಕರ್ನಾಟಕದ ಸಮಸ್ಯೆಗಳು ಬಂದರೆ ಆ ಧೋರಣೆ ಇರದಿರುವುದು ಖಂಡನೀಯ’ ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಬಸವರಾಜ ಸಾಬಳೆ, ಕರ್ನಾಟಕ ರೈತ ಸೇನೆಯ ಬಸವರಾಜ ಸಾಬಳೆ, ವೀರಣ್ಣ ಸೊಪ್ಪಿನ, ಮರುಳಸಿದ್ದಯ್ಯ, ಮಲ್ಲಿಕಾರ್ಜುನಪ್ಪ ಚಿತ್ರದುರ್ಗ, ಭಕ್ತರಹಳ್ಳಿ ಭೈರೇಗೌಡ, ಮುನಿಯಪ್ಪ, ಬಿ.ಎಸ್.ಉಪ್ಪಾರ, ರವಿ ಹಾಸನ ಸೇರಿದಂತೆ ರಾಜ್ಯ ರೈತ ಸಂಘದ ಸದಸ್ಯರು, ರೈತ ಸೇನಾ ಕರ್ನಾಟಕದ ಮಹಿಳಾ ಪದಾಧಿಕಾರಿಗಳು, ರಾಜ್ಯ ಪದಾಧಿಕಾರಿಗಳು ಇದ್ದರು. ಎಲ್ಲೆಡೆ ಹಸಿರು ಶಾಲು ರಾರಾಜಿಸಿದವು.
ಹುತಾತ್ಮ ರೈತ ದಿನಾಚರಣೆಯಲ್ಲಿ ಧಾರವಾಡ, ಹಾವೇರಿ, ಬೆಳಗಾವಿ, ಬಳ್ಳಾರಿ, ಬಾಗಲಕೋಟಿ, ರಾಯಚೂರು, ಶಿವಮೊಗ್ಗ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ರೈತ ಮುಖಂಡರು ಭಾಗವಹಿಸಿ, ವೀರಗಲ್ಲಿಗೆ ನಮನ ಸಲ್ಲಿಸಿದರು.
ಮಹದಾಯಿ ಕಳಸಾಬಂಡೂರಿ ಯೋಜನೆ ಜಾರಿಯಾಗಬೇಕಿದೆ. ಸಚಿವ ಪ್ರಲ್ಹಾದ ಜೋಶಿಯವರು ಮೂರು ತಿಂಗಳು ಗಡವು ನೀಡಿದ್ದಾರೆ. ಅದರೊಳಗೆ ಜಾರಿಯಾಗದಿದ್ದರೆ ಮತ್ತೆ ಹೋರಾಟ ನಿಶ್ಚಿತಬಸವರಾಜಪ್ಪ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ
ರಾಜಕಾರಣಿಗಳು ರೈತರ ಹೋರಾಟ ಒಡೆಯಲು ನಿರಂತರ ಪ್ರಯತ್ನ ನಡೆಸಿದ್ದಾರೆ. ಇದರ ಪರಿಣಾಮ ಕಳಸಾಬಂಡೂರಿ ಜಾರಿಯಾಗಿಲ್ಲ. ಇದನ್ನು ರೈತರು ಅರಿಯಬೇಕು. ರೈತ ಮುಖಂಡರು ಒಂದಾಗಬೇಕಿದೆ.ಡಾ.ಸಂಗಮೇಶ ಕೊಳ್ಳಿಯವರ ಮುಖಂಡ
ರೈತ ಮುಖಂಡರು ಪ್ರಾಮಾಣಿಕ ಹೋರಾಟ ಮಾಡಬೇಕು. ಹೋರಾಟಗಾರರು ಸೂಟ್‌ಕೇಸ್‌ಗೆ ಮಾರಾಟ ಆಗಬ್ಯಾಡ್ರಿ. ಅಂಥವರು ರೈತ ಹೋರಾಟಕ್ಕೆ ಬರಬ್ಯಾಡ್ರಿಬಸವರಾಜ ಸಾಬಳೆ ರೈತ ಮುಖಂಡ
‘ಕಳಸಾಬಂಡೂರಿ ಜಾರಿಯಾಗದಿರಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇರ ಕಾರಣ’ ಎಂದು ರೈತ ಸೇನಾ ಕರ್ನಾಟಕ ರಾಜ್ಯ ಅಧ್ಯಕ್ಷ ವೀರೇಶ ಸೊಬರದಮಠ ಆರೋಪ ಮಾಡಿದರು. ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಹದಾಯಿ ಧರಣಿ ವೇದಿಕೆಯಲ್ಲಿ ಮಾತನಾಡಿ ‘ನಾವು ಕಾನೂನಾತ್ಮಕ ಹೋರಾಟ ಮಾಡಿ ಮಹದಾಯಿ ಕಳಸಾಬಂಡೂರಿ ಯೋಜನೆ ಜಾರಿಗೆ ಪ್ರಯತ್ನ ಮಾಡುತ್ತಿದ್ದೇವೆ. ವನ್ಯಜೀವಿ ಮಂಡಳಿ ಅನುಮತಿ ನೀಡದೇ ಇರುವುದಕ್ಕೆ ಕೇಂದ್ರ ಸಚಿವ ಭೂಪೇಂದ್ರ ಅವರ ಮೇಲೆ ಪ್ರಕರಣ ದಾಖಲಿಸಿದ್ದೇವೆ’ ಎಂದರು. ‘ನಾವು ಹೋರಾಟ ಮಾಡುವ ವೇದಿಕೆ ತೆರವಿಗೆ ಮೂರು ಪಕ್ಷಗಳಿಂದ ರಾಜಕೀಯ ಸಂಚು ನಡೆದಿದೆ. ಇದಕ್ಕೆ ಜಗ್ಗುವುದಿಲ್ಲ’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.