ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಯೂರಿಯಾ ಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗದ ಕಾರಣ ರೈತರು ಪಟ್ಟಣದ ಅಗ್ರೋ ಸೆಂಟರ್‌ಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕಿನ ಕೆಲವು ಸೊಸೈಟಿಗಳಿಗೆ ಗೊಬ್ಬರ ಪೂರೈಕೆಯಾದರೂ ರೈತರಿಗೆ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದು ವಾರದಿಂದ ಸುರಿದ ಮಳೆಗೆ ವಿವಿಧ ಬೆಳೆಗಳು ತೇವಾಂಶ ಹೆಚ್ಚಾಗಿ ಕೆಂಪು ಬಣ್ಣಕ್ಕೆ ತಿರುಗಿದ್ದು, ಬೆಳೆ ಉಳಿಸಿಕೊಳ್ಳಲು ಯೂರಿಯಾ ಅಗತ್ಯವಿದೆ. ಆದರೆ, ಬೇಡಿಕೆಗೆ ತಕ್ಕಂತೆ ಗೊಬ್ಬರ ನೀಡದ ಕೃಷಿ ಇಲಾಖೆ ಒಬ್ಬ ರೈತರಿಗೆ ಕೇವಲ ಎರಡು ಚೀಲ ಮಾತ್ರ ನೀಡುತ್ತಿದೆ. ಆದರೆ, ಒಂದು ಎಕರೆ ಭೂಮಿಗೆ ಕನಿಷ್ಠ ಒಂದು ಚೀಲ ಯೂರಿಯಾ ಗೊಬ್ಬರ ಅಗತ್ಯವಿದ್ದು, ಗೊಬ್ಬರ ಸಿಗದಂತಾಗಿದೆ.
ಗೋವಿನಜೋಳ ಬೆಳೆಗೆ ತೀರಾ ಅಗತ್ಯ: ತಾಲ್ಲೂಕಿನಲ್ಲಿ ಶೇ 50ರಷ್ಟು ರೈತರು ಗೋವಿನಜೋಳ ಬೆಳೆದಿದ್ದು ಯೂರಿಯಾ ಅಗತ್ಯವಿದೆ. ಕೆಲವೆಡೆ ರೈತರು ಬೆಳಿಗ್ಗೆಯಿಂದ ಸಾಲಿನಲ್ಲಿ ನಿಂತು ಗೊಬ್ಬರ ತೆಗೆದುಕೊಂಡು ಹೋಗುತ್ತಿದ್ದಾರೆ. ಹಿರೇಕೊಪ್ಪದಲ್ಲಿ ಒಂದು ಲೋಡ್ ಯೂರಿಯಾ ಗೊಬ್ಬರ ಬಂದಿದ್ದು, ಪಡೆಯಲು ರೈತರು ತೀವ್ರ ಹರಸಾಹಸ ಪಡುತ್ತಿರುವುದು ಕಂಡು ಬಂದಿತು.
ಪಟ್ಟಣದ ಅಗ್ರೋ ಸೆಂಟರ್, ಟಿಎಪಿಸಿಎಂಎಸ್ ಹಾಗೂ ವಿವಿಧ ಗ್ರಾಮಗಳ ಸೊಸೈಟಿಗಳಿಗೆ ಕೃಷಿ ಇಲಾಖೆ ಯೂರಿಯಾ ಪೂರೈಕೆ ಮಾಡಿದೆ. ಅಲ್ಲಿಯೂ ಗೊಬ್ಬರ ಪಡೆಯಲು ಜಾತ್ರೆ ರೀತಿ ಮುಗಿಬಿದ್ದಿದ್ದು ಮಂಗಳವಾರ ಕಂಡು ಬಂದಿತು. ಕೆಲವೆಡೆ ಕೃತಕ ಅಭಾವ ಸೃಷ್ಟಿಸಲಾಗಿದೆ ಎಂದು ರೈತರು ಆರೋಪಿಸಿದರು. ತಾಲ್ಲೂಕಿಗೆ 800 ಮೆಟ್ರಿಕ್ ಟನ್ ಅಗತ್ಯವಿದ್ದು, ಇಲ್ಲಿಯವರೆಗೆ ಹಂತ ಹಂತವಾಗಿ 550 ಮೆಟ್ರಿಕ್ ಟನ್ ಮಾತ್ರ ಪೂರೈಕೆಯಾಗಿದೆ.
ತಾಲ್ಲೂಕಿನಲ್ಲಿ 550 ಮೆಟ್ರಿಕ್ ಟನ್ ರಸಗೊಬ್ಬರ ಹಂತಹಂತವಾಗಿ ಪೂರೈಕೆಯಾಗಿದೆ. ಅದು ವಿವಿಧ ಗ್ರಾಮಗಳ ಸೊಸೈಟಿ, ಅಗ್ರೋ ಸೆಂಟರ್ ಹಾಗೂ ಟಿಎಪಿಸಿಎಂಎಸ್ ಮೂಲಕ ವಿತರಿಸಲಾಗುತ್ತಿದೆ. ರೈತರು ಸಮಾಧಾನದಿಂದ ಪಡೆಯಬೇಕು. ಇನ್ನೂ 250 ಮೆಟ್ರಿಕ್ ಟನ್ ಬೇಡಿಕೆಯಿದ್ದು, ಅದು ಬೇಗನೇ ಪೂರೈಕೆ ಆಗಲಿದೆ. ರೈತರು ನ್ಯಾನೋ ಯೂರಿಯಾ ಬಳಕೆಗೆ ಮುಂದಾಗಬೇಕು ಎಂದು ಕೃಷಿ ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ಹೇಳಿದರು.
ಮಳೆಯಾದಾಗ ಎರಡು ಮೂರು ದಿನದಲ್ಲಿ ಗೋವಿನಜೋಳ ಬೆಳೆಗೆ ಯೂರಿಯಾ ಗೊಬ್ಬರ ಹಾಕಬೇಕು. ಆದರೆ ಅದು ಸಕಾಲಕ್ಕೆ ಪೂರೈಕೆಯಾಗದ ಕಾರಣ ಬೆಳೆ ಹಾಳಾಗುತ್ತಿದ್ದು ಸಕಾಲಕ್ಕೆ ಯೂರಿಯಾ ಪೂರೈಸಬೇಕು- ಸಿದ್ದಪ್ಪ ಪೂಜಾರ, ಹಿರೇಕೊಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.