ADVERTISEMENT

ನರಗುಂದ: ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ

ಬಸವರಾಜ ಹಲಕುರ್ಕಿ
Published 3 ಏಪ್ರಿಲ್ 2024, 4:56 IST
Last Updated 3 ಏಪ್ರಿಲ್ 2024, 4:56 IST
ನರಗುಂದ ತಾಲ್ಲೂಕಿನ ಲ್ಲಿ ಹದ್ಲಿ ರಸ್ತೆಯಲ್ಲಿ ರಾಯಬಾಗದಿಂದ ಆಹಾರ ಅರಸಿ ಕುರಿಗಾಹಿಗಳ ಜೊತೆ ಬಂದ ಕುದುರೆಗಳ ನೀರು ಅರಸಿ ಹೊರಟ ದೃಶ್ಯ. ಚಿತ್ರ ಬಸವರಾಜ ಹಲಕುರ್ಕಿ
ನರಗುಂದ ತಾಲ್ಲೂಕಿನ ಲ್ಲಿ ಹದ್ಲಿ ರಸ್ತೆಯಲ್ಲಿ ರಾಯಬಾಗದಿಂದ ಆಹಾರ ಅರಸಿ ಕುರಿಗಾಹಿಗಳ ಜೊತೆ ಬಂದ ಕುದುರೆಗಳ ನೀರು ಅರಸಿ ಹೊರಟ ದೃಶ್ಯ. ಚಿತ್ರ ಬಸವರಾಜ ಹಲಕುರ್ಕಿ   

ನರಗುಂದ: ಬಾರದ ಮಳೆ ಹಾಗೂ ಭರ್ತಿಯಾಗದ ನವಿಲುತೀರ್ಥ ಜಲಾಶಯದಿಂದಾಗಿ ಈ ವರ್ಷದ ಬೇಸಿಗೆ ಜಾನುವಾರುಗಳಿಗೆ ಶಾಪವಾಗಿ ಪರಿಣಮಿಸಿದೆ. ಬೇಸಿಗೆ ಒಂದು ತಿಂಗಳು ಮೊದಲೇ ಆರಂಭವಾಗಿದ್ದರಿಂದ ಕುಡಿಯುವ ನೀರಿಗಾಗಿ ಜನ, ಜಾನುವಾರು ತತ್ತರಿಸುವಂತಾಗಿವೆ.

ಪ್ರತಿ ವರ್ಷ ಕೃಷಿಹೊಂಡಗಳು ಭರ್ತಿಯಾಗಿ ಬೇಸಿಗೆಯಲ್ಲಿ ಜಾನುವಾರುಗಳಿಗೆ ವರದಾನವಾಗುತ್ತಿದ್ದವು. ಆದರೆ ಅವು ಸಂಪೂರ್ಣ ಖಾಲಿಯಾಗಿ ಒಣಗಿದ್ದು ಹನಿ ನೀರಿಗೂ ತತ್ವಾರ ಉಂಟಾಗುತ್ತಿದೆ. ಹಿಂಗಾರು ಹಂಗಾಮು ಅಂತ್ಯದಲ್ಲಿ ಹಸಿರು ಅರಸಿ ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಸಾವಿರಾರು ಕುರಿಗಳು, ನೂರಾರು ಕುದುರೆಗಳನ್ನು ಕುರಿಗಾಹಿಗಳು ಇಲ್ಲಿ ವಲಸೆ ತರುತ್ತಾರೆ. ಅವುಗಳಿಗೆ ಅಳಿದುಳಿದ ಹಸಿರು ಬೆಳೆ ದೊರೆತರೂ ಸಮೀಪದಲ್ಲಿ ನೀರು ಸಿಗದಂತಾಗಿದೆ. ಬೀಡು ಬಿಟ್ಟ ಸ್ಥಳದಲ್ಲಿ ನೀರಿರದ ಪರಿಣಾಮವಾಗಿ ಅನೇಕ ಕುರಿಗಾಹಿಗಳು ಸಮೀಪ ಇರುವ ಗ್ರಾಮಗಳಿಗೆ ಬಂದು ಕೊಡಗಳ ಮೂಲಕ ನೀರು ಒಯ್ಯಬೇಕಾಗಿದೆ. ಈ ಮೂಲಕ ನೀರಡಿಕೆ ನಿವಾರಿಸಬೇಕಿದೆ. ಬಿಸಿಲ ಬೇಗೆಗೆ ಕುರಿಮರಿಗಳ ಪಾಡಂತೂ ಹೇಳತೀರದು.

ಭರ್ತಿಯಾಗದ ಜಲಾಶಯ: ಪ್ರತಿ ವರ್ಷ ಸವದತ್ತಿ ಬಳಿಯ ನವಿಲು ತೀರ್ಥ ಜಲಾಶಯ ಭರ್ತಿಯಾಗಿ ಮಲಪ್ರಭಾ ಕಾಲುವೆಗಳಿಗೆ ನೀರು ಹರಿಸಿ ಕೃಷಿಹೊಂಡ, ಕೆರೆಗಳನ್ನು ಭರ್ತಿ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಅಲ್ಪ ಪ್ರಮಾಣದಲ್ಲಿ ನೀರು ಹರಿಸಿದ ಪರಿಣಾಮವಾಗಿ ಪೂರ್ಣ ಪ್ರಮಾಣದಲ್ಲಿ ಕೃಷಿ ಹೊಂಡಗಳು ಭರ್ತಿಯಾಗದೇ ಜನ–ಜಾನುವಾರು ಹಾಹಾಕಾರ ಪಡುವಂತಾಗಿದೆ.

ADVERTISEMENT

ನೀರು ಎಲ್ಲಿ ಸಿಗತೈತ್ರಿ..!: ‘ಕುರಿಗೆ, ಕುದುರೆಗೆ ನೀರಡಿಕೆ ಬಹಳ ಆಗಾಕತ್ತೈತಿ... ಸಮೀಪದಾಗ ನೀರ ಇಲ್ಲ... ನೀರು ಎಲ್ಲಿ ಸಿಗತೈತಿ.. ಹೇಳ್ರಿ ಅಲ್ಲೆ ಹೋಗತೇವಿ....’ ಎಂದು ಕುದುರೆಯೊಂದಿಗೆ ಬೆಳಗಾವಿ ಜಿಲ್ಲೆಯ ರಾಯಬಾಗದ ಸಂಕವ್ವ ದಾರಿಗುಂಟ ಹೊರಟವರನ್ನು ಕೇಳುತ್ತಿರುವುದು ಕಂಡು ಬಂತು. ಆಗ ದಾರಿಹೋಕರು ಎರಡು ಕಿ.ಮೀ ಹೋದ್ರೆ ಒಂದು ಕೆರಿ ಐತಿ.. ಅಲ್ಲಿ ಸಿಗಬಹುದು ಎಂದಾಗ ಉಸ್ಸ ಅಂತ ಸಂಕವ್ವ ಹೆಜ್ಜೆ ಹಾಕುತ್ತ ‘ದೌಡ ಮಳಿ ಬಾರಪ್ಪ’ ಎಂದು ಪ್ರಾರ್ಥಿಸುವುದು ಕೇಳಿ ಬಂತು.

ತಾಲ್ಲೂಕಿನಲ್ಲಿ 2,161 ಕೃಷಿ ಹೊಂಡಗಳು ಇದ್ದರೂ ಈಗ ಅವುಗಳಿಗೆ ನೀರು ಹರಿಸಬೇಕಿದೆ. ಇದಕ್ಕೆ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸುತ್ತಾರೆ.

ನರಗುಂದ ತಾಲ್ಲೂಕು ಬಯಲು ಸೀಮೆ ಹಾಗೂ ಗುಡ್ಡ ಹೊಂದಿದ್ದು, ಜೊತೆಗೆ 40 ಡಿಗ್ರಿ ಸೆಲ್ಸಿಯಸ್ ಬಿಸಲಿನ ತಾಪದಿಂದಾಗಿ ಜನ ಮನೆಯಿಂದ ಹೊರಬರದ ಸ್ಥಿತಿ ಉಂಟಾಗಿದೆ. ಇನ್ನು ಜಾನುವಾರುಗಳ ಸ್ಥಿತಿ ಅಯೋಮಯ. ಆದ್ದರಿಂದ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಆಗಬೇಕಿದೆ.

ತಾಲ್ಲೂಕು ಆಡಳಿತ ಬೇಸಿಗೆ ಇರುವವರೆಗೆ ಜಾನುವಾರುಗಳಿಗೆ ಕುರಿಗಳಿಗೆ ಅವು ಇರುವ ಕಡೆ ಟ್ಯಾಂಕರ್ ಮೂಲಕವಾದರೂ ನೀರು ಪೂರೈಸಬೇಕು

-ವಾಸು ಚವ್ಹಾಣ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.