
ನರೇಗಲ್: ಗ್ರಾಮ ಪಂಚಾಯಿತಿ ಆಡಳಿತ, ಆರ್ಥಿಕ ಪಾರದರ್ಶಕತೆ, ವಿಕೇಂದ್ರೀಕೃತ ಯೋಜನೆ ಮತ್ತು ಜನರ ಸಹಭಾಗಿತ್ವದೊಂದಿಗೆ ಗಾಂಧಿ ಕಂಡ ಗ್ರಾಮ ಸ್ವರಾಜ್ ನನಸಾಗಬೇಕಿದೆ ಎಂದು ರಾಜ್ಯ ವಿಕೇಂದ್ರಿಕರಣ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.
ನರೇಗಲ್ ಸಮೀಪದ ಅಬ್ಬಿಗೇರಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಮಂಗಳವಾರ ನಡೆದ 2026-27ನೇ ಸಾಲಿನ ಕರ್ನಾಟಕ ಗ್ರಾಮ ಸುರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ಅಡಿಯಲ್ಲಿಯ ಜರುಗಿದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಯುವಕರು ಮತ್ತು ಗುರು-ಹಿರಿಯರಲ್ಲಿ ತಪ್ಪುಗಳನ್ನು ಖಂಡಿಸುವ ಗುಣ ಕಡಿಮೆಯಾಗುತ್ತಿದೆ. ಇದರಿಂದ ಗ್ರಾಮದಲ್ಲಿನ ಸ್ವರಾಜ್ ಕಲ್ಪನೆ ನನಸಾಗುತ್ತಿಲ್ಲ. ಜನರು ಜಾಗೃತರಾದಾಗ ಪಂಚಾಯತ್ ರಾಜ್ ಆಡಳಿತ ಸನ್ಮಾರ್ಗದಲ್ಲಿರುತ್ತದೆ ಎಂದರು.
ವಾರ್ಡ್ ಸಭೆ, ಜನವಸತಿ ಸಭೆ ಗ್ರಾಮಸಭೆಗಳಲ್ಲಿ ಪಾಲ್ಗೊಳ್ಳಬೇಕು ಮತ್ತು ಇವುಗಳ ಮಹತ್ವ ತಿಳಿಯಬೇಕು. ಗ್ರಾಮಸಭೆಗಳ ನಿರ್ಣಯಗಳನ್ನು ತಿರಸ್ಕರಿಸುವ ಅಧಿಕಾರ ಯಾರಿಗೂ ಇಲ್ಲ. ಗ್ರಾಮಸಭೆಗಳಲ್ಲಿ ಭಾಗವಹಿಸಿ ಮುಂದಿನ ಐದು ವರ್ಷಗಳ ಆದ್ಯತೆ ಮತ್ತು ಫಲಾನುಭವಿಗಳ ಪಟ್ಟಿ ಸಿದ್ದಪಡಿಸಿ ಯೋಗ್ಯರಿಗೆ ಸರಕಾರಿ ಲಾಭ ತಲುಪುವಂತೆ ಜನಸಾಮಾನ್ಯರು ಪ್ರಯತ್ನಿಸಬೇಕು. ಗ್ರಾಮ ನೈರ್ಮಲ್ಯಗಳಲ್ಲಿ ಪಾಲ್ಗೊಂಡು ಗಾಂಧಿ ಕನಸಿನಂತೆ ಗ್ರಾಮ ಸ್ವರಾಜ್ಯವನ್ನು ರಾಮರಾಜ್ಯ ಮಾಡಬೇಕಿದೆ ಎಂದರು.
ರೋಣ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ ಮಾತನಾಡಿ, ಗ್ರಾಮಾಡಳಿತ ಅಂದರೆ ಸ್ಥಳೀಯ ಸರ್ಕಾರವಾಗಿದೆ ಇದಕ್ಕೆ ಹೆಚ್ಚಿನ ಅಧಿಕಾರವಿರುತ್ತದೆ. ಗಾಂಧಿಯವರ ಗ್ರಾಮ ಸ್ವರಾಜ್ ಮತ್ತು ಸ್ವಚ್ಛ ಭಾರತ ನಿರ್ಮಿಸಲು ಪ್ರಜ್ಞಾವಂತರು ಶ್ರಮಿಸಬೇಕು. ಸದ್ಬುದ್ಧಿ, ಸದ್ವಿಚಾರ, ಸದ್ಬೋಧನೆಗಳ ಮೂಲಕ ಗಾಂಧಿ ಕನಸನ್ನು ನನಸಾಗಿಸೋಣ. ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಮೂಲಕ ವಿಕೇಂದ್ರೀಕೃತ ಯೋಜನೆ, ನೈಜ ಪ್ರಗತಿ, ಕೆಲಸ ಆಧಾರಿತ ಲೆಕ್ಕಪತ್ರ ನಿರ್ವಹಣೆಯನ್ನು ಬೆಂಬಲಿಸೋಣ ಎಂದರು.
ರೋಣ ತಾಲ್ಲೂಕು ಇಒ ಚಂದ್ರಶೇಖರ ಕಂದಕೂರ, ಬಸವರಾಜ ಪಲ್ಲೇದ , ರಾಮಣ್ಣ ಬಸವರಡ್ಡೇರ, ಸುರೇಶ ಬಸವರಡ್ಡೇರ, ಬಸವರಾಜ ವೀರಾಪೂರ, ವಿ. ಬಿ. ಸೋಮನಕಟ್ಟಿಮಠ, ಸಿ. ಕೆ. ಮಾಳಶೆಟ್ಟಿ, ಬಸವರಾಜ ತಳವಾರ, ಪಿ.ಡಿ.ಓ. ಲೋಹಿತ್ ಎಂ, ಲಲಿತಾ ರಾಥೋಡ, ಗುರಣ್ಣ ಅವರಡ್ಡಿ, ಎಚ್.ಡಿ. ದ್ವಾಸಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.