ADVERTISEMENT

ನರೇಗಲ್| ಬೀದಿನಾಯಿಗಳ ಹಾವಳಿಗೆ ಬೆಚ್ಚಿಬಿದ್ದ ಸಾರ್ವಜನಿಕರು; ಕಡಿವಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 3:00 IST
Last Updated 14 ಜನವರಿ 2026, 3:00 IST
   

ನರೇಗಲ್:‌ ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು ಮಕ್ಕಳು, ಮಹಿಳೆಯರು, ವೃದ್ಧರು, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಬೈಕ್‌ ಸವಾರರು ಓಡಾಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿಂಡು ಹಿಂಡಾಗಿ ಬರುವ ನಾಯಿಗಳು ಜನರು, ಸಾಕುಪ್ರಾಣಿಗಳ ಮೇಲೆ ದಾಳಿಗೆ ಮುಂದಾಗುತ್ತಿವೆ. ಮನೆಗಳ ಅಂಗಳಕ್ಕೂ ಲಗ್ಗೆಯಿಡುತ್ತಿದ್ದು ಅನೇಕ ವಸ್ತುಗಳನ್ನು ಹೊತ್ತೊಯ್ಯುತ್ತಿವೆ. ರಾತ್ರಿ ವೇಳೆ ಮನೆ ಅಂಗಳದಲ್ಲಿರುವ ಚಪ್ಪಲಿ, ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಬೀದಿನಾಯಿಗಳು ಕಚ್ಚಿ ಹಾಳು ಮಾಡುತ್ತಿದ್ದು ಮನೆಯವರು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಬೀದಿನಾಯಿಗಳ ಹಾವಳಿಗೆ ಸ್ಥಳೀಯ ಸಂಸ್ಥೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು
ಆಗ್ರಹಿಸಿದ್ದಾರೆ. 

ಬೀದಿನಾಯಿ ದಾಳಿಗೆ ಪಟ್ಟಣದ ಮೂರನೇ ವಾರ್ಡ್‌, ಆಶ್ರಯ ಕಾಲೊನಿಯ ಮಾರುತಿ ಈರಪ್ಪ ಚಳ್ಳಮರದ ಎನ್ನುವರ 2 ಆಕಳು ಈಚೆಗೆ ಬಲಿಯಾಗಿವೆ. ಮನೆಮುಂದೆ ಕಟ್ಟಿದಾಗ ದಾಳಿ ಮಾಡಿವೆ. ಹೀಗೆ ಆಡು, ಕುರಿ, ಕೋಳಿಗಳ ಬಲಿ ಸಾಮಾನ್ಯವಾಗಿವೆ. ಜನರು ಕಚ್ಚಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಅನೇಕ ಬೈಕ್‌ ಸವಾರರು ಅಪಘಾತಕ್ಕೆ ಒಳಗಾಗಿ ಪೆಟ್ಟುತಿಂದಿದ್ದಾರೆ. ಆಗಾಗ ಹುಚ್ಚುನಾಯಿಗಳ ಹಾವಳಿಯೂ ಪಟ್ಟಣದಲ್ಲಿ ನಡೆಯುತ್ತಿದೆ. ಆದ್ದರಿಂದ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು
ಒತ್ತಾಯಿಸಿದ್ದಾರೆ.

ADVERTISEMENT

ಪಟ್ಟಣದ ಹೊಸ ಬಸ್‌ ನಿಲ್ದಾಣ, ಹಳೆ ಬಸ್‌ ನಿಲ್ದಾಣದ ಸುತ್ತಲೂ ಎಗ್‌ ರೈಸ್‌ ಅಂಗಡಿಗಳು, ಅಬ್ಬಿಗೇರಿ ಮಾರ್ಗದ ರಸ್ತೆ ಬದಿ, ಕೆರೆ ಪಕ್ಕದಲ್ಲಿ ಚಿಕನ್‌ ಅಂಡಿಗಳು, ಹಳೆ ಬಸ್‌ ನಿಲ್ದಾಣದಿಂದ ಕುಕನೂರ ಕಡೆಗೆ ಹೋಗುವ ಮಾರ್ಗದಲ್ಲಿ ಕೋಳಿ ಫಾರಂ ಕಡೆ ಚಿಕನ್‌ ಅಂಗಡಿಗಳ ಸಂಖ್ಯೆ ಅಧಿಕವಾಗಿದೆ. ಅವುಗಳ ಜೊತೆಗೆ ಶಾಖಾಹಾರಿ ಹೊಟೇಲ್‌ಗಳ ತ್ಯಾಜ್ಯ ಮತ್ತು ಆಹಾರ ಪದಾರ್ಥಗಳ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಿಸದಿರುವ ಕಾರಣ ಬೀದಿ ನಾಯಿಗಳು ಹಿಂಡುಗಟ್ಟಲೆ ಅಲ್ಲಿಯೇ ಸುತ್ತಾಡುತ್ತವೆ.

ಅಲ್ಲಲ್ಲಿ ಬೀದಿಬದಿ, ಕೆರೆಯ ಸಮೀಪ ಸುರಿಯುವ ಕೋಳಿ, ಮಾಂಸದಂಗಡಿಗಳ ತ್ಯಾಜ್ಯ ನಾಯಿಗಳ ಮತ್ತೊಂದು ಅಡ್ಡೆಯಾಗಿದ್ದು, ತ್ಯಾಜ್ಯದಲ್ಲಿನ ಆಹಾರ ತಿನ್ನಲು ಶ್ವಾನಗಳ ಗುಂಪುಗಳ ನಡುವೆ ಕಾದಾಟ ನಡೆಯುತ್ತಲೇ ಇರುತ್ತದೆ. ರಾತ್ರಿ ವೇಳೆ ಪಟ್ಟಣದ 17 ವಾರ್ಡ್‌ಗೂ ಲಗ್ಗೆಯಿಡುತ್ತವೆ. ಅವುಗಳ ಕೂಗಾಟ, ಚೀರಾಟದಿಂದ ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕರು ಸ್ವಚ್ಚತೆಗೆ ಮತ್ತು ಎಗ್‌, ರೈಸ್‌, ಚಿಕನ್‌ ಅಂಗಡಿಯವರು ತ್ಯಾಜ್ಯ ನಿರ್ವಹಣೆಗೆ ಅಗತ್ಯ ಕ್ರಮವಹಿಸದೆ ನಿರ್ಲಕ್ಷ್ಯ ವಹಿಸಿರುವ ಕಾರಣ ಮಾಂಸದ ರುಚಿ ನೋಡಿರುವ ನಾಯಿಗಳು ಮನುಷ್ಯರ ಮೇಲೆ, ಪ್ರಾಣಿಗಳ ಮೇಲೆ ದಾಳಿಗೆ ಭಯವಿಲ್ಲದೆ ಮುಂದಾಗುತ್ತಿವೆ ಎಂದು ಹಿರಿಯ ನಾಗರಿಕರು ಆರೋಪಿಸಿದ್ದಾರೆ.

ಕೋಳಿ, ಮಾಂಸದಂಗಡಿ ಮತ್ತು ಮಾಂಸಾಹಾರದ ಹೋಟೆಲ್ ಸಮೀಪ ನಾಯಿಗಳ ದಂಡು ಬೀಡು ಬಿಟ್ಟಿರುತ್ತವೆ. ಈ ಪ್ರದೇಶಗಳಲ್ಲಿ ಜನ ಓಡಾಡಲು ಭಯ ಪಡುತ್ತಾರೆ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕು
ರಾಜೇಂದ್ರ ಜಕ್ಕಲಿ, ಹಿರಿಯ ನಾಗರೀಕ
ಬೀದಿನಾಯಿಗಳಿಗೆ ನಿರ್ವಹಣೆಗೆ ಟೆಂಡರ್‌ ಕರೆದರೂ ಯಾರು ಮುಂದೆ ಬರದ ಕಾರಣ ತಡವಾಗುತ್ತಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಉಪಟಳಕ್ಕೆ ಕಡಿವಾಣ ಹಾಕಲಾಗುವುದು.
ಮಲ್ಲೇಶ ಪಚ್ಚಿ, ಪ್ರಭಾರ ಮುಖ್ಯಾಧಿಕಾರಿ, ನರೇಗಲ್‌ ಪಟ್ಟಣ ಪಂಚಾಯಿತಿ
ನಮ್ಮಲ್ಲಿ‌ ಚುಚ್ಚುಮದ್ದು ಲಭ್ಯವಿದ್ದುಆಸ್ಪತ್ರೆಗೆ ಬಂದು ನಾಯಿಗಳಿಗೆ ಹಾಕಿಸಿಕೊಂಡು ಹೋಗಬೇಕು. ರೇಬಿಸ್‌ ಮಾರಣಾಂತಿಕ ಕಾಯಿಲೆ ಆಗಿರುವ ಕಾರಣ ನಿರ್ಲಕ್ಷ್ಯ ಬೇಡ.
ಡಾ. ಲಿಂಗಯ್ಯ ಗೌರಿ, ಪಶು ವೈದ್ಯಾಧಿಕಾರಿ ನರೇಗಲ್‌

482 ಬೀದಿನಾಯಿಗಳು 

ನರೇಗಲ್‌ ಪಟ್ಟಣ ಪಂಚಾಯಿತಿಯ 17 ವಾರ್ಡ್‌ಗಳಲ್ಲಿ 482 ಬೀದಿ ನಾಯಿಗಳಿವೆ. 45 ಸಂಸ್ಥೆಗಳಿಗೆ ನೋಟಿಸ್‌ ನೀಡಲಾಗಿತ್ತು, ಅಲ್ಲಿನ ವಿವಿಧ ಸಂಸ್ಥೆಗಳಲ್ಲಿ 179 ನಾಯಿಗಳಿವೆ. ಪಟ್ಟಣದಲ್ಲಿ ಸಾಕು ನಾಯಿಗಳಿಗೆ ಯಾರೂ ಪರವಾನಗಿ ಪಡೆದಿಲ್ಲ. ಹಾಗಾಗಿ ಸಾಕು ನಾಯಿಗಳ ನಿಖರ ಮಾಹಿತಿ ದೊರೆಯುತ್ತಿಲ್ಲ. ಆದರೂ ಅವರನ್ನು ಗುರುತಿಸಿ ನೋಟಿಸ್‌ ನೀಡಲಾಗುವುದು ಎಂದು ಪಟ್ಟಣ ಪಂಚಾಯಿತಿಯ ಪ್ರಭಾರ ಆರೋಗ್ಯ ನಿರೀಕ್ಷಕ ಎಂ.ಎಸ್.‌ಬರದೂರ ಮಾಹಿತಿ ನೀಡಿದರು.

ಸದ್ಯ ಸ್ಥಳೀಯ ಪೊಲೀಸ್‌ ಠಾಣೆಯ ಹಿಂದುಗಡೆಯಿರುವ ಪಟ್ಟಣ ಪಂಚಾಯಿತಿಯ ಡ್ರೈವ್‌ ವೇಸ್ಟ್‌ ಕಲೆಕ್ಷನ್‌ ಸೆಂಟರ್‌ ಅನ್ನೇ ಬೀದಿನಾಯಿಗಳ ಸಂತಾನ ಶಕ್ತಿಹರಣ ಮತ್ತು ನಿರ್ವಹಣಾ ಕೇಂದ್ರವೆಂದು ತಾತ್ಕಾಲಿಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶಾಶ್ವತ ಪರಿಹಾರಕ್ಕೆ ಟೆಂಡರ್‌ ಕರೆದಿದ್ದೇವೆ. ಶೆಡ್‌ ನಿರ್ಮಾಣಕ್ಕೆ ₹7.63 ಲಕ್ಷ ಅನುದಾನ ಬಂದಿದೆ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.