ADVERTISEMENT

ಅವ್ಯವಸ್ಥೆಯ ತಾಣ ನರೇಗಲ್‌ ಬಸ್‌ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 4:52 IST
Last Updated 15 ಸೆಪ್ಟೆಂಬರ್ 2025, 4:52 IST
ನರೇಗಲ್‌ ಬಸ್‌ ನಿಲ್ದಾಣದ ಕ್ಯಾಂಟೀನ್‌ ಪಕ್ಕದಲ್ಲಿ ಬೆಳೆದಿರುವ ಹುಲ್ಲು ಹಾಗೂ ಗಿಡಗಳು
ನರೇಗಲ್‌ ಬಸ್‌ ನಿಲ್ದಾಣದ ಕ್ಯಾಂಟೀನ್‌ ಪಕ್ಕದಲ್ಲಿ ಬೆಳೆದಿರುವ ಹುಲ್ಲು ಹಾಗೂ ಗಿಡಗಳು   

ನರೇಗಲ್:‌ ಪಟ್ಟಣದ ಹೊಸ ಬಸ್‌ ನಿಲ್ದಾಣ ಅವ್ಯವಸ್ಥೆಯ ತಾಣವಾಗಿ ಪರಿವರ್ತನೆಯಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್‌ ನಿಲ್ದಾಣವನ್ನು ಸ್ವಚ್ಚಗೊಳಿಸುವವರೇ ಇಲ್ಲದಂತಾಗಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿರುತ್ತದೆ. ಜನರು ಕುಳಿತುಕೊಳ್ಳುವ ಆಸನಗಳ ಪಕ್ಕದಲ್ಲಿಯೇ ಎಲೆ ಅಡಿಕೆ, ಗುಟ್ಕಾ ಜಗಿದು ಉಗಿದಿದ್ದಾರೆ. ಇದರಿಂದ ಕುಳಿತುಕೊಳ್ಳಲು ಆಗದಷ್ಟು ದುರ್ವಾಸನೆ ಬರುತ್ತಿದೆ. ಮಳೆ ಬಂದರೆ ಎರಡು ಮೂರು ಕಡೆಗಳಲ್ಲಿ ಸೋರುತ್ತದೆ. ಹಾಗಾಗಿ ಪ್ರಯಾಣಿಕರು ನಿತ್ಯ ತೊಂದರೆಗೆ ಒಳಗಾಗುತ್ತಿದ್ದಾರೆ. ಆದರೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಬಸ್‌ ನಿಲ್ದಾಣದಲ್ಲಿ ಹುಲ್ಲು, ಗಿಡ ಹಾಗೂ ಕಂಟಿಗಳು ಹೆಜ್ಜೆ ಇಡಲು ಭಯವಾಗುವಷ್ಟು ಎತ್ತರ ಬೆಳೆದಿವೆ. ಜನರ ಓಡಾಡಲು ಭಯ ಪಡುವಂತಾಗಿದೆ. ಆಗಾಗ ಬಸ್‌ ನಿಲ್ದಾಣದ ಒಳಗೆ ವಿಷಜಂತುಗಳು ಕಾಣಿಸಿಕೊಳ್ಳುತ್ತಿವೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಮಹಿಳಾ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲ. ಇದರಿಂದಾಗಿ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕೆಲವರು ಅನಿವಾರ್ಯವಾಗಿ ಬಯಲಲ್ಲೇ ಶೌಚಕ್ಕೆ ಹೋಗುತ್ತಿದ್ದಾರೆ. ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಸ್ವಚ್ಛತೆ ಕೊರತೆಯಿಂದಾಗಿ ಅದರ ಬಳಕೆ ಕಡಿಮೆಯಾಗಿದೆ.

ಇಲ್ಲಿನ ಶೌಚಾಲಯದಲ್ಲಿ ಕೆಲವೊಮ್ಮೆ ನೀರಿನ ಪೂರೈಕೆ ಇರುವುದಿಲ್ಲ. ಪುರುಷರ ಶೌಚಾಲಯದಲ್ಲಿ ಪೈಪ್‌ ಹಾಗೂ ನೀರು ಪೂರೈಕೆ ನಲ್ಲಿಗಳು ಹಾಳಾಗಿವೆ. ನಿರ್ವಹಣೆ ಕೊರತೆಯಿಂದಾಗಿ ಗಬ್ಬೆದ್ದು ನಾರುತ್ತಿರುವ ಕಾರಣ ಜನರು ಮೂತ್ರ ವಿಸರ್ಜನೆಗೆ ಬಯಲನ್ನೇ ಆಶ್ರಯಿಸಿದ್ದಾರೆ. 

ಕೊಠಡಿಯ ಪಕ್ಕದ ಜಾಗದಲ್ಲಿ ಕಾರು, ಆಟೊ ಸೇರಿದಂತೆ ಖಾಸಗಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅದರ ಬಸ್‌ ನಿಲ್ದಾಣ ಕಾಂಪೌಂಡ್‌ಗೆ ಅಂಟಿಕೊಂಡು ಹಾಕಿರುವ ಎಗ್‌ ರೈಸ್‌, ಚಹಾ, ಪುಲಾವ್‌ ಅಂಗಡಿಯವರು ತಾವು ಬಳಸಿದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಕಾಂಪೌಂಡ್‌ ಒಳಗೆ ಎಸೆಯುತ್ತಿದ್ದಾರೆ. ಹೀಗಾಗಿ ಪ್ಲಾಸ್ಟಿಕ್‌ ಹಾಳೆಗಳ ರಾಶಿಯೇ ಕಂಡು ಬರುತ್ತದೆ.

‘ಕಸ ಹಾಕದಂತೆ ಅನೇಕ ಬಾರಿ ಅಂಗಡಿಯವರಿಗೆ ಹೇಳಿದ್ದೇವೆ. ಆದರೂ ಮಾತು ಕೇಳುತ್ತಿಲ್ಲ’ ಎಂದು ನಿಲ್ದಾಣದ ನಿಯಂತ್ರಣಾಧಿಕಾರಿ ಬಿ.ಎಸ್.‌ನಾಯ್ಕರ್‌ ತಿಳಿಸಿದ್ದಾರೆ.

ಪ್ರತಿದಿನವೂ 250ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳನ್ನು ಒಳಗೊಂಡು ಅಂದಾಜು 12 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ನಿತ್ಯ ಸಂಚರಿಸುತ್ತಾರೆ. ಆದರೆ, ಬಸ್‌ ನಿಲ್ದಾಣದಲ್ಲಿ ಫ್ಲಾಟ್‌ಫಾರಂ ವ್ಯವಸ್ಥೆ ಇಲ್ಲ. ನಾಮಫಲಕಗಳ ವ್ಯವಸ್ಥೆ ಇಲ್ಲ. ಬಸ್‌ಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಳಿತುಕೊಳ್ಳುವ ಆಸನಗಳ ಮೇಲೆ ಹಗಲು ವೇಳೆಯಲ್ಲಿ ಜನರು ಮಲಗಿರುತ್ತಾರೆ. ಹೀಗಾಗಿ ನಿಲ್ದಾಣ ಜನರಿಗೆ ಉಪಯೋಗವಾಗುತ್ತಿಲ್ಲ. ಇನ್ನಾದರೂ ಅಧಿಕಾರಿಗಳು ಬಸ್‌ ನಿಲ್ದಾಣದ ಅವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಬೇಕು ಎನ್ನುವುದು ಜನರ ಆಗ್ರಹವಾಗಿದೆ.

ನರೇಗಲ್‌ ಬಸ್‌ ನಿಲ್ದಾಣದ ಮಹಿಳಾ ವಿಶ್ರಾಂತಿ ಕೊಠಡಿ ಪಕ್ಕದಲ್ಲಿ ಕಸದ ರಾಶಿ ಬಿದ್ದಿರುವುದು
ನರೇಗಲ್‌ ಪಟ್ಟಣದ ಬಸ್‌ ನಿಲ್ದಾಣ

‘ಟೆಂಡರ್‌ ಪಡೆಯಲು ಯಾರು ಬರುತ್ತಿಲ್ಲ’ ನರೇಗಲ್‌ ಪಟ್ಟಣದ ಬಸ್‌ ನಿಲ್ದಾಣದ ಶೌಚಾಲಯಗಳನ್ನು ಟೆಂಡರ್‌ ಪಡೆಯಲು ಯಾರು ಬರುತ್ತಿಲ್ಲ. ಹೀಗಾಗಿ ನಿರ್ವಹಣೆ ಸಮಸ್ಯೆ ಎದುರಾಗಿದೆ. ಯಾರು ಟೆಂಡರ್‌ ಪಡೆಯುತ್ತಾರೋ ಅವರೇ ಬಸ್‌ ನಿಲ್ದಾಣದ ಸ್ವಚ್ಛತೆ ಮಾಡಬೇಕು. ಆದರೆ ಅನೇಕ ಬಾರಿ ಮರು ಟೆಂಡರ್‌ ಕರೆದರು ಸಹ ಯಾರು ಪಡೆಯಲು ಇಚ್ಛಿಸುತ್ತಿಲ್ಲ. ಸ್ಥಳೀಯ ಪಟ್ಟಣ ಪಂಚಾಯಿತಿಯವರಿಂದ ಅನೇಕ ಸಲ ಸ್ವಚ್ಛತೆ ಮಾಡಿಸಿದ್ದೇವೆ ಎಂದು ರೋಣ ಬಸ್‌ ಡಿಪೋ ಮ್ಯಾನೇಜರ್‌ ಎಂ.ಎಂ. ಎಕ್ಸಂಬಿ ಮಾಹಿತಿ ನೀಡಿದರು. ದೊಡ್ಡ ನಗರಗಳಿಗೆ ಹೋಲಿಕೆಯಾಗುವಂತೆ ಟೆಂಡರ್‌ ಮೌಲ್ಯ ನಿಗದಿ ಮಾಡಿದ್ದಾರೆ. ಆದರೆ ಇಲ್ಲಿ ಯಾವುದೇ ರೀತಿಯ ಮೂಲಸೌರ್ಯಗಳಿಲ್ಲ ನೀರಿನ ವ್ಯವಸ್ಥೆ ಇಲ್ಲ ಶೌಚಾಲಯದ ಕಟ್ಟಡ ಸರಿಯಾಗಿಲ್ಲ. ಅಷ್ಟೊಂದು ಹಣ ಖರ್ಚು ಮಾಡಿ ಟೆಂಡರ್‌ ಪಡೆಯಲು ಆಗುವುದಿಲ್ಲ ಎಂದು ಶೌಚಾಲಯ ನಿರ್ವಹಣೆ ಮಾಡುವವರು ತಿಳಿಸಿದರು.

ಬಸ್‌ ನಿಲ್ದಾಣದ ಕ್ಯಾಂಟೀನ್‌ ಬಂದ್‌ ಬಸ್‌ ನಿಲ್ದಾಣದ ಕ್ಯಾಂಟೀನ್ ಯಾವಾಗಲೂ ಬಂದ್‌ ಆಗಿರುತ್ತದೆ. ಅದನ್ನು ಟೆಂಡರ್‌ ಪಡೆದ ವ್ಯಕ್ತಿಗಳು ಬೇರೆಯವರಿಗೆ ಹೆಚ್ಚಿನ ಲಾಭಕ್ಕಾಗಿ ಬಾಡಿಗೆ ಕೊಡುವ ಉದ್ದೇಶದಿಂದ ಬಳಕೆಗೆ ಮುಂದಾಗುತ್ತಿಲ್ಲ. ಈಗಾಗಲೇ ನಾಲ್ಕೈದು ಜನರು ಟೆಂಡರ್‌ ಪಡೆದ ವ್ಯಕ್ತಿಯಿಂದ ಬಾಡಿಗೆ ಪಡೆದು ಅರ್ಧಕ್ಕೆ ಬಿಟ್ಟಿದ್ದಾರೆ. ನೀರಿನ ಸಮಸ್ಯೆ ಸುತ್ತಲೂ ಸ್ವಚ್ಛತೆ ಸಮಸ್ಯೆ ಹೆಚ್ಚಾಗಿರುವ ಕಾರಣ ಜನರು ಹೋಟೆಲ್‌ ಕಡೆಗೆ ಬರುವುದು ಕಡಿಮೆಯಾಗಿದೆ. ಹೀಗಾಗಿ ಯಾರೇ ಹೊಟೆಲ್‌ ಪಡೆದರು ಕೆಲವೇ ತಿಂಗಳಲ್ಲಿ ಕದ ಹಾಕುತ್ತಿದ್ದಾರೆ. ಸದ್ಯ ಕಾಂಟೀನ್‌ ಮುಚ್ಚಿ ಅನೇಕ ದಿನಗಳಾಗಿವೆ. ಅಲ್ಲಿ ಹೆಗ್ಗಣಗಳು ಸೇರಿಕೊಂಡಿವೆ. ಕಟ್ಟಡಕ್ಕೂ ತೊಂದರೆ ಆಗುತ್ತಿದೆ. ಆದ್ದರಿಂದ ಟೆಂಡರ್‌ ಪಡೆದ ವ್ಯಕ್ತಿ ಕ್ಯಾಂಟೀನ್‌ ಆರಂಭಿಸದೇ ಇದ್ದಲ್ಲಿ ಅವರ ವಿರುದ್ಧ ಕ್ರಮಕೈಗೊಂಡು ಮರು ಟೆಂಡರ್‌ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ರೋಣ ಬಸ್‌ ಡಿಪೋ ಮ್ಯಾನೇಜರ್‌ ಎಂ.ಎಂ. ಎಕ್ಸಂಬಿ ‘ಕ್ಯಾಂಟೀನ್‌ ಟೆಂಡರ್‌ ಪಡೆದ ವ್ಯಕ್ತಿ ಪ್ರತಿ ತಿಂಗಳು ಬಾಡಿಗೆಯನ್ನು ಸರಿಯಾಗಿ ಕಟ್ಟುತ್ತಿದ್ದಾರೆ. ಇನ್ನೆರಡು ವರ್ಷ ಅವರಿಗಿರುವ ಕಾರಣ ಬೇರೆಯವರಿಗೆ ಕೊಡಲು ಬರುವುದಿಲ್ಲ. ಬಾಡಿಗೆ ಕೊಟ್ಟವರ ಜತೆಗೆ ವೈಯಕ್ತಿಕ ಸಮಸ್ಯೆಯಿಂದಾಗಿ ಬಂದ್‌ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಅಧಿಕಾರಿಗಳು ಏನಂತಾರೆ? ಸ್ವಚ್ಛತೆಗೆ ಕ್ರಮ ಬಸ್‌ ನಿಲ್ದಾಣದ ಸ್ವಚ್ಛತೆಗೆ ಕ್ರಮವಹಿಸಲಾಗುವುದು. ಡಿಟಿಒ ಅವರಿಗೆ ಸಂಪರ್ಕ ಮಾಡಿ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಬರುವಂತೆ ತಿಳಿಸಲಾಗುವುದುಚನ್ನಪ್ಪಗೌಡ್ರ ಕೆಎಸ್‌ಆರ್‌ಟಿಸಿ ಡಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ನರೇಗಲ್‌ ಬಸ್‌ ನಿಲ್ದಾಣವು ತುಂಬಾ ಹಳೇಯದಾಗಿರುವ ಕಾರಣ ಸದಸ್ಯದಲ್ಲಿಯೇ ಕಟ್ಟಡ ತೆರವುಗೊಳಿಸಿ ಹೊಸದಾಗಿ ನಿರ್ಮಿಸುವ ಕಾರ್ಯ ನಡೆಯಲಿದೆ. ಈಗಾಗಲೇ ನಾವು ಪತ್ರ ಬರೆದಿದ್ದು ಶಾಸಕರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಫೋನ್‌ ಮೂಲಕ ಮಾತನಾಡಿದ್ದಾರೆ.ಎಂ.ಎಂ. ಎಕ್ಸಂಬಿ ರೋಣ ಬಸ್‌ ಡಿಪೋ ಮ್ಯಾನೇಜರ್‌ ರಾಸಾಯನಿಕ ಸಿಂಪಡಣೆ ಮಳೆಗಾಲ ಆಗಿರುವ ಕಾರಣ ಹುಲ್ಲು ಬೆಳೆಯುವುದು ಸಾಮಾನ್ಯವಾಗಿದೆ. ಈಗಾಗಲೇ ಅನೇಕ ಬಾರಿ ಕಸ ಬೆಳೆಯದಂತೆ ರಾಸಾಯನಿಕ ಸಿಂಪಡಣೆ ಮಾಡಿಸಿದ್ದೇವೆ.ಬಿ.ಎಸ್.‌ನಾಯ್ಕರ್‌ ನಿಯಂತ್ರಣಾಧಿಕಾರಿ ಬಸ್‌ ನಿಲ್ದಾಣ

ಸಾರ್ವಜನಿಕರು ಏನಂತಾರೆ? ಹೋರಾಟ ಅನಿವಾರ್ಯ ಬಸ್‌ ನಿಲ್ದಾಣದ ಅವವ್ಯಸ್ಥೆಯನ್ನು ಸರಿಪಡಿಸದೇ ಇದ್ದರೆ ಹಾಗೂ ಜನರಿಗೆ ಉಪಯುಕ್ತವಾಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇದ್ದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹೋರಾಟ ನಡೆಸಲಾಗುವುದುಹನಮಂತಪ್ಪ ಎಚ್.‌ ಅಬ್ಬಿಗೇರಿ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶೌಚಾಲಯ ಸುಸ್ಥಿತಿಯಲ್ಲಿಡಿ ಬಸ್‌ ನಿಲ್ದಾಣಕ್ಕೆ ಬರುವ ಮಹಿಳೆಯರು ವಿದ್ಯಾರ್ಥಿನಿಯರು ಅದರಲ್ಲೂ ಗರ್ಭಿಣಿಯರು ಹಾಗೂ ತಾಯಂದಿರು ನರಕಯಾತನೆ ಅನುಭಿಸುವಂತಾಗಿದೆ. ಇನ್ನಾದರು ಮಹಿಳಾ ಶೌಚಾಲಯವನ್ನು ಸರಿಪಡಿಸಬೇಕು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು.ಶರಣಮ್ಮ ರಾಥೋಡ್ ನರೇಗಲ್‌ ನಿವಾಸಿ ಸಿಟಿಟಿವಿ ಕ್ಯಾಮೆರಾ ಅಳವಡಿಸಿ ಬಸ್‌ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಶಾಲಾ ಕಾಲೇಜಿನ ಅವಧಿಯಲ್ಲಿ ಪುಂಡರ ಹಾವಳಿ ತಡೆಯಲು ಪೊಲೀಸ್‌ ಬೀಟ್‌ ಆಗಬೇಕು. ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು.ಸೋಮಪ್ಪ ಹನಮಸಾಗರ ದಲಿತ ಮುಖಂಡ ಮರು ನಿರ್ಮಾಣಕ್ಕೆ ಆಗ್ರಹ ನರೇಗಲ್‌ ಬಸ್‌ ನಿಲ್ದಾಣದ ಪೂರ್ಣ ಪ್ರಮಾಣದ ಅಭಿವೃದ್ಧಿಗೆ ಮುಂದಾಗಬೇಕು. ಶೌಚಾಲಯ ಹಾಗೂ ಕಟ್ಟಡವನ್ನು ವ್ಯವಸ್ಥಿತವಾಗಿ ಮರು ನಿರ್ಮಾಣ ಮಾಡಬೇಕು.ರಾಜೇಂದ್ರ ಜಕ್ಕಲಿ ಗ್ರಾಮದ ಹಿರಿಯ ಪಾರ್ಕಿಂಗ್‌ ವ್ಯವಸ್ಥೆ ಸರಿಪಡಿಸಿ ಬಸ್‌ ನಿಲ್ದಾಣದ ಒಳಗೆ ಖಾಸಗಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತದೆ. ಅದರಲ್ಲೂ ವಿಂಡ್‌ ಕಂಪನಿ ವಾಹನಗಳ ನಿಲ್ದಾಣವಾಗಿ ಮಾರ್ಪಟ್ಟಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಕಡಿವಾಣ ಹಾಕಬೇಕು.ಸಂತೋಷ ಮಣ್ಣೋಡ್ಡರ ಕಾರ್ಮಿಕ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.