ADVERTISEMENT

ನರೇಗಲ್ ಜಮೀನಿನಲ್ಲಿ ದೇಸಿ ಗೋವುಗಳ ಹಿಂಡು

ಭೂಮಿಯ ಫಲವತ್ತತೆ, ರೋಗನಿರೋಧಕ ಶಕ್ತಿ ಹೆಚ್ಚಿಸಲು ಮುಂದಾದ ರೈತರು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 4:35 IST
Last Updated 19 ಏಪ್ರಿಲ್ 2025, 4:35 IST
ನರೇಗಲ್‌ ಪಟ್ಟಣದ ನಿವೃತ್ತ ಸೇನಾಧಿಕಾರಿ ರಾಮಣ್ಣ ಸಕ್ರೋಜಿಯವರ ಹೊಲದಲ್ಲಿ ನಿಲ್ಲಿಸಿರುವ ದೇಸಿ ಗೋವುಗಳ ಹಿಂಡು
ನರೇಗಲ್‌ ಪಟ್ಟಣದ ನಿವೃತ್ತ ಸೇನಾಧಿಕಾರಿ ರಾಮಣ್ಣ ಸಕ್ರೋಜಿಯವರ ಹೊಲದಲ್ಲಿ ನಿಲ್ಲಿಸಿರುವ ದೇಸಿ ಗೋವುಗಳ ಹಿಂಡು   

ನರೇಗಲ್:‌ ಹೋಬಳಿಯ ಖಾಲಿ ಜಮೀನಿನಲ್ಲಿ ದೇಸಿ ಗೋವುಗಳ ಹಿಂಡು ಬೀಡುಬಿಟ್ಟಿವೆ. ಮಣ್ಣಿನ ಫಲವತ್ತತೆ ಹೆಚ್ಚಿಸಲು ನಿವೃತ್ತ ಸೇನಾಧಿಕಾರಿ ರಾಮಣ್ಣ ಸಕ್ರೋಜಿ ಅವರು ದೇಸಿ ಗೋವುಗಿಗೆ ಮೊರೆ ಹೋಗಿದ್ದು, ಕೊಪ್ಪಳ ಜಿಲ್ಲೆಯ ಕೆರಳ್ಳಿ ಗ್ರಾಮದ ಸಾವಿರಾರು ಆಕಳುಗಳನ್ನು ಆಹ್ವಾನಿಸಿ ಮಣ್ಣಿನ ಫಲವತ್ತತೆ ಕಾಪಾಡಲು ಮುಂದಾಗಿದ್ದಾರೆ.

18 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯ ಕುರಗಡ್ಡಿ, ಹಾಲವರ್ತಿ ಹಾಗೂ ಕೆರಳ್ಳಿ ಗೋಪಾಲಕರ ಗೆಳತನ ಮಾಡಿದ ರಾಮಣ್ಣ ಅವರು ಗೋವುಗಳ ಸಗಣಿ ಹಾಗೂ ಗಂಜಲು ಪ್ರಯೋಗಕ್ಕೆ ಮುಂದಾಗಿದ್ದು, ಅವುಗಳನ್ನು ತಮ್ಮ ಹೊಲದಲ್ಲಿ ನಿಲ್ಲಿಸಿದ್ದಾರೆ. ಇದರಿಂದ ಭೂಮಿ ಫಲವತ್ತತೆ ಹೆಚ್ಚಾಗಿ ಮಣ್ಣಿನ ರೋಗ ನಿರೋಧಕ ಶಕ್ತಿ ಹೆಚ್ಚಳಗೊಂಡಿದೆ. ಇಳುವರಿಯೂ ಉತ್ತಮವಾಗಿ ಬಂದಿದ್ದು, ವರ್ಷಕ್ಕೊಮ್ಮೆ ತಮ್ಮ ಜಮೀನಿನಲ್ಲಿ ದೇಸಿ ಗೋವುಗಳನ್ನು ಕರೆತರಲು ಆದ್ಯತೆ ನೀಡಿದ್ದಾರೆ. ನೂರಾರು ಗೋವುಗಳನ್ನು ಕಂಡ ಇಲ್ಲಿನ ರೈತರು ತಮ್ಮ ಜಮಿನುಗಳಿಗೆ ದನಗಳನ್ನು ಬಿಡುವಂತೆ ಬೇಡಿಕೆ ಇಡುತ್ತಿದ್ದಾರೆ.

‘ಗೋವುಗಳನ್ನು ನಿಲ್ಲಿಸಲು ಎರಡು ವರ್ಷ ಮುಂಚಿತವಾಗಿ ಬುಕಿಂಗ್‌ ಮಾಡಬೇಕು. ಮಳೆಗಾಲ ಆರಂಭವಾಗುವ ಮೊದಲು ಬಳ್ಳಾರಿ, ಗಂಗಾವತಿ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳ ವಿವಿಧ ಭಾಗದ ರೈತರ ಜಮೀನುಗಳಿಗೆ ಹೋಗುತ್ತೇವೆ. ನೀರು, ಮೇವು ಸಿಗುವ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಮಳೆಗಾಲದಲ್ಲಿ ಸಂಡೂರು ಗುಡ್ಡ, ಕೊಪ್ಪಳ ಗುಡ್ಡದಲ್ಲಿ ವಾಸ ಮಾಡುತ್ತೇವೆ. ಗೋವಿನ ಹಿಂಡಿನ ಜೊತೆಯಲ್ಲೇ ನಮ್ಮ ಸಂಸಾರ ಇರುತ್ತದೆ. ಕಾಲಕ್ಕನುಗುಣವಾಗಿ ಔಷಧೋಪಚಾರ, ರಕ್ಷಣೆ ಮಾಡುತ್ತೇವೆ ಹಾಗೂ ಕುಟುಂಬ ಸಮೇತರಾಗಿ ಬರುವ ಗೋಪಾಲಕರು ಊರಿನ ಜಾತ್ರೆ ಬರುತ್ತಿದ್ದಂತೆ ಕೊಪ್ಪಳ ಕಡೆಗೆ ಸಾಗುತ್ತೇವೆ’ ಎಂದು ಗೋಪಾಲಕ ಭರಮಣ್ಣ ಈರಪ್ಪ ಗುರಿಕಾರ ತಿಳಿಸಿದರು.

ADVERTISEMENT

ಪ್ರತಿ ಆಕಳಿಗೆ ₹10ರಂತೆ ಒಂದು ರಾತ್ರಿ ನಿಲ್ಲಿಸಿದರೆ ₹7 ಸಾವಿರ ಸಿಗುತ್ತದೆ. ದಿನಕ್ಕೆ 2 ಎಕರೆ ಪ್ರದೇಶಕ್ಕೆ ಗೋವಿನ ಸಗಣಿ ಹಾಗೂ ಗಂಜಲಿನಲ್ಲಿರುವ ಪೋಷಕಾಂಶಗಳು ಜಮೀನಿಗೆ ಸಿಗುತ್ತದೆ. ಹೊಲದ ಮಾಲೀಕರು ಹಣ, ಜೋಳ, ಮೇವು ನೀಡುತ್ತಿರುವುದರಿಂದ ಗೋಪಾಲಕರು ಖುಷಿಯಾಗಿದ್ದಾರೆ. 60ಕ್ಕೂ ಹೆಚ್ಚು ದೇಸಿ ತಳಿ ಹೋರಿ ಕರುಗಳಿದ್ದು, ಅವುಗಳ ಖರೀದಿ ಜೋರು ನಡೆದಿದೆ. ಉಳುಮೆಗೆ ಉಪಯುಕ್ತವಾಗುವ ಹೋರಿ ಕರುಗಳಿಗೆ ಬೆಳವಣಿಗೆಗೆ ತಕ್ಕಂತೆ ₹10ರಿಂದ ₹12 ಸಾವಿರ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಚಿಕ್ಕಹಂದಿಗೋಳ ರೈತರು 2 ಜತೆ ಹೋರಿಕರುಗಳನ್ನು ₹50 ಸಾವಿರ ಕೊಟ್ಟು ಕೊಂಡುಕೊಂಡಿದ್ದಾರೆ. ಎರಡು ವರ್ಷ ಮೇಯಿಸಿದರೆ ಲಕ್ಷದ ಮೇಲೆ ಮಾರಾಟವಾಗುತ್ತವೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.

ನರೇಗಲ್‌ ಪಟ್ಟಣದ ನಿವೃತ್ತ ಸೇನಾಧಿಕಾರಿ ರಾಮಣ್ಣ ಸಕ್ರೋಜಿಯವರ ಹೊಲದಲ್ಲಿ ನಿಲ್ಲಿಸಿರುವ ದೇಸಿ ಗೋವುಗಳ ಹಿಂಡು
ನರೇಗಲ್‌ ಪಟ್ಟಣದ ನಿವೃತ್ತ ಸೇನಾಧಿಕಾರಿ ರಾಮಣ್ಣ ಸಕ್ರೋಜಿಯವರ ಹೊಲದಲ್ಲಿ ನಿಲ್ಲಿಸಿರುವ ದೇಸಿ ಗೋವುಗಳ ಹಿಂಡು
ರೈತರಿಗೆ ವ್ಯಾಪಾರ ಮಾಡಲಾದ ಜೋಡಿ ಹೋರಿ ಕರುಗಳು
ದೇಸಿ ಗೋವಿನ ಸಗಣಿ ಹಾಗೂ ಗಂಜಲಿನಲ್ಲಿ ಅಪಾರವಾದ ಶಕ್ತಿಯಿದೆ. ಅವುಗಳನ್ನು ನಿಲ್ಲಿಸಿದರೆ ಭೂಮಿಯು ಹದಗೊಂಡು ಶಕ್ತಿ ಹೆಚ್ಚುತ್ತದೆ ಅದಕ್ಕಾಗಿ ಪ್ರತಿವರ್ಷ ಗೋಪಾಲಕರನ್ನು ಆಹ್ವಾನಿಸುತ್ತೇನೆ
ರಾಮಣ್ಣ ಸಕ್ರೋಜಿ ನಿವೃತ್ತ ಸೇನಾಧಿಕಾರಿ
ಪೂರ್ವಜರ ಕಾಲದಿಂದಲೂ ಗೋವುಗಳು ನಮ್ಮ ಕುಟುಂಬದ ಭಾಗವಾಗಿವೆ. ಅವುಗಳನ್ನು ಪೂಜಿಸುತ್ತಾ ಸಂಚಾರ ಮಾಡುತ್ತಾ ರೈತರ ಹೊಲಗಳಲ್ಲಿಯೇ ಜೀವನ ಸಾಗಿಸುತ್ತೇವೆ
ಭರಮಣ್ಣ ಗುರಿಕಾರ ಗೋಪಾಲಕ

ಎಕರೆಗೆ ₹20 ಸಾವಿರದಂತೆ ಲಾವಣಿ

ಕೃಷಿಗೆ ಯೋಗ್ಯವಲ್ಲದ ಹಾಗೂ ರೈತರು ತಿರಸ್ಕಾರ ಮಾಡಿದ್ದ ಭೂಮಿಯನ್ನು ಖರೀದಿ ಮಾಡಿದ್ದೆ. ಅದರಲ್ಲಿ ನಡೆದಾಡಲು ಆಗುತ್ತಿರಲಿಲ್ಲ. ಪ್ರತಿ ವರ್ಷ ದೇಸಿ ಗೋವುಗಳನ್ನು ನಿಲ್ಲಿಸುತ್ತಿರುವ ಕಾರಣ ಆಕಳ ಗಂಜಲು ಸಗಣಿಯಿಂದ ಭೂಮಿ ಫಲವತ್ತತೆಗೊಂಡು ಉತ್ತಮ ಇಳುವರಿ ನೀಡುತ್ತಿದೆ. ಆದಕಾರಣ ನಮ್ಮ ಭೂಮಿಯಲ್ಲಿ ಕೃಷಿ ಮಾಡಲು ಅಕ್ಕಪಕ್ಕದ ಗ್ರಾಮಗಳ ರೈತರು ಬರುತ್ತಿದ್ದಾರೆ. ಈ ಬಾರಿ ಅನಾರೋಗ್ಯದ ಕಾರಣ ರಾಸಾಯನಿಕ ಗೊಬ್ಬರ ಬಳಕೆ ಮಾಡದಂತೆ ಕರಾರು ಮಾಡಿ ಮಾರನಬಸರಿ ಗ್ರಾಮದ ರೈತರಿಗೆ ಲಾವಣಿಗೆ ಕೊಟ್ಟಿರುವೆ. 37 ಎಕರೆ ಹೊಲದಲ್ಲಿ ಹಂಚಿನಾಳ ದಾರಿಯ ಹೊಲವನ್ನು ಪ್ರತಿ ಎಕರೆಗೆ ₹20 ಸಾವಿರ ತೊಂಡಿಹಾಳ ದಾರಿಯ ಹೊಲ ಎಕರೆಗೆ ₹15 ಸಾವಿರದಂತೆ ಒಟ್ಟು 29 ಎಕರೆ ಭೂಮಿಯನ್ನು ₹4.75 ಲಕ್ಷಕ್ಕೆ ಲಾವಣಿ ಕೊಟ್ಟಿರುವೆ ಎಂದು ನಿವೃತ್ತ ಸೇನಾಧಿಕಾರಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.