ನರೇಗಲ್: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಯೂರಿಯಾ ಗೊಬ್ಬರ ಅಭಾವ ಸೃಷ್ಟಿಯಾಗಿ ರೈತರು ಯೂರಿಯಾ ಗೊಬ್ಬರಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೋಬಳಿ ಕೇಂದ್ರದಲ್ಲಿ ಹೆಚ್ಚಾಗಿ ಗೊಬ್ಬರ ಸಿಗಬಹುದು ಎಂದು ಸುತ್ತಲಿನ ಗ್ರಾಮಗಳ ರೈತರು ಪಟ್ಟಣದ ಗೊಬ್ಬರ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.
ಪಟ್ಟಣದ ಮೂರು ಖಾಸಗಿ ರಸಗೊಬ್ಬರ ಮಾರಾಟ ಮಳಿಗೆ, ಶ್ರಮಜೀವಿ ರೈತ ಉತ್ಪಾದನಾ ಕೇಂದ್ರ ಹಾಗೂ ಟಿಎಪಿಸಿಎಂಎಸ್ ಕೇಂದ್ರಗಳಲ್ಲಿ ಯೂರಿಯಾ ಮಾರಾಟ ಮಾಡಲಾಗುತ್ತಿದೆ. ಆದರೆ, ಯೂರಿಯಾ ಅಭಾವದ ಕಾರಣದಿಂದ ಪಟ್ಟಣದ ಎಫ್‌ಪಿಒ ಮತ್ತು ಟಿಎಪಿಸಿಎಂಎಸ್‌ನಲ್ಲಿ ಮಾತ್ರ ಯೂರಿಯಾ ಲಭ್ಯವಿದ್ದು, ಅದು ಕೂಡ ಕ್ಷಣ ಮಾತ್ರದಲ್ಲಿ ಖಾಲಿಯಾಗುತ್ತಿದೆ. ಯೂರಿಯಾ ಬೇಡಿಕೆಗೆ ತಕ್ಕಹಾಗಿ ಪೊರೈಕೆಯಾಗದೇ ಇರುವುದರಿಂದ ಯೂರಿಯಾ ಗೊಬ್ಬರಕ್ಕಾಗಿ ಪರದಾಟ ಶುರುವಾಗಿದೆ.
ಪ್ರತಿಯೊಬ್ಬ ರೈತರಿಗೆ ಎರಡು ಚೀಲ ಮಾತ್ರ ಯೂರಿಯಾ ವಿತರಿಸಲಾಗುತ್ತಿದ್ದು, ಇದು ಎದಕ್ಕೂ ಸಾಲದಾಗುತ್ತಿದೆ. ಹತ್ತಾರೂ ಎಕರೆ ಗೋವಿನಜೋಳ, ಶೇಂಗಾ ಸೇರಿದಂತೆ ಇತರೆ ಬೆಳೆ ಬೆಳೆಯಲಾಗಿದ್ದು, ಅತಿಯಾದ ಮಳೆಯಿಂದ ಬೆಳೆಗಳು ಹಾಳಾಗುತ್ತಿವೆ. ಅವುಗಳನ್ನು ರಕ್ಷಿಸಿಕೊಳ್ಳಲು ಯೂರಿಯಾ ಅತ್ಯಗತ್ಯವಾಗಿದ್ದು, ಯೂರಿಯಾ ಗೊಬ್ಬರ ಸಿಗದ ಕಾರಣ ರೈತರು ಕಂಗಾಲಾಗಿದ್ದಾರೆ.
ಪಟ್ಟಣದ ಟಿಎಪಿಸಿಎಂಎಸ್ ಕೇಂದ್ರದಲ್ಲಿ ಸೋಮವಾರ 250 ಚೀಲ ಹಾಗೂ ಮಂಗಳವಾರ 550 ಚೀಲ ಯೂರಿಯಾ ಮಾರಾಟವಾಗಿದ್ದು, ಯೂರಿಯಾಗಾಗಿ ಸರತಿ ನಿಂತು ಗೊಬ್ಬರ ಸಿಗದ ರೈತರು ಬೇಸರದಿಂದ ಮನೆಕಡೆಗೆ ಹೋದ ದೃಶ್ಯ ಕಂಡು ಬಂತು.
ಸಾಕಷ್ಟು ತೊಂದರೆಗಳ ಮಧ್ಯೆ ಮುಂಗಾರಿನಲ್ಲಿ ಬೆಳೆಗಳನ್ನು ಬೆಳೆಯಲಾಗಿದೆ. ಪ್ರಾರಂಭದಲ್ಲಿ ಮಳೆ ಕೊರತೆಯಾದರೆ, ನಂತರದಲ್ಲಿ ಅತಿಯಾದ ಮಳೆಯಾದ ಪರಿಣಾಮ ಬೆಳೆಗಳಿಗೆ ತೇವಾಂಶ ಹೆಚ್ಚಳದ ಆತಂಕ ಎದುರಾಗಿದೆ. ಆದ್ದರಿಂದ, ಅವುಗಳಿಗೆ ಯೂರಿಯಾ ಗೊಬ್ಬರದ ಅಗತ್ಯಯವಿದೆ. ಆದರೆ, ಎಲ್ಲಿಯೂ ಯೂರಿಯಾ ಗೊಬ್ಬರ ಲಭ್ಯವಾಗುತ್ತಿಲ್ಲ. ಲಭ್ಯವಿರುವ ಕಡೆಗಳಲ್ಲಿ ಹಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಆದ್ದರಿಂದ, ಎಲ್ಲ ಕಡೆಗಳಲ್ಲಿ ಯೂರಿಯಾ ಗೊಬ್ಬರ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ರೈತ ಅಶೋಕ ಬೇವಿನಕಟ್ಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.