ನರೇಗಲ್: ಪಟ್ಟಣ ಹಾಗೂ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಜನರು ಸಂಭ್ರಮದಿಂದ ಸಾರ್ವಜನಿಕ ಗಣಪತಿಗಳ ಪ್ರತಿಷ್ಠಾಪನೆಗೆ ಬುಧವಾರ ಮುಂದಾದರು. ಸರ್ಕಾರ ಪಿಒಪಿ ಗಣಪತಿ ಮೂರ್ತಿಗಳಿಗೆ ನಿರ್ಬಂಧ ಹಾಕಿದ ಪರಿಣಾಮ ಬಹುತೇಕರು ಮಣ್ಣಿನ ಗಣಪತಿ ಮೂರ್ತಿಗಳನ್ನು ತೆಗೆದುಕೊಂಡು ಹೋಗಿ ಪ್ರತಿಷ್ಠಾಪಿಸಿದರು.
ತೆರದ ವಾಹನದಲ್ಲಿ ಮೂರ್ತಿಗಳನ್ನು ತೆಗೆದುಕೊಂಡು ಹೋಗುವಾಗ ಪಟಾಕಿ ಸಿಡಿಸಿ ʼಬಪ್ಪರೇ, ಬಪ್ಪ್ ಗಣಪತಿ ಬಪ್ಪʼ ಹಾಗೂ ʼಗಣಪತಿ ಮಹಾರಾಜ್ ಕೀ ಜೈʼ ಎನ್ನುವ ಜೈಘೋಷಗಳನ್ನು ಹಾಕುತ್ತಿರುವ ದೃಶ್ಯಗಳು ಕಂಡುಬಂದವು. ವೈಯಕ್ತಿಕ ಗಣಪತಿಗಳನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಜನರು ಸಿಹಿ ಪದಾರ್ಥಗಳನ್ನು ಸವಿದು ಸರಳ ವಿಧಾನಗಳನ್ನು ಅನುಸರಿಸಿದರು. ಹೊಸ ಬಟ್ಟೆಯಲ್ಲಿ ಘಂಟೆ ಭಾರಿಸುತ್ತಾ ನಾಮಸ್ಮರಣೆ ಮಾಡುತ್ತಾ ಗಣಪತಿ ಮೂರ್ತಿಯನ್ನು ತೆಗೆದುಕೊಂಡು ಹೋದರು. ಕೆಲವು ಶಾಲೆಗಳಲ್ಲಿ, ಮನೆಯಲ್ಲಿ ಬೆಳಿಗ್ಗೆ ಪ್ರತಿಷ್ಠಾಪಿಸಿ ಸಂಜೆಯೇ ವಿಸರ್ಜನೆ ಮಾಡಿದರು.
ನರೇಗಲ್ ಹೋಬಳಿಯ ಹೊಸಳ್ಳಿ, ಜಕ್ಕಲಿ, ಮಾರನಬಸರಿ, ಬೂದಿಹಾಳ, ತೋಟಗಂಟಿ, ಅಬ್ಬಿಗೇರಿ, ಕೋಚಲಾಪುರ, ಡ.ಸ.ಹಡಗಲಿ, ಯರೇಬೇಲೇರಿ, ಕುರುಡಗಿ, ಕೋಡಿಕೊಪ್ಪ, ನರೇಗಲ್, ದ್ಯಾಂಪುರ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸಮೀಪದ ಪಟ್ಟಣಕ್ಕೆ ಹಾಗೂ ಪ್ರಸಿದ್ದಿ ಪಡೆದ ಕಲಾವಿದರ ಕಡೆಗೆ ಹೋಗಿ ಗಣಪತಿಗಳನ್ನು ಖರೀದಿಸಿ ಪ್ರತಿಷ್ಠಾಪಿಸಿದರು.
ಪಟ್ಟಣದ 3ನೇ ವಾರ್ಡ್‌ನ ಜಕ್ಕಲಿ ರೋಡ್ ಆಶ್ರಯ ಕಾಲೋನಿಯಲ್ಲಿ ಹಿಂದೂ, ಮುಸ್ಲಿಂ ಧರ್ಮದ ಜನರು ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಭಾವೈಕ್ಯ ಸಾರಿದರು. ಮುಸ್ಲಿಂ ಯುವಕರೇ ಮುಂದೇ ನಿಂತು ಗಣಪತಿ ಮಂಟಪವನ್ನು ಸಿದ್ದಪಡಿಸಿ ಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.