ADVERTISEMENT

ಹಂದಿಗಳ ರಕ್ತ ಮಾದರಿ ಸಂಗ್ರಹ; ಬಾಗಲಕೋಟೆಗೆ ರವಾನೆ

ಸಾರ್ವಜನಿಕರಲ್ಲಿ ರೋಗದ ಭೀತಿ ನಿವಾರಣೆಗೆ ಜಂಟಿಯಾಗಿ ಮುಂದಾದ ಇಲಾಖೆಗಳು

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 8:38 IST
Last Updated 23 ಜನವರಿ 2026, 8:38 IST
ನರೇಗಲ್‌ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಆರೋಗ್ಯ ಇಲಾಖೆ ವತಿಯಿಂದ ಹಂದಿಗಳ ಸಾವು ಹಾಗೂ ಅವುಗಳ ಸ್ಥಳಾಂತರದ ಕುರಿತು ಮನವಿ ಸಲ್ಲಿಸಲಾಯಿತು
ನರೇಗಲ್‌ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಆರೋಗ್ಯ ಇಲಾಖೆ ವತಿಯಿಂದ ಹಂದಿಗಳ ಸಾವು ಹಾಗೂ ಅವುಗಳ ಸ್ಥಳಾಂತರದ ಕುರಿತು ಮನವಿ ಸಲ್ಲಿಸಲಾಯಿತು   

ನರೇಗಲ್:‌ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಹಂದಿಗಳ ಸರಣಿ ಸಾವು ಕಂಡುಬರುತ್ತಿದ್ದು, ಓಡಾಡುತ್ತಿರುವ ಹಂದಿಗಳು ಏಕಾಏಕಿ ನೆಲಕ್ಕೆ ಬಿದ್ದು ಒದ್ದಾಡಿ ಕೆಲವೇ ಕ್ಷಣದಲ್ಲಿ ಉಸಿರು ನಿಲ್ಲಿಸುತ್ತಿವೆ. ಆದ್ದರಿಂದ ಆರೋಗ್ಯ ಇಲಾಖೆ, ಪಶು ವೈದ್ಯಾಧಿಕಾರಿಗಳ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಆಶ್ರಯದಲ್ಲಿ ಹಂದಿ ಮಾಲಿಕರಿಗೆ ತಿಳುವಳಿಕೆ ನೀಡಿ ರಕ್ತದ ಮಾದರಿಯನ್ನು ಗುರುವಾರ ಸಂಗ್ರಹಿಸಿದ್ದಾರೆ.

ಪ್ರತಿದಿನ ಹಂದಿಗಳು ಮರಣ ಹೊಂದುತ್ತಿರುವ ಹಾಗೂ ಜನರಲ್ಲಿ ಸೃಷ್ಟಿಯಾಗಿದ್ದ ಸಾಂಕ್ರಾಮಿಕ ರೋಗದ ಕುರಿತು ʼಆತಂಕ ಸೃಷ್ಟಿಸಿದ ಹಂದಿಗಳ ಸರಣಿ ಸಾವುʼ ಎಂಬ ಶೀರ್ಷಿಕೆಯಡಿ ಪ್ರಜಾವಾಣಿ ಪತ್ರಿಕೆಯಲ್ಲಿ ಜನವರಿ 17 ರಂದು ವಿಸ್ತೃತ ವರದಿ ಪ್ರಕಟವಾಗಿತ್ತು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಎಚ್ಚರಿಸಲಾಗಿತ್ತು.

ವರದಿ ಪರಿಣಾಮ ಜಂಟಿ ಕಾರ್ಯಚರಣೆ ಆರಂಭಿಸಿದ ಅಧಿಕಾರಿಗಳು ಹಂದಿ ಮಾಲಿಕರಾದ ಯಮನಪ್ಪ ಕೊರವರ ಹಾಗೂ ಇತರರನ್ನು ಕರೆದು ಪಟ್ಟಣದ ತುಂಬಾ ಎಲ್ಲೆಂದರಲ್ಲಿ ಹಂದಿಗಳನ್ನು ಬಿಡದೆ ಅವುಗಳನ್ನು ನರೇಗಲ್‌ನಿಂದ ಸ್ಥಳಾಂತರಿಸುವಂತೆ ತಿಳಿಸಿದ್ದಾರೆ. ಹಂದಿಗಳಿಂದ ಹರಡುವ ರೋಗ ಮತ್ತು ಪರಿಣಾಮಗಳ ಕುರಿತು ತಿಳಿವಳಿಕೆ ನೀಡಿದ್ದಾರೆ. ನಂತರ ಹಂದಿಗಳನ್ನು ಹಿಡಿದು ಪಶುಆಸ್ಪತ್ರೆಗೆ ತಂದ ಮಾಲಿಕರು ತಪಾಷಣೆಗಾಗಿ ರಕ್ತದ ಮಾದರಿ ಸಂಗ್ರಹಕ್ಕೆ ಸಹಕಾರ ನೀಡಿದ್ದಾರೆ.

ADVERTISEMENT

ಈ ವೇಳೆ ಮಾತನಾಡಿದ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ ಜಾಲಿಹಾಳ, ಹಂದಿಗಳ ಸರಣಿ ಸಾವಿನಿಂದ ಜನರಿಗೆ ತೊಂದರೆ ಆಗಬಾರದು ಎನ್ನುವ ಹಿತದೃಷ್ಟಿಯಿಂದ 3ನೇ ವಾರ್ಡ್‌ ಆಶ್ರಯ ಕಾಲೋನಿ, ಬುಲ್ಡೋಜರ್‌ ನಗರ ಹಾಗೂ ಇತರೇ ಕಡೆ ಜ್ವರದ ಸಮೀಕ್ಷೆ ಮಾಡಿದ್ದೇವೆ. ಆದರೆ ಯಾರಲ್ಲೂ ಜ್ವರದ ಲಕ್ಷಣಗಳು ಕಂಡು ಬಂದಿಲ್ಲ. ಹಂದಿ ಸಾಕಾಣಿಕೆ ಕೇಂದ್ರವನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪಶು ವೈದ್ಯಾಧಿಕಾರಿ ಡಾ. ಲಿಂಗಯ್ಯ ಗೌರಿ ಮಾತನಾಡಿ, ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು ಬಾಗಲಕೋಟೆಗೆ ತಪಾಷಣೆಗೆ ಕಳುಹಿಸಲಾಗುತ್ತದೆ. ಹಂದಿಗಳಿಂದ ಜನರಿಗೆ ಬರುವ ಎಚ್1ಎನ್1 ಇನ್‌ಫ್ಲೂಜಾ ವೈರಸ್‌, ಹಂದಿ ಜ್ವರ ಪಾಸಿಟಿವ್‌ ಇದೆಯಾ ಅಥವಾ ಇನ್ನಾವುದಾದರು ವೈರಾಣುವಿನ ಪರಿಣಾಮವಿದೆಯಾ ಎನ್ನುವ ಬಗ್ಗೆ ವರದಿ ಪಡೆಯಲಾಗುತ್ತದೆ. ಫಾಸೀಟಿವ್‌ ಬಂದರೆ ಇಲಾಖೆಯ ಗಮನಕ್ಕೆ ತರಲಾಗುತ್ತದೆ. ನೆಗಟಿವ್‌ ಬಂದರೆ ಸಾವಿನ ಕಾರಣ ತಿಳಿಯಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ ಮಾತನಾಡಿ, 60ಕ್ಕೂ ಹೆಚ್ಚಿನ ಹಂದಿಗಳನ್ನು ಸಾಗಿಸಲಾಗಿದೆ. ಮುಂದೆಯೂ ಅಗತ್ಯ ಕ್ರಮಗಳನ್ನು ಕೈಗೊಳ್ಳಗುತ್ತದೆ ಎಂದು ಮಾಹಿತಿ ನೀಡಿದರು.

ಈ ವೇಳೆ ರೋಣ ತಾಲ್ಲೂಕು ಎಪಿಡೆಮೊಲೊಜಿಸ್ಟ್‌ ವಿಭಾಗದ ಆರೋಗ್ಯ ಅಧಿಕಾರಿ ಡಾ. ನಾಗೇಶ ಸತ್ತಿಗೇರಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕಲ್ಲಪ್ಪ ಅಂದಪ್ಪ ಬುದಿಹಾಳ, ರೆಹಮತ್ ಬಾನು ಶರಬತ್ವಾಲ ಇದ್ದರು.

ನರೇಗಲ್‌ ಪಟ್ಟಣ ಪಂಚಾಯಿತಿ ಆವರಣದಲ್ಲಿ ಹಂದಿ ಮಾಲಿಕರಿಗೆ ತಿಳುವಳಿಕೆ ನೀಡುತ್ತಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು
ನರೇಗಲ್‌ ಪಟ್ಟಣದಲ್ಲಿ ಪಶು ವೈದ್ಯಾಧಿಕಾರಿ ಡಾ. ಲಿಂಗಯ್ಯ ಗೌರಿ ಅವರು ಹಂದಿಯ ರಕ್ತದ ಮಾದರಿ ಸಂಗ್ರಹಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.