ADVERTISEMENT

ಗದಗ: ಭೂಮಿಕೊಟ್ಟ ರೈತರಲ್ಲಿ ಭಯದ ವಾತಾವರಣ ಸೃಷ್ಟಿ

‌ರೈತರ ವಿರುದ್ಧವೇ ನ್ಯಾಯಾಲಯ ಮೊರೆಹೋದ ವಿಂಡ್‌ ಕಂಪನಿಗಳು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 7:08 IST
Last Updated 24 ಮಾರ್ಚ್ 2025, 7:08 IST
ನರೇಗಲ್‌ ಹೋಬಳಿಯ ಗ್ರಾಮೀಣ ಭಾಗದ ರೈತರಿಂದ ಖಾಲಿ ಬಾಂಡ್‌ಗಳ ಮೇಲೆ ಹೆಬ್ಬಟ್ಟು ಸಹಿ ಮಾಡಿಸಿರುವುದು
ನರೇಗಲ್‌ ಹೋಬಳಿಯ ಗ್ರಾಮೀಣ ಭಾಗದ ರೈತರಿಂದ ಖಾಲಿ ಬಾಂಡ್‌ಗಳ ಮೇಲೆ ಹೆಬ್ಬಟ್ಟು ಸಹಿ ಮಾಡಿಸಿರುವುದು   

ನರೇಗಲ್: ಹೋಬಳಿಯ ವಿವಿಧೆಡೆಯ ಕೃಷಿಭೂಮಿಯಲ್ಲಿ ಪವನ ವಿದ್ಯುತ್‌ ಕಂಬಗಳನ್ನು ಅಳವಡಿಸುವ ಸಲುವಾಗಿ ಕಳೆದೆರಡು ವರ್ಷಗಳಿಂದ ಲಗ್ಗೆಯಿಟ್ಟಿರುವ ಬಹುರಾಷ್ಟ್ರೀಯ ಖಾಸಗಿ ಕಂಪನಿಯವರು ವಿಂಡ್‌ ಕಂಬ ಅಳವಡಿಸಲು ಭೂಮಿ ನೀಡಿರುವ ರೈತರ ವಿರುದ್ದವೇ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ, ಅನಿವಾರ್ಯ ಕಾರಣಗಳಿಂದ ತಮ್ಮ ಉಳುಮೆ ಭೂಮಿಯನ್ನು ನೀಡಿದ್ದ ರೈತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಒಂದೆಡೆ ಕೃಷಿ ಭೂಮಿಯನ್ನು ಕಳೆದುಕೊಂಡರೆ; ಇನ್ನೊಂದೆಡೆ ವಿಂಡ್‌ ಕಂಪನಿಯವರ ಉಪಟಳ ಹಾಗೂ ನ್ಯಾಯಾಲಯದ ನೋಟಿಸ್‌ ಪ್ರತಿ ರೈತರನ್ನು ಚಿಂತೆಗೆ ದೂಡಿದೆ.

ನರೇಗಲ್‌ ಸಮೀಪದ ಮಾರನಬಸರಿ ಗ್ರಾಮದ ಮ‌ಲ್ಲಪ್ಪ ವೀರಪ್ಪ ನಿಂಬಣ್ಣವರ ಎಂಬ ರೈತ ಸರ್ವೆ ನಂ. 68/4 ರಲ್ಲಿರುವ 2.18ಎಕರೆ ಭೂಮಿಯಲ್ಲಿ 2.3 ಎಕರೆ ಭೂಮಿಯನ್ನು ಮಹಾರಾಷ್ಟ್ರ ಮೂಲದ ಟಾಟಾ ಪವರ್‌ ರಿನಿವೆಬಲ್‌ ಎನರ್ಜಿ ಲಿಮಿಟೆಡ್‌ ಕಂಪನಿಗೆ ವಿಂಡ್‌ ಕಂಬ ಅಳವಡಿಸಲು ಲಾವಣಿ ಆಧಾರದಲ್ಲಿ ನೀಡಿದ್ದಾರೆ.

ADVERTISEMENT

ಕಂಪನಿ ಪರವಾಗಿ ಪ್ರಾಜೆಕ್ಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುವ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ನಿವಾಸಿ ನಾಮದೇವ ಭೀಮಪ್ಪ ಬಿಕ್ಕೋಜಿ ಎನ್ನುವರು ಕೆವಿಯಟರ್‌ ಆಗಿ ಈ ರೈತರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಇದರಿಂದಾಗಿ ರೈತರು ಪರಿಹಾರಕ್ಕಾಗಿ, ಕಾಮಗಾರಿಗೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯಕ್ಕೆ ಹೋದರು ಸಹ ಆದೇಶಗಳನ್ನು ಹೊರಡಿಸುವ ಮೊದಲು ಕಂಪನಿಯ ವಾದವನ್ನು ಮಂಡಿಸಲು, ಕೆಲಸವನ್ನು ನಿಲ್ಲಿಸದಂತೆ ಅವಕಾಶ ಮಾಡಿಕೊಡುವಂತೆ ಕಂಪನಿ ನ್ಯಾಯಾಲಯದ ಮೂಲಕ ಕೋರಿದೆ.

ನರೇಗಲ್‌ ಹೋಬಳಿಯ ಭೂಮಿಯು ಎತ್ತರದ ಭೂಪ್ರದೇಶವನ್ನು ಹೊಂದಿರುವ ಹಾಗೂ ಇಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ‌ ಗಾಳಿ ಬೀಸುತ್ತಿರುವ ಕಾರಣ ಅನೇಕ ಪವನ ವಿದ್ಯುತ್‌ ಹಾಗೂ ಸೋಲಾರ್‌ ಕಂಪನಿಗಳು ನರೇಗಲ್ ಭೂ‌ ಪ್ರದೇಶವನ್ನು ತಮ್ಮ ಜಿರೋ ಪಾಯಿಂಟ್‌ ಮಾಡಿಕೊಂಡಿವೆ. ಅತಿ ಭಾರದ, ಉದ್ದದ ಹಾಗೂ ಇತರೆ ಸಾಮಗ್ರಿಗಳನ್ನು ತಂದು ಸಂಗ್ರಹಿಸುತ್ತವೆ. ಇಲ್ಲಿಂದಲೇ ಅಳವಡಿಸುವ ಸ್ಥಳಕ್ಕೆ ಮತ್ತೇ ಸಾಗಾಟ ನಡೆಯುತ್ತಿದೆ.

‘ಆದರೆ, ಪ್ರತಿಯೊಂದು ಕಾಮಗಾರಿಗೂ ಅವರು ಸ್ಥಳೀಯ ರೈತರ ಜಮೀನುಗಳನ್ನೇ ಅವಲಂಬಿಸಿದ್ದಾರೆ. ವಿಂಡ್‌ ಕಂಬಗಳನ್ನು ಅಳವಡಿಸಲು, ಘಟಕಗಳನ್ನು ಸ್ಥಾಪಿಸಲು, ಕಾಂಕ್ರೀಟ್‌ ಮಿಕ್ಸರ್‌ಗಳನ್ನು ಸ್ಥಾಪಿಸಲು, ಉತ್ಪಾದಿತ ವಿದ್ಯುತ್‌ ಸಂಗ್ರಹಿಸಲು ಸೇರಿದಂತೆ ಎಲ್ಲದಕ್ಕೂ ಜಮೀನು ಅವಶ್ಯಕವಾಗಿದೆ. ಯಾವುದೇ ರೈತರಿಗೆ ಅನ್ಯಾಯವಾಗದಂತೆ ಅವರ ವಿಶ್ವಾಸ ಪಡೆದು, ಭೂಮಿಯ ಬೆಲೆಗೆ ತಕ್ಕಂತೆ 1:3 ರಷ್ಟು ಪರಿಹಾರ ಒದಗಿಸಿ ಕಾಮಗಾರಿ ಮಾಡಬೇಕಾಗುತ್ತದೆ. ಆದರೆ ಕಂಪನಿ ಪರವಾಗಿ ಭಾಗವಹಿಸುವ ಮಧ್ಯವರ್ತಿಗಳು ರೈತರನ್ನು ಮೋಡಿ ಮಾಡಿ ಕಡಿಮೆ ಹಣದಲ್ಲಿ ಭೂಮಿಯನ್ನು ಪಡೆಯುತ್ತಿದ್ದಾರೆ. ಅನ್ಯಾಯವನ್ನು ಕೇಳಲು ಹೋದರೆ ಬೆದರಿಕೆ ಹಾಕುತ್ತಿದ್ದಾರೆ. ಕೆಲವೊಮ್ಮೆ ದೈಹಿಕ ಹಲ್ಲೆಗಳನ್ನು ಸಹ ನಡೆಸಿದ್ದಾರೆ’ ಎನ್ನುವುದು ಗ್ರಾಮೀಣ ಭಾಗದ ರೈತರ ಆರೋಪವಾಗಿದೆ.

‘ಅನ್ಯಾಯವನ್ನು ಖಂಡಿಸಿ ಅಧಿಕಾರಿಗಳ ಬಳಿ ಹೋದರು ಸಹ ರಾಜಿ ಪಂಚಾಯಿತಿ ಮಾಡುತ್ತಿದ್ದಾರೆ. ನ್ಯಾಯ ಸಿಗುತ್ತಿಲ್ಲ. ಇದಕ್ಕಾಗಿ ನ್ಯಾಯಾಲಯದ ಮೊರೆ ಹೋಗಬೇಕು ಎಂದುಕೊಂಡಾಗ ರೈತರಿಗಿಂತ ಮೊದಲೇ ಕಂಪನಿಯವರು ಕೆವಿಯಟ್‌ ಪ್ರತಿಗಳನ್ನು ಅಂಚೆ ಮೂಲಕ ಕೃಷಿಕರ ಮನೆಗಳಿಗೆ ಕಳುಹಿಸುತ್ತಿದ್ದಾರೆ. ಆದರೆ ಮಧ್ಯವರ್ತಿಗಳು, ಕಂಪನಿಯವರು ಮಾಡುತ್ತಿರುವ ಅನ್ಯಾಯವನ್ನು ಯಾರು ಪ್ರಶ್ನಿಸುತ್ತಿಲ್ಲ’ ಎಂದು ನರೇಗಲ್‌, ಜಕ್ಕಲಿ, ಮಾರನಬಸರಿ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪುರ, ಬೂದಿಹಾಳ, ತೋಟಗಂಟಿ, ಕೋಚಲಾಪುರ, ದ್ಯಾಂಪುರ, ಅಬ್ಬಿಗೇರಿ ಭಾಗದ ರೈತರ ಅಳಲಾಗಿದೆ.

ಕಂಪನಿಗೆ ಹೊಲ ನೀಡಿದ ನಂತರವೂ ಬೆಳೆ ವಿಮೆ ಸಿಗುತ್ತದೆ, ಬ್ಯಾಂಕ್‌ಗಳಿಂದ ಸಾಲ ಸಿಗುತ್ತದೆ, ಒಬ್ಬರಿಗೆ ಕಂಪನಿಯಲ್ಲಿ ಕೆಲಸಕ್ಕೆ ಅವಕಾಶ ಕೊಡುತ್ತೇವೆ, ವಿಂಡ್‌ ಕಂಬ ಅಳವಡಿಸಿದ ಜಾಗಬಿಟ್ಟು ಇತರೆ ಕಡೇ ಕೃಷಿ ಮಾಡಬಹುದು ಎನ್ನುವ ಮಾತುಗಳನ್ನು ಹೇಳಿ ರೈತರನ್ನು ಪುಸಲಾಯಿಸಿ ಭೂಮಿಯನ್ನು ಪಡೆಯುತ್ತಿದ್ದಾರೆ.

ಇದೇ ರೀತಿ ಮಲ್ಲಪ್ಪ‌ ನಿಂಬಣ್ಣವರ ಎನ್ನುವ ರೈತರಿಂದ 2.15 ಎಕೆರೆ ಭೂಮಿಗೆ ಕೇವಲ ₹13.2 ಲಕ್ಷ ಹಣ ನೀಡಿ 30 ವರ್ಷಕ್ಕೆ ಲೀಸ್ ಪಡೆದು ವಿಂಡ್‌ ಕಂಬವನ್ನು ಅಳವಡಿಸುವ ಕಾಮಗಾರಿ ಆರಂಭಿಸಿದ್ದಾರೆ. ಕಂಬ ಅಳವಡಿಸಿದ ಜಮೀನಿನ ರೈತನಿಗೆ ಹಾಗೂ ಅದರ ಪಕ್ಕದ ಜಮೀನುಗಳ ರೈತರಿಗೂ ಒಂದೇ ತರಹದ ಪರಿಹಾರ ನೀಡಿದ್ದಾರೆ. ಭೂಮಿ ಕಳೆದುಕೊಂಡ ರೈತನಿಗೆ ಅನ್ಯಾಯವಾಗಿದೆ ಎನ್ನುವುದನ್ನು ಒಪ್ಪಿಕೊಂಡ ಕಂಪನಿಯ ಪ್ರತಿನಿಧಿಗಳು ಹೆಚ್ಚಿನ ಹಣವನ್ನು ಕೊಡಲಾಗುವುದು ಎಂದು ಭರವಸೆ ನೀಡಿ ಅನೇಕ ದಿನಗಳ ವರೆಗೆ ಕಾಯಿಸಿದ್ದಾರೆ. ನಂತರ ಕಂಪನಿ ಮಾಲೀಕರು ನಿಮಗೆ ಹಣ ಕೊಡಲು ಒಪ್ಪುತ್ತಿಲ್ಲ ಎಂದು ಹೇಳಿ ಕೆಲಸ ಮಾಡುತ್ತಿದ್ದಾರೆ.

‘ಅಷ್ಟೇ ಅಲ್ಲದೆ ಒಪ್ಪಂದದಂತೆ ಕೆಲಸ ಮಾಡದೇ ಇವರ ಹೊಲದ ಫಲವತ್ತಾದ ಮಣ್ಣನ್ನು ಕಂಪನಿಯ ಮಧ್ಯವರ್ತಿಗಳು ಬೇರೆಕಡೆಗೆ ಸಾಗಿಸಿ ಮಾರಿಕೊಂಡಿದ್ದಾರೆ. ಉಪಯೋಗವಿಲ್ಲದ ಮಣ್ಣನ್ನು ತಂದು ಹೊಲದಲ್ಲಿ ಹಾಕಿದ್ದಾರೆ. ಇದರಿಂದ ಕೃಷಿ ಮಾಡಿದರು ಇಳುವರಿ ಬರುವುದಿಲ್ಲ. ಇದನ್ನು ವಿರೋಧಿಸಿದಾಗ ಮಣ್ಣು ಸಾಗಿಸುವುದನ್ನು ನಿಲ್ಲಿಸಿದ್ದಾರೆ. ಫಲವತ್ತಾದ ಮಣ್ಣುಹಾಕಿಸಿ ಅದರ ಪರಿಹಾರ ಕೊಡುವುದಾಗಿ ಹೇಳಿದ್ದಾರೆ. ಆದರೆ, ಕೇಳಲು ಹೋದರೆ ಮಧ್ಯವರ್ತಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ರೈತ ಮಲ್ಲಪ್ಪ ಹಾಗೂ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಕೆವಿಯಟ್‌ ಪ್ರತಿಯಲ್ಲಿ ಏನಿದೆ?

ಕೋರ್ಟ್‌ ಮೊರೆ ಹೋಗಿರುವ ಕಂಪನಿಯು ರಿನಿವ್ಯೂ ಸೂರ್ಯಾ ರೋಶ್ನಿ ಪ್ರೈವೇಟ್‌ ಲಿಮಿಟೆಡ್‌ ಜೊತೆಯಾಗಿ ಎಲ್ಲಾ ಅನುಮತಿಗಳನ್ನು ಪಡೆದು ವ್ಯವಹಾರಿಕ ಲೆಕ್ಕಪತ್ರ ನಿರ್ವಹಣೆಯನ್ನು ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದೆ. ಜಮೀನು ಖರೀದಿ ಗುತ್ತಿಗೆ ಬಾಡಿಗೆ ಲಾವಣಿ ಹಾಗೂ ಇತರೆ ಪ್ರಕ್ರಿಯೆಯನ್ನು ಕಾನೂನು ಬದ್ದ ಮಾಡಿಕೊಳ್ಳಲಾಗಿದೆ ಹಾಗೂ ಬೆಳೆ ಪರಿಹಾರ ನೀಡಿ 220 ಕೆವಿ ಟ್ರಾನ್ಸ್‌ಮಿಷನ್‌ ಟವರ್‌ನ ಕಾಮಗಾರಿ ಆರಂಭಿಸಿದ್ದೇವೆ. ಇದೇ ರೀತಿ ಒಣ ಬೇಸಾಯದ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ರೈತರು ಕೆಲಸವನ್ನು ಮಾಡಲು ಬಿಡುತ್ತಿಲ್ಲ. ಇಲ್ಲಿನ ರೈತರು ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳುತ್ತಿದ್ದಾರೆ. ಆ ರೀತಿ ಮಾಡಿದರೆ ಮಾನ್ಯ ನ್ಯಾಯಾಲಯವು ಏಕಪಕ್ಷೀಯವಾಗಿ ಆದೇಶವನ್ನು ಹೊರಡಿಸದೇ ವಾದ ಮಂಡಿಸಲು ಅವಕಾಶ ಮಾಡಿಕೊಡಬೇಕು ಎಂದು ಕಂಪನಿಯವರು ಕೋರ್ಟ್‌ ಮೊರೆ ಹೋಗಿ ರೈತರ ಮನೆಗೆ ಕಳುಹಿಸಿರುವ ಕೆವಿಯಟ್‌ ಪ್ರತಿಯಲ್ಲಿ ಕಾಣಿಸಿದ್ದಾರೆ.

ಖಾಲಿ ಬಾಂಡ್‌ಗಳ ಮೇಲೆ ಹೆಬ್ಬಟ್ಟು; ಮೋಸದ ಆರೋಪ

ವಿವಿಧ ಕಂಪನಿಗಳಿಗೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿರುವ ರಾಜಕೀಯ ಪ್ರಭಾವಿಗಳು ವಿವಿಧ ಗ್ರಾಮಗಳ ಮುಖಂಡರು ರೈತರಿಂದ ಖಾಲಿ ಬಾಂಡ್‌ಗಳ ಮೇಲೆ ಹೆಬ್ಬಟ್ಟು ಸಹಿ ಪಡೆದು ದಬ್ಬಾಳಿಕೆ ನಡೆಸುತ್ತಿದ್ದಾರೆ ಎನ್ನುವ ಆರೋಪವನ್ನು ಕೃಷಿಕರು ಮಾಡುತ್ತಿದ್ದಾರೆ. ವಿಂಡ್‌ ಕಂಬದಲ್ಲಿ ಉತ್ಪಾದಿತ ವಿದ್ಯುತ್‌ ಸಾಗಿಸಲು ಹಾಗೂ ಇತರೆ ಕಾಮಗಾರಿ ಮಾಡಲು ರೈತರ ಮನೆಗಳಿಗೆ ಹೋಗಿ ಮನಒಲಿಸುತ್ತಾರೆ. ಪ್ರತಿ ಕಂಬಕ್ಕೆ ₹30 ₹40 ₹50 ಸಾವಿರ ಹೀಗೆ ಮನಸ್ಸಿಗೆ ಬಂದಂತೆ ಕೊಡಿಸುತ್ತೇವೆ ಎನ್ನುತ್ತಾರೆ. ರೈತರಿಗೆ ಕಡಿಮೆ ಹಣ ನೀಡಿ ಒಂಡೆರಡು ಗುಂಟೆ ಜಾಗ ತೆಗೆದುಕೊಳ್ಳುತ್ತೇವೆಂದು ಹೇಳಿ ಖಾಲಿ ಬಾಂಡ್‌ಗಳ ಮೇಲೆ ಸಹಿ ಮಾಡಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಅನಕ್ಷರಸ್ಥರ ಮತ್ತು ಸಾಮಾನ್ಯ ರೈತರನ್ನು ಗುರಿಯಾಗಿಸಿಕೊಂಡಿದ್ದಾರೆ. ನಂತರ ಅದೇ ಬಾಂಡ್‌ನಲ್ಲಿ ಹೆಚ್ಚು ಹಣ ಹೆಚ್ಚಿನ ಗುಂಟೆ ಜಾಗ ನೀಡಿರುವುದಾಗಿ ಬರೆದು ರೈತರನ್ನು ಬೆದರಿಸುತ್ತಿದ್ದಾರೆ ಎನ್ನುವುದು ರೈತರ ಆರೋಪವಾಗಿದೆ.

ಯಾರು ಏನಂತಾರೆ?

ಪರಿಹಾರ ನೀಡುವಂತೆ ಆಗ್ರಹ

ವಿಂಡ್‌ ಕಂಪನಿಯಿಂದ ಅನ್ಯಾಯವಾದ ಕಾರಣ ಭೂಮಿ ಕಳೆದುಕೊಂಡ ನಮಗೆ ಅದಕ್ಕೆ ತಕ್ಕಂತೆ ಪರಿಹಾರ ನೀಡುವಂತೆ ಆಗ್ರಹಿಸಿ ಕುಟುಂಬ ಸಮೇತರಾಗಿ ಕಾಮಗಾರಿ ಆರಂಭಿಸಿರುವ ನಮ್ಮ ಜಮೀನಿನಲ್ಲಿಯೇ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗುತ್ತೇವೆ

–ಮಲ್ಲಪ್ಪ ನಿಂಬ್ಬಣ್ಣವರ ಹಾಗೂ ಕುಟುಂಬಸ್ಥರು

ಸಾಂಘಿಕ ಹೋರಾಟ

ಬಡತನ ಹಾಗೂ ಅನಿವಾರ್ಯ ಕಾರಣಗಳಿಂದ ಭೂಮಿ ನೀಡಿದ ರೈತರ ಮೇಲೆ ದಬ್ಬಾಳಿಕೆಗೆ ಮುಂದಾದರೆ ಹಾಗೂ ಅನ್ಯಾಯಕ್ಕೆ ಒಳಪಡಿಸಿದರೆ ಎಲ್ಲಾ ರೈತ ಸಂಘಟನೆಯವರು ಸಾಂಘಿಕ ಹೋರಾಟಕ್ಕೆ ಮುಂದಾಗುತ್ತೇವೆ

-ಶರಣಪ್ಪ ಧರ್ಮಾಯತ ರೈತ ಸಂಘಟನೆ ಹಿರಿಯ ಮುಖಂಡ

ರೈತರ ಹಕ್ಕು ಮೊಟಕುಗೊಳಿಸುವ ಯತ್ನ

ವಿಂಡ್‌ ಕಾಮಗಾರಿಗಾಗಿ ಲಾವಣಿ ಪಡೆಯುವ ಭೂಮಿಯನ್ನು ಕಂಪನಿಯವರು ಭೂಪರಿವರ್ತನೆ ಮಾಡುತ್ತಿದ್ದಾರೆ ಇದರಿಂದ ರೈತರ ಹಕ್ಕು ಮೊಟಕುಗೊಳಿಸಿದಂತಾಗುತ್ತದೆ. ಭವಿಷ್ಯದಲ್ಲಿ ತೊಂದರೆಯಾಗಲಿದೆ

–ಅಶೋಕ ಬೇವಿನಕಟ್ಟಿ ಹಿರಿಯ ಮುಖಂಡ

ಅಧಿಕಾರಿಗಳ ಪ್ರತಿಕ್ರಿಯೆ

ರೈತರಿಗೆ ಜಾಗೃತಿ ಮೂಡಿಸಲಾಗುವುದು

ಪರಿಹಾರವನ್ನು ಒಪ್ಪುವುದಿಲ್ಲವೆಂದು ಕೆಲವು ರೈತರು ಕೋರ್ಟ್‌ ಮೊರೆ ಹೋಗಿ ತಡೆಯಾಜ್ಞೆ ತಂದಿರುವ ನಂತರ ಅರ್ಜಿಗಳು ವಜಾ ಆಗಿರುವ ಘಟನೆಗಳು ನಡೆದಿವೆ. ಇದು ರೈತರ ಹಾಗೂ ಕಂಪನಿಯವರ ನಡುವಿನ ನೇರವಾದ ಒಪ್ಪಂದವಾಗಿದೆ. ಇದರಲ್ಲಿ ನಾವು ಭಾಗವಹಿಸಲು ಬರುವುದಿಲ್ಲ. ಆದರೆ ಖಾಲಿ ಬಾಂಡ್‌ಗಳ ಮೇಲೆ ಯಾರು ಸಹಿ ಮಾಡಬಾರದು ಮತ್ತು ಯಾವುದೇ ಖಾಲಿ ಕಾಗದ ಪತ್ರಗಳ ಮೇಲೆ ಸಹಿ ಮಾಡದಂತೆ ರೈತರಿಗೆ ಜಾಗೃತಿ ಮೂಡಿಸಲಾಗುವುದು.

–ಕಿರಣಕುಮಾರ ಜಿ. ಕುಲಕರ್ಣಿ ಗಜೇಂದ್ರಗಡ ತಹಶೀಲ್ದಾರ್‌

ಠಾಣೆಗೆ ದೂರುಗಳು ಬಂದಿಲ್ಲ

ಖಾಲಿ ಬಾಂಡ್‌ಗಳ ಮೇಲೆ ಸಹಿ ಮಾಡಿಸಿಕೊಂಡಿರುವ ಕುರಿತು ದೂರುಗಳು ಬಂದಿಲ್ಲ. ಅಂತಹ ಪ್ರಕರಣಗಳು ಬಂದರೆ ಕರೆಯಿಸಿ ವಿಚಾರಣೆ ಮಾಡಲಾಗುವುದು ಹಾಗೂ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

-ಐಶ್ವರ್ಯ ವಿ. ನಾಗರಾಳ ನರೇಗಲ್‌ ಠಾಣೆ ಪಿಎಸ್‌ಐ

ಕ್ರಿಮಿನಲ್ ಟ್ರೇಸ್‌ಪಾಸ್ ದೂರು ಸಲ್ಲಿಸಬಹುದು

ವಿದ್ಯುತ್ ಕಂಬ ಸ್ಥಾಪಿಸಲು ರೈತರೊಂದಿಗೆ ಕಂಪನಿಗಳು ಮಾಡಿಕೊಳ್ಳುವ ಒಪ್ಪಂದಗಳನ್ನು ಭಾರತೀಯ ಒಪ್ಪಂದ ಅಧಿನಿಯಮದ ಕಲಂ 1718 ರ ಪ್ರಕಾರ ರದ್ದುಗೊಳಿಸಬಹುದು. ಪರಿಹಾರ ನೀಡದೆ ವಿದ್ಯುತ್ ಕಂಬ ಸ್ಥಾಪನೆಯು 2003ರ ವಿದ್ಯುತ್ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದಂತಾಗುತ್ತದೆ. ನಿಯಮಬದ್ಧ ಒಪ್ಪಂದ ಮಾಡಿಕೊಳ್ಳದೆ ರೈತರ ಹೊಲಗಳಲ್ಲಿ ಅನಧಿಕೃತ ಪ್ರವೇಶ ಮಾಡಿ ಕಂಬ ಸ್ಥಾಪಿಸಿದರೆ ಅವರ ವಿರುದ್ಧ ಕ್ರಿಮಿನಲ್ ಟ್ರೇಸ್‌ಪಾಸ್ ದೂರನ್ನು ಸಲ್ಲಿಸಬಹುದಾಗಿದೆ.

-ವಿದ್ಯಾಧರ ಶಿರಗುಂಪಿ ಹೈಕೋರ್ಟ್ ವಕೀಲ ಜಕ್ಕಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.