ನರೇಗಲ್: ಪಟ್ಟಣದಲ್ಲಿ ಕಳೆದ 30 ವರ್ಷಗಳಿಂದ ಪಾಳುಬಿದ್ದ ಗರಡಿ ಮನೆಯನ್ನು ಸ್ಥಳೀಯ ಯುವಕರು, ಸ್ವಗ್ರಾಮ ಫೆಲೋಶಿಪ್, ನರೇಗಲ್ ಪಟ್ಟಣ ಅಭಿವೃದ್ಧಿ ಸಮಿತಿಯವರು ಹಾಗೂ ಕ್ರೀಡಾಪಟುಗಳು ಸಾಂಘಿಕವಾಗಿ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ. ಸಮಿತಿಯವರ ಈ ಕಾರ್ಯಕ್ಕೆ ಪಟ್ಟಣದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗರಡಿ ಮನೆ ಬಳಕೆ ಮಾಡಿಕೊಳ್ಳದ ಕಾರಣ ಕಟ್ಟಡದ ಚಾವಣಿ ಕುಸಿದು ಬಿದ್ದಿತ್ತು. ವ್ಯಾಯಾಮಕ್ಕೆ ಬಳಸುವ ವಸ್ತುಗಳು ಮಣ್ಣಿನಲ್ಲಿ ಹೂತು ಹೋಗಿದ್ದವು. ಕಟ್ಟಡ ದುರಸ್ತಿಗೆ ಹಿರಿಯರು ಹಲವು ಬಾರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಜನ ಪ್ರತಿನಿಧಿಗಳಿಗೆ ಅರ್ಜಿ ಸಲ್ಲಿಸಿದ್ದರೂ ದುರಸ್ತಿಗೆ ಸ್ಪಂದಿಸಿರಲಿಲ್ಲ.
ಈ ಹಿನ್ನಲೆಯಲ್ಲಿ ನರೇಗಲ್ ಪಟ್ಟಣದ ದ್ಯಾಮಮ್ಮನ ಪಾದಗಟ್ಟಿ ಹತ್ತಿರದ ವಿರಕ್ತಮಠದ ಆವರಣದಲ್ಲಿರುವ ಪಾಳು ಬಿದ್ದಿರುವ ವ್ಯಾಯಾಮ ಶಾಲೆಯನ್ನು ಸಮಿತಿಯವರು ಅಭಿವೃದ್ಧಿಪಡಿಸಿ ಮತ್ತೆ ಯುವಕರಿಗೆ ಕಸರತ್ತು ಮಾಡಲು ಅನುವು ಮಾಡಿಕೊಡುವ ಉದ್ದೇಶದಿಂದ ಶ್ರಮದಾನಕ್ಕೆ ಕೈ ಹಾಕಿದ್ದಾರೆ.
ದೇವರಿಗೆ ಪೂಜೆ ಸಲ್ಲಿಸಿ ಶ್ರಮದಾನ: ಸ್ವಗ್ರಾಮ ಫೆಲೋಶಿಪ್ ಹಾಗೂ ಪಟ್ಟಣ ಅಭಿವೃದ್ಧಿ ಸಮಿತಿ ಸದಸ್ಯರು ಗರಡಿಮನೆ ಅಭಿವೃದ್ದಿಪಡಿಸಲು ಕಂಕಣಬದ್ದರಾಗಿದ್ದು, ಗರಡಿಮನೆಗೆ ಪೂಜೆ ಸಲ್ಲಿಸಿ ಅದರ ಸ್ವಚ್ಚತೆಗೆ ಶ್ರಮದಾನದ ಮೂಲಕ ಗಿಡಗಳನ್ನು ತೆರವುಗೊಳಿಸಿದರು.
ದುರಸ್ತಿಗೆ ತಗಲುವ ಖರ್ಚು-ವೆಚ್ಚಗಳ ಬಗ್ಗೆ ಕ್ರಿಯಾಯೋಜನೆ ರೂಪಿಸಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಈ ಕಾರ್ಯದಿಂದ ಊರಿನ ಯುವಕರು ದುಶ್ಚಟಗಳಿಂದ ದೂರವಾಗಿ; ದೇಸಿ ಕ್ರೀಡೆಯತ್ತ ಒಲವು ಬೆಳೆಸಲು ಮುಂದಾಗಿದ್ದಾರೆ.
ನರೇಗಲ್ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಹಲವು ಯುವಕರು ಬೆಟ್ಟಿಂಗ್, ಆನ್‌ಲೈನ್ ಜೂಜಾಟ, ಕುಡಿತ, ಮೀಟರ್ ಬಡ್ಡಿ ಸಾಲಕ್ಕೆ ಸಿಲುಕಿ ಅದನ್ನು ತೀರಿಸಲಾಗದೆ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಪಾಲಕರು ಆಘಾತಕ್ಕೆ ಒಳಗಾಗಿರುವುದನ್ನು ಕಂಡು ಮುಂದಿನ ಪೀಳಿಗೆಯಾದರೂ ಸಹ ಇದರಿಂದ ದೂರಾಗಲಿ ಎಂಬ ಸದುದ್ದೇಶದಿಂದ ಹಳೆಯ ಗರಡಿಮನೆ ದುರಸ್ತಿಗೊಳಿಸಿ ಅವರನ್ನು ಕ್ರೀಡಾ ಚಟುವಟಿಕೆಯತ್ತ ಸೆಳೆಯಲು ಈ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ನರೇಗಲ್ ಪಟ್ಟಣ ಅಭಿವೃದ್ದಿ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ ಹೇಳಿದರು.
ಗರಡಿಮನೆಯ ಪರಿಕಲ್ಪನೆ ಇಂದಿನ ಯುವಕರಿಗೆ ತಿಳಿದೇ ಇಲ್ಲ. ಏಕೆಂದರೆ ಅದರಲ್ಲಿ ತರಬೇತಿ ಪಡೆದವರು ಈಗಾಗಲೇ ವೃದ್ಧರಾಗಿದ್ದು ತರಬೇತಿ ನೀಡುವವರು ಸಿಗುವುದು ಕಷ್ಟವಾಗಿದೆಹನಮಂತಪ್ಪ ಸಕ್ರೋಜಿ ಹಿರಿಯ ಕುಸ್ತಿಪಟು
ಇಂದಿನ ಯುವಕರು ದುಶ್ಚಟಗಳಿಂದ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ಧಾರೆ. ಕಾರಣ ಗರಡಿಮನೆ ದುರಸ್ತಿಗೊಳಿಸಿ ಯುವಕರಲ್ಲಿ ಕ್ರೀಡಾ ಮನೊಭಾವ ಬೆಳೆಸುವ ಪ್ರಯತ್ನಕ್ಕೆ ಮುಂದಾಗಿದ್ದೇವೆಶಿವನಗೌಡ ಪಾಟೀಲ ಪಟ್ಟಣ ಅಭಿವೃದ್ದಿ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.