ADVERTISEMENT

ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ; ಸ್ವಚ್ಛತೆಯಲ್ಲೂ ಛಾಪು ಮೂಡಿಸಿದ ನರಗುಂದ

ನರಗುಂದ ಪುರಸಭೆ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 10ನೇ ಸ್ಥಾನ

ಬಸವರಾಜ ಹಲಕುರ್ಕಿ
Published 25 ಜುಲೈ 2025, 4:33 IST
Last Updated 25 ಜುಲೈ 2025, 4:33 IST
ನರಗುಂದದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪುನರ್ಬಳಕೆ ವಸ್ತುಗಳನ್ನು ಬೇಲಿಂಗ್ ಮಷಿನ್ ಮೂಲಕ ಬೇಲ್ ಮಾಡುತ್ತಿರುವ ದೃಶ್ಯ
ನರಗುಂದದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪುನರ್ಬಳಕೆ ವಸ್ತುಗಳನ್ನು ಬೇಲಿಂಗ್ ಮಷಿನ್ ಮೂಲಕ ಬೇಲ್ ಮಾಡುತ್ತಿರುವ ದೃಶ್ಯ   

ನರಗುಂದ: ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನರಗುಂದ ಪಟ್ಟಣ ದಿನೇದಿನೇ ಬೆಳೆಯುತ್ತಿದ್ದು, ಸುತ್ತಲಿನ ತಾಲ್ಲೂಕುಗಳಲ್ಲಿ ವಿಶೇಷವಾಗಿ ಕಾಣುತ್ತಿದೆ. ಸ್ವಚ್ಛತೆಯಲ್ಲೂ ಒಂದು ಹೆಜ್ಜೆ ಮುಂದಿದ್ದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.

ಜಿಲ್ಲೆಗೆ ಪ್ರಥಮ: ಕೇಂದ್ರ ಸರ್ಕಾರವು 2024-25ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ನರಗುಂದ ಪಟ್ಟಣವು 129 ಪುರಸಭೆಗಳಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಗಳಿಸಿದೆ. ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದೆ. ದೇಶದಾದ್ಯಂತ ಒಟ್ಟು 4,500 ನಗರಗಳಲ್ಲಿ ಸಮೀಕ್ಷೆ ನಡೆದಿದ್ದ, ಇದರಲ್ಲಿ ನರಗುಂದ ಪಟ್ಟಣ ಪ್ರಗತಿ ಸಾಧಿಸಿ ಬಂಡಾಯದ ನೆಲ ಸ್ವಚ್ಛತೆಯಲ್ಲೂ ತನ್ನ ಛಾಪು ಮೂಡಿಸಿದೆ.

ನಿತ್ಯ 14 ಟನ್ ತ್ಯಾಜ್ಯ: ನರಗುಂದ ಪಟ್ಟಣದಲ್ಲಿ ಪ್ರತಿದಿನ ಮನೆಮನೆ ಕಸವನ್ನು ಸಂಗ್ರಹಣೆ ಮಾಡುತ್ತಿದ್ದು, ಅದರಲ್ಲಿ ಮೂಲದಲ್ಲಿಯೇ ಕಸವನ್ನು ಹಸಿಕಸ ಮತ್ತು ಒಣಕಸವನ್ನಾಗಿ ಬೇರ್ಪಡಿಸಿ ಸಂಗ್ರಹಿಸಲಾಗುತ್ತಿದೆ. ಪ್ರತಿದಿನ 14 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಅದರಲ್ಲಿ 6 ಟನ್ ಒಣಕಸ ಮತ್ತು 6 ಟನ್ ಹಸಿಕಸ ಹಾಗೂ ಮನೆಯಿಂದ ಉತ್ಪಾದನೆಯಾಗುವ ಇತರೆ ಅಪಾಯಕಾರಿ ತ್ಯಾಜ್ಯವನ್ನು ಸಹ ಪ್ರತ್ಯೇಕವಾಗಿ ಸಂಗ್ರಹಣೆ ಮಾಡಲಾಗುತ್ತಿದೆ. ಇಲ್ಲಿಯ ಪೌರಕಾರ್ಮಿಕರ ಸೇವಾನಿಷ್ಠೆಯಿಂದ ಇದು ಸಾಧ್ಯವಾಗಿದೆ.

ADVERTISEMENT

ಸಂಗ್ರಹಣೆ ಮಾಡಲಾದ ಕಸವನ್ನು ಸವದತ್ತಿ ರಸ್ತೆಯಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಾಗಿಸಲಾಗುತ್ತಿದೆ. 9 ಎಕರೆ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣಾ ಘಟಕವಿದೆ. ಜಿಲ್ಲೆಯಲ್ಲಿಯೇ ಇದು ದೊಡ್ಡ ಘಟಕವಾಗಿದೆ. ಪ್ರತಿದಿನ ಸಂಗ್ರಹಣೆಯಾಗುವ ಹಸಿ ಕಸವನ್ನು ಎರೆಹುಳು ಗೊಬ್ಬರ ಮೂಲಕ 1 ಟಿಪಿಡಿ ಬಯೋಗ್ಯಾಸ್ ಮೂಲಕ 0.5 ಟಿಪಿಡಿ ಹಾಗೂ ಇನ್ನುಳಿದಂತ ಹಸಿ ಕಸವನ್ನು ವಿಂಡೋ ಪ್ಲಾಟ್ ಫಾರಂ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಇದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಶ್ಲಾಘನೆಗೂ ಪಾತ್ರವಾಗಿದೆ. 

ನರಗುಂದದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಎರೆಹುಳು ಗೊಬ್ಬರ ತಯಾರಿ 
ನರಗುಂದ ಪುರಸಭೆ ತ್ಯಾಜ್ಯವಿಲೇವಾರಿ ಘಟಕ ಹಸಿರಿನಿಂದ ಕಂಗೊಳಿಸುತ್ತಿರುವ ದೃಶ್ಯ.
ಸಂಗಮೇಶ ಬ್ಯಾಳಿ
ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ನರಗುಂದ ಪಟ್ಟಣ ರಾಜ್ಯಕ್ಕೆ 10ನೇ ಸ್ಥಾನ ಗಳಿಸಿರುವುದು ಹೆಮ್ಮೆ ತಂದಿದೆ. ಇದು ಎಲ್ಲ ಸ್ವಚ್ಛತಾ ಸಿಬ್ಬಂದಿ ವಾಹನ ಚಾಲಕರ ಶ್ರಮದ ಪ್ರತಿಫಲವಾಗಿದೆ. ಇದರಲ್ಲಿ ಶಾಸಕ ಸಿ.ಸಿ.ಪಾಟೀಲರ ಸಹಕಾರ ಹೆಚ್ಚಿದೆ.
ಸಂಗಮೇಶ ಬ್ಯಾಳಿ ಮುಖ್ಯಾಧಿಕಾರಿ ಪುರಸಭೆ ನರಗುಂದ

ತಿಂಗಳಿಗೆ ₹70 ಸಾವಿರ ಆದಾಯ:

ಎರೆಹುಳು ಗೊಬ್ಬರ ಮತ್ತು ಎರೆಜಲಕ್ಕೆ ತುಂಬಾ ಬೇಡಿಕೆ ಇದ್ದು ಎರೆಹುಳು ಗೊಬ್ಬರವನ್ನು ಪ್ರತಿ ಕೆ.ಜಿ.ಗೆ ₹10ರಂತೆ ಮಾರಾಟ ಮಾಡಲಾಗುತ್ತಿದೆ. ಅದೇರೀತಿ ಒಣಕಸದಲ್ಲಿ ಲಭ್ಯವಿರುವ ಪುನರ್ಬಳಕೆ ವಸ್ತುಗಳಾದ ಪ್ಲಾಸ್ಟಿಕ್ ಬಾಟಲ್ ರಟ್ಟು ತಗಡು ಚಪ್ಪಲಿಗಳು ಟಯರ್ ಟೆಟ್ರಾ ಪ್ಯಾಕ್ ಸೇರಿದಂತೆ ಇನ್ನು ಹಲವಾರು ವಸ್ತುಗಳನ್ನು ಪ್ರತ್ಯೇಕಿಸಿ ಬೇಲಿಂಗ್ ಮಷಿನ್ ಮೂಲಕ ಬೇಲ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ತಿಂಗಳು ಗೊಬ್ಬರ ಮತ್ತು ಪುನರ್ಬಳಕೆ ವಸ್ತುಗಳಿಂದ ಪುರಸಭೆಗೆ ₹70 ಸಾವಿರ ಆದಾಯ ಬರುತ್ತಿದೆ. ಇದಕ್ಕೆ ಪುರಸಭೆಯ ಮುಖ್ಯಾಧಿಕಾರಿಯಿಂದ ಹಿಡಿದು ಎಲ್ಲ ಸ್ವಚ್ಛತಾ ಸಿಬ್ಬಂದಿ ವಾಹನ ಚಾಲಕರು ಸಿಬ್ಬಂದಿಯ ಶ್ರಮದ ಪ್ರತಿಫಲವಾಗಿದೆ. ಭವಿಷ್ಯದಲ್ಲಿ ನರಗುಂದ ಪುರಸಭೆಯನ್ನು ರಾಜ್ಯಕ್ಕೆ ಪ್ರಥಮಸ್ಥಾನ ತರುವಲ್ಲಿ ನಿರಂತರ ಶ್ರಮಿಸುತ್ತಿರುವುದಾಗಿ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.