ADVERTISEMENT

ಉದ್ಯಮಾಸಕ್ತಿ ಹೆಚ್ಚಿಸುವ ಸಂಕಲ್ಪ: ಕೋಕಿಲಾ

ನ್ಯಾಷನಲ್‌ ಎಸ್‌ಸಿ, ಎಸ್‌ಟಿ ಹಬ್‌ನಿಂದ ಉದ್ಯಮಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2022, 3:59 IST
Last Updated 28 ಡಿಸೆಂಬರ್ 2022, 3:59 IST
ಗದಗ ನಗರದಲ್ಲಿ ಮಂಗಳವಾರ ನಡೆದ ಅರಿವು ಮೂಡಿಸುವ ಸಮಾರಂಭವನ್ನು ನ್ಯಾಷನಲ್‌ ಎಸ್‌ಸಿ, ಎಸ್‌ಟಿ ಹಬ್‌ ಮುಖ್ಯ ವ್ಯವಸ್ಥಾಪಕಿ ಎ. ಕೋಕಿಲಾ ಉದ್ಘಾಟಿಸಿದರು
ಗದಗ ನಗರದಲ್ಲಿ ಮಂಗಳವಾರ ನಡೆದ ಅರಿವು ಮೂಡಿಸುವ ಸಮಾರಂಭವನ್ನು ನ್ಯಾಷನಲ್‌ ಎಸ್‌ಸಿ, ಎಸ್‌ಟಿ ಹಬ್‌ ಮುಖ್ಯ ವ್ಯವಸ್ಥಾಪಕಿ ಎ. ಕೋಕಿಲಾ ಉದ್ಘಾಟಿಸಿದರು   

ಬೆಟಗೇರಿ: ‘ಆರ್ಥಿಕವಾಗಿ ಹಿಂದುಳಿದ ಗದಗ, ರಾಯಚೂರು, ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿನ ಎಸ್‌ಸಿ, ಎಸ್‌ಟಿ ಉದ್ಯಮಿಗಳಿಗೆ ಕೈಗಾರಿಕಾ ವಲಯದಲ್ಲಿ ಹೆಚ್ಚಿನ ಆಸಕ್ತಿ ತುಂಬಿ ಅವರನ್ನು ಆರ್ಥಿಕವಾಗಿ ಬಲವರ್ಧನೆ ಮಾಡಿ ಸಮುದಾಯದ ಮುಖ್ಯವಾಹಿನಿಗೆ ತರುವ ಸಂಕಲ್ಪ ಹೊಂದಲಾಗಿದೆ’ ಎಂದು ನ್ಯಾಷನಲ್‌ ಎಸ್‌ಸಿ, ಎಸ್‌ಟಿ ಹಬ್‌ ಮುಖ್ಯ ವ್ಯವಸ್ಥಾಪಕಿ ಎ. ಕೋಕಿಲಾ ಹೇಳಿದರು.

ನಗರದ ಶಿವರತ್ನ ಪ್ಯಾಲೇಸ್‌ನಲ್ಲಿ ಮಂಗಳವಾರ ರಾಷ್ಟ್ರೀಯ ಎಸ್.ಸಿ.ಎಸ್.ಟಿ ಹಬ್, ಗದಗ ಜಿಲ್ಲಾ ಎಸ್.ಸಿ.ಎಸ್.ಟಿ ಉದ್ಯಮಿಗಳ ಸಂಘ ಹಾಗೂ ಕೇಂದ್ರ ಸರ್ಕಾರದ ಸಣ್ಣ ಕೈಗಾರಿಕೆಗಳ ನಿಗಮದ ಸಹಯೋಗದಲ್ಲಿ ನಡೆದ ಉದ್ಯಮ ಯೋಜನೆಗಳ ಅರಿವು ಮೂಡಿಸುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ನ್ಯಾಷನಲ್‌ ಎಸ್‌ಸಿ, ಎಸ್‌ಟಿ ಹಬ್ 2017ರಲ್ಲಿ ಸ್ಥಾಪಿಸಲಾಗಿದೆ. ದೇಶದ 150 ಕಡೆಗಳಲ್ಲಿ ಕಾರ್ಯೋನ್ಮುಖವಾಗಿದೆ. ವರ್ಷದಲ್ಲಿ ಎರಡು ಬಾರಿ ಅಂತರರಾಷ್ಷ್ರೀಯ ಮಟ್ಟದಲ್ಲಿ ಕೈಗಾರಿಕಾ ವಸ್ತುಪ್ರದರ್ಶನ ನಡೆಸುತ್ತಿದೆ. ಉದ್ಯಮಿಗಳನ್ನು ಪ್ರೇರೇಪಿಸಲು ವಿಮಾನಯಾನ ಮತ್ತು ಸ್ಟಾಲ್‌ ವೆಚ್ಚವನ್ನು ಹಬ್‌ನಿಂದಲೇ ಭರಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಬ್ಯಾಂಕ್ ಸಲಹೆಗಾರ ಆರ್. ಸುಬ್ರಹ್ಮಣ್ಯಂ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಹಲವಾರು ಯೋಜನೆಗಳಿವೆ. ಪ್ರಧಾನಮಂತ್ರಿ ರೋಜ್‌ಗಾರ್‌ ಯೋಜನೆ, ಸಬ್ಸಿಡಿ ಯೋಜನೆ, ಮುದ್ರಾ ಯೋಜನೆ ಅಡಿ ಕೋಟಿಗಟ್ಟಲೆ ಹಣವನ್ನು ಸಾಲವಾಗಿ ನೀಡುವ ಮೂಲಕ ಉದ್ಯಮಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಆದರೆ, ಸಿಬಿಲ್ ಸ್ಕೋರ್‌ ಉತ್ತಮವಾಗಿದ್ದರೇ ಮಾತ್ರ ಸಾಲ ಸಿಗಲಿದೆ. ಇಲ್ಲವಾದಲ್ಲಿ, ಅರ್ಜಿ ತಿರಸ್ಕೃತವಾಗಲಿದೆ’ ಎಂದರು.

ಸಹಾಯಕ ವ್ಯವಸ್ಥಾಪಕ ಕೆ.ಎನ್.ಓಜಾ, ಕೆಎಸ್‌ಎಫ್‌ಸಿ ಸಹಾಯಕ ವ್ಯವಸ್ಥಾಪಕ ಬಿ.ಸಿದ್ದರಾಮೇಶ್ವರ ಬಾರಕೇರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಶೋಕ ಪ್ಯಾಟಿ ಮಾತನಾಡಿದರು.

ಉದ್ಯಮಿಗಳಾದ ರಾಮಚಂದ್ರ ಪೂಜಾರ, ಪ್ರಕಾಶ ಬನ್ನಿಗಿಡದ, ಹುಚ್ಚಪ್ಪ ಭಜಂತ್ರಿ, ಹನುಮಂತ್ ಫಲದೊಡ್ಡಿ, ಮಹಾದೇವ ಮಾರಣ್ಣವರ, ಶಿವಾನಂದ ರಾಠೋಡ, ಮಂಜುನಾಥ ಶಿವಪ್ಪ ಮುಳಗುಂದ, ಶಂಕರ ಮುಳಗುಂದ ಇದ್ದರು.

200ಕ್ಕೂ ಹೆಚ್ಚು ಎಸ್‌ಸಿ, ಎಸ್‌ಟಿ ಉದ್ಯಮಿಗಳು ಭಾಗವಹಿಸಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಸುಧಾ ಪಟ್ಟಣಶೆಟ್ಟಿ ನಿರೂಪಿಸಿದರು.

ಎಸ್‌ಸಿ, ಎಸ್‌ಟಿ ಹಬ್‌ ಸಮುದಾಯದ ಉದ್ಯಮಿಗಳಿಗೆ ವರವಾಗಿದೆ. ಹಬ್ ನೆರವಿನೊಂದಿಗೆ ಪ್ರತಿಯೊಬ್ಬರೂ ಕೈಗಾರಿಕಾ ಸಾಧಕರಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಕಂಡ ಕನಸು ನನಸು ಮಾಡೋಣ
ಶಿವಪ್ಪ ಮುಳಗುಂದ, ಅಧ್ಯಕ್ಷ ಎಸ್.ಸಿ.ಎಸ್.ಟಿ ಉದ್ಯಮದಾರರ ಸಂಘ ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.