ಮುಳಗುಂದ ಸಮೀಪದ ನೀಲಗುಂದ ಗ್ರಾಮದಲ್ಲಿ ಪತಂಗಿ ಅವರ ಮನೆ ಹತ್ತಿರ ಕೊಳಚೆ ನೀರು ನಿಂತಿರುವದು.
ಮುಳಗುಂದ: ಇಲ್ಲಿಗೆ ಸಮೀಪದ ನೀಲಗುಂದ ಗ್ರಾಮದಲ್ಲಿ ಜಲಜೀವನ ಮಿಷನ್ (ಜೆಜೆಎಂ) ಕಾಮಗಾರಿ ಅಪೂರ್ಣವಾಗಿದ್ದು, ಚರಂಡಿ ಹೂಳು ತುಂಬಿ, ಸ್ವಚ್ಛತೆ ಮರೀಚಿಕೆ ಆಗಿದೆ. ನೂತನವಾಗಿ ನಿರ್ಮಿಸಿದ ಗ್ರಂಥಾಲಯ ಕಟ್ಟಡವನ್ನು ಓದುಗರ ಬಳಕೆಗೆ ಇನ್ನೂ ಮುಕ್ತಗೊಳಿಸದ ಆಡಳಿತ ವ್ಯವಸ್ಥೆ ವಿರುದ್ಧ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.
‘ಚಿಂಚಲಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ನೀಲಗುಂದ ಗ್ರಾಮದ ಪ್ಲಾಟ್ ಏರಿಯಾ ಮತ್ತು ಪತಂಗಿ ಅವರ ಮನೆ ಹತ್ತಿರದ ಚರಂಡಿಗಳು ಹಲವು ದಿನಗಳಿಂದ ಹೂಳು ತುಂಬಿಕೊಂಡಿವೆ. ಕೊಳಚೆ ನೀರು ಮುಂದೆ ಸಾಗುತ್ತಿಲ್ಲ, ಪರಿಣಾಮ ದುರ್ನಾತ ಉಂಟಾಗಿ ಸೊಳ್ಳೆ ಉತ್ಪತ್ತಿಗೂ ಕಾರಣವಾಗುತ್ತಿದೆ. ಇದರಿಂದ ಇಲ್ಲಿನ ನಿವಾಸಿಗಳ ನೆಮ್ಮದಿ ಕೆಡಿಸಿದೆ. ಹಲವು ಬಾರಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗೆ ಮನವಿ ಮಾಡಿ, ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ದುರ್ನಾತ, ಸೊಳ್ಳೆ ಕಾಟಕ್ಕೆ ಸಾಕಾಗಿದೆ’ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ಗ್ರಾಮದ 1 ಮತ್ತು 2ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಯೋಜನೆಯ ಜಲಜೀವನ ಮಿಷನ್ ಕಾಮಗಾರಿ ಅಪೂರ್ಣವಾಗಿದ್ದು, ರಸ್ತೆ ಅಗೆದು ಹಾಗೇ ಬಿಡಲಾಗಿದೆ. ಕೆಲವು ಭಾಗದಲ್ಲಿ ಗುಂಡಿ ಮುಚ್ಚಿದ್ದರೂ ಸರಿಯಾದ ಕೆಲಸ ನಡೆದಿಲ್ಲ. ಸುಮಗ ಸಂಚಾರಕ್ಕೆ ಸಮಸ್ಯೆ ಎದುರಿಸುವಂತಾಗಿದೆ.
‘ವಾರ್ಡ್ 2ರಲ್ಲಿ ಇರುವ ಸಾಮೂಹಿಕ ಶೌಚಾಲಯದ ಸುತ್ತ ಜಾಲಿಕಂಟಿ, ಕಸ ಬೆಳೆದು ನಿಂತಿದೆ. ಶೌಚಕ್ಕೆ ಹೋಗಲು ದಾರಿ ಇಲ್ಲದೇ ಪ್ರಯೋಜನಕ್ಕೆ ಬಾರದಾಗಿದೆ. ಶೌಚಾಲಯದ ಕಟ್ಟಡವು ಬಿದ್ದು ಹಾಳಾಗಿದೆ. ಹೀಗಾಗಿ ಮಹಿಳೆಯರು ಅಲ್ಲಿ ಬರ್ಹಿದೆಸೆಗೆ ಹೋದಾಗ ನಿತ್ಯವು ಮುಜುಗರ ಅನುಭವಿಸುವ ಸ್ಥಿತಿ ಉಂಟಾಗಿದೆ. ಅಲ್ಲದೆ ರಸ್ತೆ ಹತ್ತಿರದ ಮನೆ ನಿವಾಸಿಗಳೂ ಅನೈರ್ಮಲ್ಯದ ವಾತಾವರಣದಿಂದ ಬೇಸತ್ತಿದ್ದಾರೆ. ಗ್ರಾಮಸ್ಥರ ಮನವಿಗೆ ಸ್ಪಂದಿಸದ ಗ್ರಾಮ ಪಂಚಾಯಿತಿ ಅಧಿಕಾರಿ, ಆಡಳಿತ ಮಂಡಳಿ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ’ ಎಂದು ಲಕ್ಷ್ಮವ್ವ ಆರೋಪಿಸಿದರು.
‘2020ರಲ್ಲಿ ಗ್ರಾಮ ವಿಕಾಸ ಯೋಜನೆ ಅಡಿ ₹20 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದೆ. ಈವರೆಗೂ ಉದ್ಘಾಟನೆ ಆಗದಿರುವುದು ಓದುಗರಿಗೆ ನಿರಾಸೆ ಉಂಟು ಮಾಡಿದೆ. ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಅಗತ್ಯವಿರುವ ಸಾಹಿತ್ಯ, ಕಥೆ, ಕಾದಂಬರಿ ಸೇರಿಂದತೆ ₹5 ಲಕ್ಷ ಮೌಲ್ಯದ ಪುಸಕ್ತ, ಪೀಠೋಪಕರಣ ಒದಗಿಸಿದೆ. ಆದರೆ ಅವು ಪ್ರಯೋಜನಕ್ಕೆ ಬಾರದಾಗಿವೆ. ಸೊಳ್ಳೆ ನಾಶಕ ಸಿಂಪಡಣೆ ಸೇರಿದಂತೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗ್ರಂಥಾಲಯ ಆರಂಭಿಸಬೇಕು’ ಎಂದು ಯುವ ಮುಖಂಡ ರವಿ ವಗ್ಗನವರ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.