ಸಾವು
(ಪ್ರಾತಿನಿಧಿಕ ಚಿತ್ರ)
ಗದಗ: ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಬಾಣಂತಿ ಮೃತಪಟ್ಟಿರುವ ಘಟನೆ ಭಾನುವಾರ ಇಲ್ಲಿನ ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆದಿದೆ. ವೈದ್ಯರು ಸಕಾಲದಲ್ಲಿ ಚಿಕಿತ್ಸೆ ಕೊಡದ ಕಾರಣಕ್ಕೆ ಸಾವಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಗದಗ ಜಿಲ್ಲೆ ನರಗುಂದ ಪಟ್ಟಣದ ಸುಜಾತಾ ಜೋಗಣ್ಣವರ (22) ಮೃತಪಟ್ಟ ಬಾಣಂತಿ.
‘ಹೆರಿಗೆಗಾಗಿ ನರಗುಂದದಿಂದ ಗದಗ ಜಿಲ್ಲಾ ಆಸ್ಪತ್ರೆಗೆ ಸುಜಾತಾ ಅವರನ್ನು ಕರೆತರಲಾಗಿತ್ತು. ಭಾನುವಾರ ಬೆಳಿಗ್ಗೆ ಹೆರಿಗೆಯಾದ ಒಂದು ತಾಸಿನಲ್ಲಿ ಬಾಣಂತಿ ತಲೆ ಸುತ್ತಿ ಬಿದ್ದಿದ್ದಾರೆ. ವೈದ್ಯರು ತಕ್ಷಣ ಚಿಕಿತ್ಸೆ ಕೊಡದೇ ನಿರ್ಲಕ್ಷ್ಯ ವಹಿಸಿದ್ದರಿಂದ ಬಾಣಂತಿ ಮೃತಪಟ್ಟಿದ್ದಾರೆ’ ಎಂದು ಸಂಬಂಧಿ ದತ್ತು ಜೋಗಣ್ಣವರ ಆರೋಪಿಸಿದ್ದಾರೆ.
‘ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತನಿಧಿ ಕೇಂದ್ರ ಇದ್ದರೂ ರೋಗಿಗಳ ಕಡೆಯವರೇ ರಕ್ತ ಹೊಂದಿಸಬೇಕು ಎಂದು ಆಸ್ಪತ್ರೆಯ ಸಿಬ್ಬಂದಿ ಕಾಡಿಸುತ್ತಾರೆ. ಕಷ್ಟಪಟ್ಟು ರಕ್ತ ಹೊಂದಿಸಿಕೊಟ್ಟರೂ ಬಾಣಂತಿಯನ್ನು ಉಳಿಸಿಕೊಡಲಿಲ್ಲ’ ಎಂದು ದೂರಿದರು.
‘ದೇಹದ ರಕ್ತನಾಳದಲ್ಲಿ ರಕ್ತಸ್ರಾವ ಮತ್ತು ರಕ್ತ ಹೆಪ್ಪುಗಟ್ಟುವಿಕೆಯಿಂದ (ಡಿಐಸಿ) ಬಾಣಂತಿ ಮೃತಪಟ್ಟಿದ್ದಾರೆ. ಗರ್ಭಿಣಿ ಇದ್ದಾಗ ಸರಿಯಾಗಿ ತೋರಿಸಿಕೊಂಡಿಲ್ಲ. ಹೆರಿಗೆಯಲ್ಲಿ ಹೈರಿಸ್ಕ್ ಇದ್ದ ಕಾರಣಕ್ಕೆ ಕೊನೆ ಕ್ಷಣದಲ್ಲಿ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾರೆ. ಈ ರೀತಿಯ ಸಮಸ್ಯೆ ಕಾರಣಕ್ಕೆ ಹೆರಿಗೆ ಆದ ಕೆಲವೇ ಗಂಟೆಗಳಲ್ಲಿ ಬಾಣಂತಿ ಮೃತಪಟ್ಟರು. ಮಗು ಆರೋಗ್ಯದಿಂದ ಇದೆ’ ಎಂದು ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.