ಮುಂಡರಗಿ: 'ಗದಗ, ಮುಂಡರಗಿ ಮಾರ್ಗವಾಗಿ ಹರಪನಹಳ್ಳಿಗೆ ನೂತನ ರೈಲು ಮಾರ್ಗ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಡಿ.9ರಂದು ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ಗದಗ-ಹರಪನಹಳ್ಳಿ ನೂತನ ರೈಲು ಮಾರ್ಗ ಹೋರಾಟ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ದೇಸಾಯಿ ತಿಳಿಸಿದರು.
ಪಟ್ಟಣದ ಬೃಂದಾವನ ವೃತ್ತದಲ್ಲಿ ಗುರುವಾರ ನೂತನ ರೈಲು ಮಾರ್ಗ ಹೋರಾಟ ಸಮಿತಿಯ ನೂತನ ಕಾರ್ಯಾಲಯದ ಉದ್ಘಾಟನೆ ಹಾಗೂ ಹೋರಾಟದ ಕರಪತ್ರಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗದಗದಿಂದ ಮುಂಡರಗಿ ಮಾರ್ಗವಾಗಿ ಹರಪನಹಳ್ಳಿಗೆ ನೂತನ ರೈಲು ಮಾರ್ಗ ಮಂಜೂರು ಮಾಡಬೇಕು ಎಂದು ಈ ಭಾಗದ ಜನರು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೂತನ ರೈಲು ಮಾರ್ಗ ಮಂಜೂರು ಮಾಡದೆ ಈ ಭಾಗಕ್ಕೆ ಅನ್ಯಾಯ ಮಾಡುತ್ತಲಿವೆ ಎಂದು ಆರೋಪಿಸಿದರು.
ಈ ಭಾಗಕ್ಕೆ ನೂತನ ರೈಲು ಮಾರ್ಗ ಆರಂಭವಾದರೆ ಈ ಭಾಗದ ಬಡ ಕೂಲಿ ಕಾರ್ಮಿಕರಿಗೆ, ವ್ಯಾಪಾರಸ್ಥರಿಗೆ, ವಿದ್ಯಾರ್ಥಿಗಳಿಗೆ, ರೈತರಿಗೆ ತುಂಬಾ ಅನಕೂಲವಾಗಲಿದೆ. ಆದ್ದರಿಂದ ಸರ್ಕಾರ ತಕ್ಷಣ ಗದಗ-ಹರಪನಹಳ್ಳಿ ನೂತನ ರೈಲು ಮಾರ್ಗಕ್ಕೆ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿದರು.
ಗದಗ–ಹರಪನಹಳ್ಳಿ ರೈಲು ಮಾರ್ಗ ರಚನೆಯ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಬಸವರಾಜ ನವಲಗುಂದ ಮಾತನಾಡಿ, ನೂತನ ರೈಲು ಮಾರ್ಗಕ್ಕಾಗಿ ಗದಗ, ಹುಬ್ಬಳ್ಳಿ, ಬೆಂಗಳೂರು, ದೆಹಲಿ, ವಾರಣಾಸಿ, ರಾಮೇಶ್ವರ ಮೊದಲಾದ ಭಾಗಗಳಲ್ಲಿ ಹಲವು ವರ್ಷಗಳಿಂದ ಪ್ರತಿಭಟನೆ ಮಾಡುತ್ತಲಿದ್ದೇವೆ. ಆದರೂ ನಮ್ಮ ಬೇಡಿಕೆ ಈವರೆಗೂ ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಷಡಕ್ಷರಯ್ಯ ಅಳವುಂಡಿಮಠ ನೂತನ ಕಾರ್ಯಾಲಯವನ್ಮು ಉದ್ಘಾಟಿಸಿದರು.
ಮುಖಂಡರಾದ ಧ್ರುವಕುಮಾರ ಹೂಗಾರ, ರಾಜಾಭಕ್ಷಿ ಬೇಟಗೇರಿ, ದೂದ್ದುಸಾಬ ಕಾತರಕಿ, ಯಮನಪ್ಪ ಭಜಂತ್ರಿ ಬಸಪ್ಪ ವಡ್ಡರ, ಶ್ರೀನಿವಾಸ ಕಟ್ಟಿಮನಿ ಮಂಜುನಾಥ ಇಟಗಿ, ನಿಂಗಪ್ಪ ಭಂಡಾರಿ, ಶಿವರಾಜ ಅಸುಂಡಿ, ವೀರಪಾಕ್ಷಯ್ಯ ಡಂಬಳಮಠ, ವೀರಭದ್ರಪ್ಪ ಕಬ್ಬಿಣದ, ಶಿವು ನವಲಗುಂದ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.