ಮುಂಡರಗಿ: ಗ್ರಾಮೀಣ ಭಾಗದ ಕೂಲಿಕಾರ್ಮಿಕರಿಗೆ ನರೇಗಾ ಯೋಜನೆ ವರದಾನವಾಗಿದ್ದು, ನೂರಾರು ಬಡ ಕುಟುಂಬಗಳ ಜೀವನೋಪಾಯಕ್ಕೆ ಆಸರೆಯಾಗಿದೆ.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಲವಾರು ವೃದ್ಧರು, ಅಂಗವಿಕಲರು, ದುರ್ಬಲರು ನಿಯಮಿತವಾಗಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ.
ತಾಲ್ಲೂಕಿನ ಮುಂಡವಾಡ ಗ್ರಾಮದ ಶಂಕರಪ್ಪ ಕೂಬಿಹಾಳ (82) ಹಾಗೂ ಅವರ ಪತ್ನಿ ಶಂಕರಮ್ಮ ಕೂಬಿಹಾಳ (74) ವೃದ್ಧ ದಂಪತಿ ಇಳಿವಯಸ್ಸಿನಲ್ಲೂ ಉತ್ಸಾಹದಿಂದ ನರೇಗಾ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ವೃದ್ಧ ಪತಿ, ಪತ್ನಿಯರಿಬ್ಬರು ಹತ್ತು ವರ್ಷಗಳಿಂದ ನಿತ್ಯ ನರೇಗಾ ಯೋಜನೆಯ ಸಮುದಾಯ ಬದು ನಿರ್ಮಾಣ, ನಾಲಾ ಹೂಳೆತ್ತುವುದು, ಕೆರೆ ಹೂಳೆತ್ತುವ ಕಾಮಗಾರಿಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರವು ಈಗ ನರೇಗಾ ದೈನಂದಿನ ವೇತನವನ್ನು ₹370ಕ್ಕೆ ಏರಿಸಿದ್ದು, ದಂಪತಿಯು ನಿತ್ಯ ₹740 ಕೂಲಿ ಪಡೆದುಕೊಳ್ಳುತ್ತಿದ್ದಾರೆ.
ನರೇಗಾ ಕೂಲಿ ಕೆಲಸವಿಲ್ಲದಿದ್ದಾಗ ದಂಪತಿಯು ತಮ್ಮ ಎರಡು ಎಕರೆ ಖುಷ್ಕಿ ಕೃಷಿ ಭೂಮಿ ಹಾಗೂ ಅನ್ಯರ ಕೃಷಿ ಜಮೀನುಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದಾರೆ.
ನರೇಗಾ ಯೋಜನೆಯು ಅಂಗವಿಕಲರಿಗೂ ಚೈತನ್ಯ ನೀಡಿದ್ದು, ತಾಲ್ಲೂಕಿನ ವಿವಿಧ ಗ್ರಾಮಗಳ ಅಂಗವಿಕಲರು ನರೇಗಾದಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ.
ತಾಲ್ಲೂಕಿನ ಬಾಗೇವಾಡಿ ಗ್ರಾಮದ ಹೊನಕೇರೆಪ್ಪ ಭರಮಕ್ಕನವರ ಎಂಬ ಕಾರ್ಮಿಕನ ಒಂದು ಕಾಲು ಊನವಾಗಿದ್ದು, ನರೇಗಾ ಕಾರ್ಯದಲ್ಲಿ ತೊಡಗಿರುವ ಕೂಲಿ ಕಾರ್ಮಿಕರಿಗೆ ನೀರು ಸರಬರಾಜು ಮಾಡುತ್ತಿದ್ದಾರೆ. ಅದೇರೀತಿ, ಬಿದರಳ್ಳಿ ಗ್ರಾಮದ ಅಶೋಕ ಕೊಂಚಗೇರಿ ಎಂಬ ಪೊಲಿಯೋ ಪೀಡಿತ ಯುವಕ ಹಾಗೂ ಮುಂಡವಾಡ ಗ್ರಾಮದ ಅಂಗವಿಕಲ ಮಹಿಳೆ ಹಾಲವ್ವ ಹರಿಜನ ಮತ್ತಿತರರು ನರೇಗಾ ಯೋಜನೆಯಲ್ಲಿ ನಿಯಮಿತವಾಗಿ ಕೂಲಿ ಮಾಡುತ್ತಿದ್ದಾರೆ.
ಅರ್ಧ ಕೆಲಸ; ಪೂರ್ಣ ಕೂಲಿ: ನರೇಗಾ ಯೋಜನೆಯಲ್ಲಿ ಹಿರಿಯ ನಾಗರಿಕರು, ಗರ್ಭಿಣಿಯರು, ಬಾಣಂತಿಯರಿಗೆ, ಅಂಗವಿಕಲರಿಗೆ ಅರ್ಧದಿನ ಕೆಲಸ ಮಾಡಲು ಮಾತ್ರ ಅವಕಾಶವಿರುತ್ತದೆ. ಅವರು ಅರ್ಧದಿನ ಕೆಲಸ ಮಾಡಿದರೂ ಅವರಿಗೆ ಪೂರ್ಣ ಕೂಲಿ ನೀಡಲಾಗುತ್ತಿದೆ. ಇದು ಅವರೆಲ್ಲರಿಗೂ ವರದಾನವಾಗಿದ್ದು, ಅರ್ಧ ದಿನ ದುಡಿದು ಪೂರ್ಣವೇತನ ಪಡೆದುಕೊಳ್ಳುತ್ತಿದ್ದಾರೆ. ನರೇಗಾ ಯೋಜನೆಯು ಬಡವರಿಗೆ ಆಸರೆಯಾಗಿದ್ದು ಅದರಿಂದ ನಾವು ನೆಮ್ಮದಿಯಿಂದ ಬದುಕುವಂತಾಗಿದೆ. ಶಂಕರಪ್ಪ ಕೂಬಿಹಾಳ ಮುಂಡವಾಡ ಗ್ರಾಮದ ಕಾರ್ಮಿಕ
ನರೇಗಾ ಯೋಜನೆಯು ಬಡ ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಿ ತಮ್ಮ ಸ್ವಂತ ಊರಿನಲ್ಲಿಯೇ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡಿದೆವಿಶ್ವನಾಥ ಹೊಸಮನಿ ತಾಲ್ಲೂಕು ಪಂಚಾಯಿತಿ ಇಒ ಮುಂಡರಗಿ
ನರೇಗಾ ಯೋಜನೆಯು ಬಡವರಿಗೆ ಆಸರೆಯಾಗಿದ್ದು ಅದರಿಂದ ನಾವು ನೆಮ್ಮದಿಯಿಂದ ಬದುಕುವಂತಾಗಿದೆ.ಶಂಕರಪ್ಪ ಕೂಬಿಹಾಳ ಮುಂಡವಾಡ ಗ್ರಾಮದ ಕಾರ್ಮಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.